ತೆರೆಗೆ ಬರಲು ಸಿದ್ದವಾದ “ಸ್ವಪ್ನ ಮಂಟಪ”: ಪಾರಂಪರಿಕ ಸ್ಥಳಗಳ ರಕ್ಷಣೆಯ ಕುರಿತ ವಿಭಿನ್ನ ಸಿನಿಮಾ ಹೇಗಿರಬಹುದು?!
ಬೆಂಗಳೂರು: ಮಲೈ ಮಹದೇಶ್ವರ ಎಂಟರ್ ಪ್ರೈಸಸ್ ಸಂಸ್ಥೆಯಿಂದ ಬಾಬು ನಾಯ್ಕ್ ಅವರ ನಿರ್ಮಾಣದ “ಸ್ವಪ್ನ ಮಂಟಪ” ಚಿತ್ರವು ಜುಲೈ 31ರಂದು ಸೆನ್ಸಾರ್ ಮಂಡಳಿಯಿಂದ `ಯು’ ಪ್ರಮಾಣಪತ್ರವನ್ನು ಪಡೆದು ತೆರೆಗೆ ಬರಲು ಸಜ್ಜಾಗಿದೆ. ಈ ಚಿತ್ರವು ಬರಗೂರು ರಾಮಚಂದ್ರಪ್ಪನವರು ಅವರದೇ ಆದ ಕಾದಂಬರಿಯನ್ನು ಆಧರಿಸಿ, ಚಿತ್ರಕತೆ, ಸಂಭಾಷಣೆ, ಮತ್ತು ಗೀತರಚನೆಯ ಜೊತೆಗೆ ನಿರ್ದೇಶನ ಮಾಡಿರುವ ವಿಶೇಷ ಚಿತ್ರವಾಗಿದೆ.
“ಸ್ವಪ್ನ ಮಂಟಪ” ಕಥೆಯು ಪಾರಂಪರಿಕ ಸ್ಥಳಗಳ ಮಹತ್ವ ಮತ್ತು ಅವುಗಳ ಸಂರಕ್ಷಣೆಯ ಅಗತ್ಯವನ್ನು ಒತ್ತಿಹೇಳುತ್ತದೆ. ರಾಜನೊಬ್ಬ ನಿರ್ಮಿಸಿದ ಪಾರಂಪರಿಕ ಮಂಟಪವನ್ನು ಉಳಿಸಲು ನಾಯಕ-ನಾಯಕಿ ತಮ್ಮ ಹಳ್ಳಿಯ ಜನರನ್ನು ಸಂಘಟಿಸುತ್ತಾರೆ. ಈ ಕಥಾವಸ್ತುವು ಪಾರಂಪರಿಕ ಸ್ಥಳಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಪ್ರಮುಖ ಸಂದೇಶವನ್ನು ತಂದುಕೊಡುತ್ತದೆ.
ವಿಜಯ ರಾಘವೇಂದ್ರ ಮತ್ತು ರಂಜಿನಿ ರಾಘವನ್ ದ್ವಿಪಾತ್ರಗಳಲ್ಲಿ ಅಭಿನಯಿಸಿದ್ದು, ಅವರ ನೈಜ ನಟನೆ ಸಿನಿಮಾವನ್ನು ಮತ್ತಷ್ಟು ವಿಶೇಷ ಮಾಡಿದೆ. ಚಿತ್ರದ ತಾರಾಬಳಗದಲ್ಲಿ ಸುಂದರರಾಜ್, ಶೋಭಾ ರಾಘವೇಂದ್ರ, ಅಂಬರೀಶ್ ಸಾರಂಗಿ, ಮೈಸೂರು ಮಂಜುಳ ಮುಂತಾದ ಹಿರಿಯ ನಟರು ಭಾಗಿಯಾಗಿದ್ದಾರೆ.
ಚಿತ್ರದ ಸಂಗೀತವನ್ನು ಶಮಿತಾ ಮಲ್ನಾಡ್ ಸಂಯೋಜಿಸಿದ್ದು, ನಾಗರಾಜ್ ಆದವಾನಿ ಛಾಯಾಗ್ರಹಣವನ್ನು ನಿರ್ವಹಿಸಿದ್ದಾರೆ. “ಸ್ವಪ್ನ ಮಂಟಪ” ಚಿತ್ರದ ನಿರ್ದೇಶನ, ಸಂಭಾಷಣೆ, ಮತ್ತು ನಿರೂಪಣೆಯ ಮೂಲಕ ಬರಗೂರು ರಾಮಚಂದ್ರಪ್ಪ ಅವರು ಚಿತ್ರರಂಗದಲ್ಲಿ ಮತ್ತೆ ತಮ್ಮ ಹೆಸರನ್ನು ನೆನಪಿಸಿದ್ದಾರೆ.