ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನೀರಿನ ಸಂಕಟ ದಿನಗಳಂತೆ ಹೆಚ್ಚಾಗುತ್ತಿದೆ. ಕೆಲವು ದಿನಗಳ ಹಿಂದೆ ಸರ್ವೋಚ್ಚ ನ್ಯಾಯಾಲಯ ಹಿಮಾಚಲ ಪ್ರದೇಶ ರಾಜ್ಯಕ್ಕೆ ದೆಹಲಿಗೆ ನೀರು ಬಿಡುವಂತೆ ಆದೇಶ ನೀಡಿತ್ತು. ಹಾಗೆಯೇ ನೀರು ಸರಿಯಾಗಿ ದೆಹಲಿಯನ್ನು ಸೇರುತ್ತಿದೆಯೇ ಎಂಬುದನ್ನು ನೋಡಲು ಹರಿಯಾಣ ರಾಜ್ಯಕ್ಕೆ ಸೂಚಿಸಿತ್ತು. ಹೀಗಾದರೂ ಕೂಡ ದೆಹಲಿಯಲ್ಲಿ ನೀರಿನ ಬಿಕ್ಕಟ್ಟನ್ನು ಸರಿಪಡಿಸಲು ದೆಹಲಿ ಸರ್ಕಾರ ಅಸಫಲವಾಗಿದೆ.
ಈ ಕುರಿತು ಸುಪ್ರೀಂ ಕೋರ್ಟ್ ದೆಹಲಿ ಸರ್ಕಾರಕ್ಕೆ ಛೀಮಾರಿ ಹಾಕಿದೆ. ದೆಹಲಿಯಲ್ಲಿ ಹೆಚ್ಚುತ್ತಿದೆ ವಾಟರ್ ಟ್ಯಾಂಕರ್ ಮಾಫಿಯಾ. ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಹಾಗೂ ಪ್ರಸನ್ನ ಬಿ ವರಾಲೆ ಅವರನ್ನು ಒಳಗೊಂಡಂತ ಪೀಠ ವಾಟರ್ ಟ್ಯಾಂಕರ್ ಮಾಫಿಯಾ ಕುರಿತು ದೆಹಲಿ ಸರ್ಕಾರಕ್ಕೆ ಪ್ರಶ್ನೆ ಮಾಡಿತ್ತು. ಇದಕ್ಕೆ ಸಂಬಂಧಿಸಿದಂತೆ ದೆಹಲಿ ಸರ್ಕಾರ ಪೀಠದ ಮುಂದೆ ಸುಳ್ಳು ಉತ್ತರ ನೀಡಿದೆ ಎಂದು ಪೀಠ ದೂಷಿಸಿದೆ.
“ಈ ನ್ಯಾಯಾಲಯದ ಮುಂದೆ ಸುಳ್ಳು ಹೇಳಿಕೆಗಳನ್ನು ಏಕೆ ನೀಡಲಾಯಿತು? ಹಿಮಾಚಲ ಪ್ರದೇಶದಿಂದ ನೀರು ಬರುತ್ತಿದೆ ಹಾಗಾದರೆ ದೆಹಲಿಯಲ್ಲಿ ನೀರು ಎಲ್ಲಿಗೆ ಹೋಗುತ್ತಿದೆ? ಇಷ್ಟೊಂದು ಸೋರಿಕೆ, ಟ್ಯಾಂಕರ್ ಮಾಫಿಯಾಗಳು ನಡೆಯುತ್ತಿವೆ. ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ? ಎಂದು ಪೀಠ ಪ್ರಶ್ನಿಸಿದೆ.
“ಜನರು ತೊಂದರೆ ಅನುಭವಿಸುತ್ತಿದ್ದಾರೆ, ನಾವು ಪ್ರತಿ ಸುದ್ದಿ ವಾಹಿನಿಗಳಲ್ಲಿ ಇದರ ಕುರಿತ ದೃಶ್ಯಗಳನ್ನು ನೋಡುತ್ತಿದ್ದೇವೆ. ಬೇಸಿಗೆಯಲ್ಲಿ ನೀರಿನ ಕೊರತೆ ಪದೇ ಪದೇ ಕಾಡುತ್ತಿದ್ದರೆ ನೀರು ವ್ಯರ್ಥವಾಗುವುದನ್ನು ನಿಯಂತ್ರಿಸಲು ನೀವು ಯಾವ ಕ್ರಮಗಳನ್ನು ಕೈಗೊಂಡಿದ್ದೀರಿ”. ಎಂದು ಪೀಠವು ಕೇಳಿದೆ.