ಅಪಹರಿಸಿದ ವ್ಯಕ್ತಿಯನ್ನು ಬಿಟ್ಟು ಬರಲು ಒಲ್ಲೆ ಎಂದ ಬಾಲಕ: ಶಾಕ್ ಆದ ಪೋಲಿಸರು!

ಜೈಪುರ್: ಒಂದು ವರ್ಷ ಹಿಂದೆಯೇ ಕಿಡ್ನ್ಯಾಪ್ ಆದ ಪ್ರಥ್ವಿ ಎಂಬ 11 ತಿಂಗಳ ಬಾಲಕನಿಗೆ ಅಪಹರಣಕಾರನೊಂದಿಗೆ ಉಂಟಾದ ಭಾವನಾತ್ಮಕ ಸಂಬಂಧದ ಕಥೆ ಇದೀಗ ದೇಶದಲ್ಲೆಲ್ಲಾ ಚರ್ಚೆಯಾಗುತ್ತಿದೆ. ಸಾಂಗನೇರ್ ಪೊಲೀಸ್ ಠಾಣೆಯ ತಂಡವು ಜೈಪುರದಲ್ಲಿ ನಡೆದ ಈ ಅಪಹರಣ ಪ್ರಕರಣವನ್ನು ಭೇದಿಸಿ ಅಪಹರಣಗೊಳಿಸಿದ್ದ ಬಾಲಕನನ್ನು ಪತ್ತೆಹಚ್ಚಿದೆ. ಆದರೆ, ಪೊಲೀಸರಿಗೆ ಅಲ್ಲಿ ಎದುರಾದ ದೃಶ್ಯ ಮನಕಲುಕುವಂತಿತ್ತು, ಬಾಲಕ ಪ್ರಥ್ವಿ ತನ್ನ ಅಪಹರಣಕಾರ ತನುಜ್ ಚಹರ್‍ನನ್ನು ಬಿಟ್ಟು ಬರುವುದಕ್ಕೆ ನಿರಾಕರಿಸಿದ.
ಅಪಹರಣಕಾರ ತನುಜ್, ಉತ್ತರ ಪ್ರದೇಶದ ಆಗ್ರಾದವರಾಗಿದ್ದು, ಅಲಿಗಢದಲ್ಲಿ ಮುಖ್ಯ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ. ತಾನು ಅಪಹರಣ ಮಾಡಿ ಜೈಪುರದಿಂದ ತಪ್ಪಿಸಿಕೊಂಡು, ಯಮುನಾ ನದಿಯ ಪಕ್ಕದಲ್ಲಿ ವಾಸವಿದ್ದು, ತಮ್ಮ ಗುರುತು ಮರೆಮಾಸಿಕೊಳ್ಳಲು ಉದ್ದವಾದ ದಾಡಿಯನ್ನು ಬೆಳೆಸಿಕೊಂಡಿದ್ದರು. ಮೊಬೈಲ್ ಬಳಸದೆ, ನಿತ್ಯ ಸ್ಥಳ ಬದಲಾಯಿಸಿ, ತಮ್ಮ ಗುರುತನ್ನು ಗೌಪ್ಯವಾಗಿ ಇಡಲು ಹಲವು ಕ್ರಮಗಳನ್ನು ಅನುಸರಿಸಿದ್ದರು.
ಆದರೂ, ಕೊನೆಗೂ ಅಲಿಗಢದಲ್ಲಿ ತನುಜ್ ಇರುವ ಮಾಹಿತಿ ಸಿಕ್ಕಿದ್ದು, ತಕ್ಷಣ ಪೊಲೀಸರು ಅವರನ್ನು ಹಿಡಿಯಲು ಮುಂದಾದಾಗ, ತನುಜ್ ಬಾಲಕನನ್ನು ಕೈಯಲ್ಲಿ ಹಿಡಿದು 8 ಕಿಮೀ ದೂರ ಓಡಿದರು ಎನ್ನಲಾಗಿದೆ. ಹತ್ತಿರದ ಹೊಲಗಳಲ್ಲಿ ಬೆನ್ನಟ್ಟಿ ಕೊನೆಗೂ ತನುಜ್ ವಶಕ್ಕೆ ಸಿಕ್ಕಿದ್ದ, ತದನಂತರ ಬಾಲಕನನ್ನು ತಾಯಿ ಪೂನಂ ಚೌಧರಿಯವರ ಬಳಿ ಹಸ್ತಾಂತರಿಸಲಾಯಿತು.
ಪೊಲೀಸರ ವರದಿ ಪ್ರಕಾರ, ತನುಜ್, ಬಾಲಕನನ್ನು ತಮ್ಮ ಮಗನಂತೆ ನೋಡಿಕೊಳ್ಳುತ್ತಿದ್ದರು. ಪ್ರಥ್ವಿ ಕೂಡ ತನುಜ್‍ನನ್ನು ಬಿಟ್ಟುಕೊಡಲು ಇಚ್ಛಿಸದ ಕಾರಣ, ಆತನ ಪ್ರೀತಿಗೆ ಪ್ರಥ್ವಿ ಕೂಡ ಭಾವನಾತ್ಮಕವಾಗಿ ಪ್ರಭಾವಿತನಾಗಿದ್ದನು.
ಈ ಘಟನೆ ದೇಶಾದ್ಯಾಂತ ಕುತೂಹಲ ಮೂಡಿಸಿದ್ದು, ಪ್ರೀತಿ ವಾತ್ಸಲ್ಯದ ಬಂಧನಕ್ಕೆ ಜನರು ತಲೆ ಬಾಗಿದ್ದಾರೆ.