Alma Corner

ಕಾಣದ ಬದುಕು…! ಕಾಣಿಸದಷ್ಟು ಕನಸು…!

ನಮ್ಮ ಸಮಾಜದ ಮೂರನೇ ವ್ಯಕ್ತಿಯಾಗಿರುವ ಇವರನ್ನು ಹಲವಾರು ವಿಭಿನ್ನ ಹೆಸರಿನಿಂದ ಕರೆಯುತ್ತಾರೆ. ಕೆಲವರು ಹಿಜಡಾ ಅಂತಾರೆ, ಕೆಲವರು ಚಕ್ಕಾ ಮತ್ತೆ ಕೆಲವರು ಮಂಗಳಮುಖಿಯರು ಅಂತಲೂ ಸಹ ಕರೆಯುತ್ತಾರೆ.

ಜನಸಾಮಾನ್ಯರಲ್ಲಿ ಮಂಗಳಮುಖಿಯರ ಬಗ್ಗೆ ತಪ್ಪು ಕಲ್ಪನೆಗಳಿವೆ, ಸಮಾಜವು ಇವರನ್ನು ಬೇರೆಯದೇ ರೀತಿಯಲ್ಲಿ ಸ್ವೀಕರಿಸುತ್ತಿದೆ. ಅಲ್ಲದೇ ತೃತೀಯ ಲಿಂಗಿಗಳನ್ನು ತೀರಾ ಹೀನಾಯವಾಗಿ ನಡೆಸಿಕೊಳ್ಳುವ ಕಾಲವೊಂದಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ ಮಂಗಳಮುಖಿಯರ ಮೇಲಿರುವ ಅಭಿಪ್ರಾಯ ಕೊಂಚ ಬದಲಾಗುತ್ತಿದೆ.

ಮಂಗಳಮುಖಿಯರ ಜೀವನ ಕೆಲವು ನಿಗೂಢತೆಗಳಿಂದ ಕೂಡಿದೆ. ಇವರನ್ನು ಅರ್ಧನಾರೀಶ್ವರ ಸ್ವರೂಪ ಎಂದೂ ಸಹ ಬಿಂಬಿಸಲಾಗಿದೆ. ಮಂಗಳಮುಖಿಯರ ಶಾಪಕ್ಕೂ-ವರಕ್ಕೂ ವಿಶೇಷವಾದ ಶಕ್ತಿ ಇದೆ ಎಂತಲೂ ಜನರು ನಂಬುತ್ತಾರೆ.

ಮಂಗಳಮುಖಿಯರು ಚಪ್ಪಾಳೆ ಹೊಡೆಯುವ ಶೈಲಿ ವಿಭಿನ್ನವಾಗಿರುತ್ತದೆ. ಮಂಗಳಮುಖಿಯರು ಯಾವುದೇ ಅರ್ಥವಿಲ್ಲದೆ ಚಪ್ಪಾಳೆ ತಟ್ಟುವುದಿಲ್ಲ. ಆ ಚಪ್ಪಾಳೆಗೂ ಮಂಗಳಮುಖಿ ಸಮುದಾಯಕ್ಕೂ ವಿಶೇಷ ಸಂಬಂಧವಿದೆ. ಈ ವಿಶೇಷ ಶೈಲಿಯ ಚಪ್ಪಾಳೆ ಅವರ ಐಡೆಂಟಿಟಿಯೊಂದಿಗೆ ಸಂಬಂಧ ಹೊಂದಿದೆ. ಯೋಗಾಚಾರ್ಯರ ಪ್ರಕಾರ ಮಂಗಳಮುಖಿಯರಿಗೆ ಸುಲಭವಾಗಿ ಖಾಯಿಲೆ ಬರುವುದಿಲ್ಲ, ಅದಕ್ಕೆ ಕಾರಣ ಅವರು ತಟ್ಟುವ ಚಪ್ಪಾಳೆ. ವಾಸ್ತವವಾಗಿ ಚಪ್ಪಾಳೆ ಅವರಿಗೆ ಅಕ್ಯುಪ್ರೆಶರ್‌ ಚಿಕಿತ್ಸೆಯಾಗಿದೆ.

ಮಂಗಳಮುಖಿರಯರ ರಾಮನ ಭಕ್ತಿಗೂ ಒಂದು ನಂಟಿದೆ ಎನ್ನಲಾಗುತ್ತದೆ. ರಾಮ ೧೪ ವರ್ಷಗಳ ಕಾಲ ವನವಾಸಕ್ಕೆ ಹೋಗಬೇಕಾದರೆ ಊರಿನ ಜನರೆಲ್ಲಾ ರಾಮ, ಸೀತೆ ಮತ್ತು ಲಕ್ಷ್ಮಣರನ್ನು ಕಳುಹಿಸಿಕೊಡಲು ಊರಿನ ಗಡಿವರೆಗೂ ಹೋಗುತ್ತಾರೆ, ಆಗ ರಾಮ ಎಲ್ಲರಿಗೂ ಒಂದು ಮಾತು ಹೇಳುತ್ತಾನೆ. ʼಇದು ನಾನು ಹೋಗುತ್ತಿರುವ ವನವಾಸ ನನಗಾಗಿ ಯಾರೂ ಕೂಡ ಈ ಊರಿನ ಗಡಿ ದಾಟಿ ಕಾಡಿಗೆ ಬರಬಾರದು ನಿಮ್ಮ ನಿಮ್ಮ ಹೆಂಡತಿ ಮತ್ತು ಮಕ್ಕಳನ್ನು ಗಂಡಂದಿರು ಕರೆದುಕೊಂಡು ಮನೆಗೆ ಹೋಗಿ ಹಾಗೆ ನಿಮ್ಮ ಗಂಡಂದಿರು ಮತ್ತು ಮಕ್ಕಳನ್ನು ಹೆಂಡತಿಯರು ಕರೆದುಕೊಂಡು ಮನೆಗೆ ಹೋಗಿ ಎಂದು ಬರಿ ಹೆಂಗಸರಿಗೆ ಮತ್ತು ಗಂಡಸರಿಗೆ ಮಾತ್ರ ಹೇಳುತ್ತಾರೆʼ. ಆದರೆ ಮಂಗಳಮುಖಿಯರಿಗೆ ಹೇಳಲಿಲ್ಲ, ಆದ್ದರಿಂದ ರಾಮ ನಮಗೆ ಮನೆಗೆ ಹೋಗಲು ಅಪ್ಪಣೆ ಕೊಟ್ಟಿಲ್ಲ ಎಂದು ಮಂಗಳಮುಖಿಯರೆಲ್ಲರೂ ಗಡಿಯಲ್ಲಿ ೧೪ ವರ್ಷಗಳ ಕಾಲ ರಾಮನಿಗಾಗಿ ಕಾಯುತ್ತಾರೆ. ಈ ಸಮಯದಲ್ಲಿ ಅದೆಷ್ಟೋ ಮಂಗಳಮುಖಿಯರು ಜೀವತ್ಯಾಗ ಮಾಡುತ್ತಾರೆ. ರಾಮ ವನವಾಸದಿಂದ ಹಿಂದಿರುಗಿದಾಗ ಊರಿನ ಜನರೆಲ್ಲಾ ಸ್ವಾಗತಿಸಲು ಬರುತ್ತಾರೆ ಆಗ ರಾಮನ ಕಣ್ಣಿಗೆ ಮೊದಲು ಕಂಡದ್ದು ಜೀವ ಬಿಟ್ಟಿರುವ ಮಂಗಳಮುಖಿಯರ ಅಸ್ಥಿಪಂಜರಗಳು. ಏನಾಯಿತು ಎಂದು ರಾಮ ಕೇಳಿದಾಗ ನಡೆದ ವಿಷಯವನ್ನು ಊರಿನ ಜನರು ರಾಮನಿಗೆ ತಿಳಿಸುತ್ತಾರೆ. ಮನನೊಂದ ರಾಮ ಮಂಗಳಮುಖಿಯರಿಗೆ ಹೀಗೆ  ಒಂದು ವರ ನೀಡುತ್ತಾನೆ “ನೀವು ಮನಸ್ಸಿನಿಂದ ಒಳ್ಳೆಯದನ್ನು ಹರಸಿದರೆ ಒಳ್ಳೆಯದಾಗಲಿ ಹಾಗೂ ಮನನೊಂದು ಶಪಿಸಿದರೆ ಕೆಟ್ಟದ್ದಾಗಲಿ” ಎಂದು.

ಮಂಗಳಮುಖಿಯರ ಶವವನ್ನು ಹಗಲಿನಲ್ಲಿ ಶವಯಾತ್ರೆ ಮಾಡುವುದಿಲ್ಲ, ಮಂಗಳಮುಖಿಯರ ಸಾವು ಜನಸಾಮಾನ್ಯರಿಗೆ ತಿಳಿಯುವುದಿಲ್ಲ. ಇವರ ಶವವನ್ನು ರಾತ್ರಿಯ ವೇಳೆಯಲ್ಲೇ ಅಂತ್ಯಸಂಸ್ಕಾರ ಮಾಡುತ್ತಾರೆ. ಏಕೆಂದರೆ ಯಾವುದೇ ವ್ಯಕ್ತಿ ಮಂಗಳಮುಖಿಯ ಶವವನ್ನು ನೋಡಿದರೆ ಆವರು ಮುಂದಿನ ಜನ್ಮದಲ್ಲಿ ಮಂಗಳಮುಖಿಯಾಗಿ ಜನಿಸುತ್ತಾರೆ ಎಂದು ಹೇಳಲಾಗುತ್ತದೆ. ಹಾಗೆಯೇ ಮಂಗಳಮುಖಿಯ ಶವಕ್ಕೆ ಚಪ್ಪಲಿಯಿಂದ ಹೊಡೆಯುತ್ತಾರೆ ಕಾರಣ ನೀನು ಮಾಡಿದ ಪಾಪಗಳೆಲ್ಲಾ ಈ ಜನ್ಮಕ್ಕೆ ಕೊನೆಯಾಗಲಿ, ಮುಂದಿನ ಜನ್ಮದಲ್ಲಿ ನೀನು ಮಂಗಳಮುಖಿಯಾಗಿ ಹುಟ್ಟಬೇಡ ಈ ಜನ್ಮ ಇಲ್ಲಿಗೆ ಕೊನೆಯಾಗಲಿ ಎಂದು ಹೇಳುತ್ತಾರೆ.

ಮಂಗಳಮುಖಿಯರು ಯಾವುದರಲ್ಲೂ ಕಡಿಮೆ ಇಲ್ಲ ಎನ್ನುವಷ್ಟರ ಮಟ್ಟಿಗೆ ಸಾಧನೆ ಮಾಡಿದ್ದಾರೆ. ಮಾತಾ.ಬಿ.ಮಂಜಮ್ಮ ಜೋಗತಿ ಪದ್ಮಶ್ರೀ ಪಡೆದುಕೊಂಡಿದ್ದಾರೆ, ಸತ್ಯಶ್ರೀ ಶರ್ಮಿಳಾ ಭಾರತದ ಮೊದಲ ಲಾಯರ್‌, ಜ್ಯೋತಿ ಮೊಂಡಲ್‌ ಭಾರತದ ಮೊದಲ ನ್ಯಾಯಾಧೀಶೆ, ಪ್ರಿತಿಕ ಯಶಿಣಿ ಭಾರತದ ಮೊದಲ ಪೊಲೀಸ್‌ ಆಫೀಸರ್‌, ಮನಬಿ ಬಂಡೋಪಾದ್ಯ ಭಾರತದ ಮೊದಲ ಕಾಲೇಜು ಪ್ರಾಚಾರ್ಯರು, ಮುಮ್ತಾಜ್‌ ಭಾರತದ ಮೊದಲ ಎಮ್‌ಎಲ್‌ಎ, ಶಬಿ ಭಾರತದ ಮೊದಲ ಸೈನಿಕರು, ಜಿಯಾ ದಾಸ್‌ ಭಾರತದ ಮೊದಲ ವೈದ್ಯಕೀಯ ಸಹಾಯಕರು, ಹೀಗೆ ಇನ್ನೂ ಅನೇಕ ಮಂಗಳಮುಖಿಯರು ವಿಭಿನ್ನ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ.

ಮಂಗಳಮುಖಿಯರ ಸಮುದಾಯದ ಬಗ್ಗೆ ಕನ್ನಡದಲ್ಲಿ “ನಾನು ಅವಳಲ್ಲ ಅವನು” ಎಂಬ ಅಧ್ಬುತ ಸಿನಿಮಾ ಕೂಡ ತೆರೆಕಂಡಿದೆ.

ಮಂಗಮುಖಿಯರಿಗೂ ಮನಸ್ಸಿದೆ ಅವರಿಗೂ ಸಹ ಸಮಾಜದಲ್ಲಿ ಬದುಕುವ ಹಕ್ಕಿದೆ, ಎಲ್ಲರಂತೆಯೇ ಅವರಿಗೂ ಭಾವನೆಗಳಿವೆ ಅದನ್ನು ಹಂಚಿಕೊಳ್ಳುವ ಮನಸ್ಸು ಬೇಕಾಗಿದೆ. ಅವರ ಮಾತುಗಳನ್ನು ಆಲಿಸಲು ಸಮಾಜ ಕಿವಿ ಕೊಡಬೇಕಾಗಿದೆ. ಆದರೆ ಮಂಗಳಮುಕಿಯರ ವಿಷಯದಲ್ಲಿ ಸಮಾಜದ ಪರಿಕಲ್ಪನೆಯೇ ಬೇರೆಯಾಗಿದೆ.

“ಅವರನ್ನು ಅವರಾಗಿಯೇ ಇರಲು ಬಿಡಿ…ಬದುಕಲಿ ಬಿಡಿ”

Show More

Leave a Reply

Your email address will not be published. Required fields are marked *

Related Articles

Back to top button