ಗೋಪಿಲೋಲ ಚಿತ್ರದ ಟ್ರೇಲರ್ ಬಿಡುಗಡೆ: ಅಪ್ಪಟ ಕೃಷಿ ಆಧಾರಿತ ಪ್ರೇಮಕಥೆ ನೋಡಲು ಪ್ರೇಕ್ಷಕರ ಕ್ಷಣಗಣನೆ..!
ಬೆಂಗಳೂರು: ಬಹುನಿರೀಕ್ಷಿತ “ಗೋಪಿಲೋಲ” ಚಿತ್ರದ ಟ್ರೇಲರ್ ಚಂದನವನದ ಗಣ್ಯರಿಂದ ಅದ್ದೂರಿಯಾಗಿ ಬಿಡುಗಡೆಯಾಗಿ, ಕನ್ನಡ ಸಿನಿಮಾ ಪ್ರೇಕ್ಷಕರಲ್ಲಿ ಕುತೂಹಲವನ್ನು ಹೆಚ್ಚಿಸಿದೆ. ಚಿತ್ರವು ಅಕ್ಟೋಬರ್ 4ರಂದು ತೆರೆಗೆ ಬರಲಿದ್ದು, ಟ್ರೇಲರ್, ಹಾಡುಗಳು ಮತ್ತು ಟೀಸರ್ ಮೂಲಕವೇ ಜನರ ಮನಸ್ಸಿಗೆ ಹತ್ತಿರವಾಗಿದೆ.
“ಗೋಪಿಲೋಲ” ಚಿತ್ರವನ್ನು ಸುಕೃತಿ ಚಿತ್ರಾಲಯದ ಬ್ಯಾನರ್‌ನಲ್ಲಿ ಎಸ್.ಆರ್. ಸನತ್ ಕುಮಾರ್ ಹಾಗೂ ಮಂಜುನಾಥ್ ಅರಸು ನಿರ್ಮಾಣ ಮಾಡಿದ್ದಾರೆ, ಮತ್ತು ನಿರ್ದೇಶನವನ್ನು ಆರ್. ರವೀಂದ್ರ ಮಾಡಿದ್ದಾರೆ. ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಎಸ್.ವಿ.ರಾಜೇಂದ್ರಸಿಂಗ್ ಬಾಬು, ದೊಡ್ಡಣ್ಣ, ಶ್ರೀನಗರ ಕಿಟ್ಟಿ, ಪಿ.ಸಿ.ಶೇಖರ್ ಮುಂತಾದ ಗಣ್ಯರು ಭಾಗವಹಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದರು.
ಕೃಷಿ ಆಧಾರಿತ ಪ್ರೇಮಕಥೆ:
ನೈಸರ್ಗಿಕ ಕೃಷಿಯ ಹಿನ್ನೆಲೆಯಾದ ಈ ಚಿತ್ರವು ಪ್ರೇಮಕಥೆಯೊಂದಿಗೆ ಕೌಟುಂಬಿಕ ಹಾಗೂ ಹೃದಯಸ್ಪರ್ಶಿ ಕಂಟೆಂಟ್ ಹೊಂದಿದ್ದು, ಪ್ರೇಕ್ಷಕರಿಗೆ ಒಂದೊಳ್ಳೆ ಸಂದೇಶವನ್ನೂ ನೀಡಲಿದೆ ಎಂದು ನಿರ್ದೇಶಕ ಆರ್. ರವೀಂದ್ರ ಹೇಳಿದರು. ನಿರ್ಮಾಪಕ ಹಾಗೂ ಕಥೆಯ ಕರ್ತೃ ಎಸ್.ಆರ್. ಸನತ್ ಕುಮಾರ್ ತಮ್ಮ ಕೃಷಿ ಕುಟುಂಬದಿಂದ ಪ್ರೇರಣೆ ಪಡೆದು ಈ ಚಿತ್ರವನ್ನು ತಯಾರಿಸಿದ್ದಾಗಿ ಹೇಳಿದರು.
ನಾಯಕ ಮಂಜುನಾಥ್ ಅರಸ್ ಹೇಳಿದಂತೆ, “ಗೋಪಿಲೋಲ” ಚಿತ್ರವು ಆಕ್ಷನ್, ಲವ್, ಸಸ್ಪೆನ್ಸ್ ಹೀಗೆ ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳನ್ನೂ ಹೊಂದಿದ್ದು, ಉತ್ತಮ ಕಥೆ ಮತ್ತು ನಿರೂಪಣೆಯು ಚಿತ್ರದ ಹೀರೋ ಆಗಿದೆ.