ಅಧಿಕಾರಕ್ಕೇರುತ್ತಿದಂತೆಯೇ ಜಗತ್ತಿಗೆ ಶಾಕ್ ನೀಡುತ್ತಿರುವ ಟ್ರಂಪ್..!!

ಟ್ರಂಪ್ ಅಧಿಕಾರಕ್ಕೆ ಬಂದು ತಿಂಗಳು ಕಳೆಯುವುದರೊಳಗಾಗಿ ತೆಗೆದುಕೊಳ್ಳುತ್ತಿರುವ ಹಲವು ನಿರ್ಣಯಗಳು, ಜಗತ್ತಿನೆಲ್ಲೆಡೆ ಕೋಲಾಹಲ ಸೃಷ್ಟಿಸುತ್ತಿವೆ. ಅದರಲ್ಲಿ ಮೊದಲೆನೆಯದು ಅಮೆರಿಕಾದಲ್ಲಿರುವ ಅಕ್ರಮ ವಲಸಿಗರ ಹೊರಹಾಕುವಿಕೆ. ಅಕ್ರಮ ವಲಸಿಗರ ಬಗ್ಗೆ ಮೊದಲಿನಿಂದಲೂ ಕಿಡಿ ಕಾರುತ್ತಿದ್ದ ಟ್ರಂಪ್, ತಮ್ಮ ಚುನಾವಣಾ ರ್ಯಾಲಿಗಳಲ್ಲೂ ಈ ಬಗ್ಗೆ ಪ್ರಸ್ತಾಪಿಸಿದ್ದರು. ತಾವು ಅಧಿಕಾರಕ್ಕೆ ಬಂದರೆ, ಅಮೆರಿಕಾದಲ್ಲಿರುವ ಅಕ್ರಮ ವಲಸಿಗರನ್ನು ಗಡಿಪಾರು ಮಾಡುತ್ತೇನೆ ಎನ್ನುವ ವಾಗ್ದಾನ ನೀಡಿದ್ದರು. ಅದರಂತೆ ಈಗ ಟ್ರಂಪ್ ಅಧಿಕಾರಕ್ಕೆ ಬರುತ್ತಿದ್ದಂತೆ, ಅಕ್ರಮ ವಲಸಿಗರ ಗಡಿಪಾರು ಪ್ರಕ್ರಿಯೆ ಆರಂಭವಾಗಿದೆ. ಅಮೆರಿಕಾದಲ್ಲಿ ಅಕ್ರಮವಾಗಿ ನೆಲೆಸಿರುವ ಭಾರತೀಯರೂ ಸೇರಿದಂತೆ, ಇತರ ದೇಶಗಳ ಅಕ್ರಮ ವಲಸಿಗರ ಕೈಕಾಲುಗಳಿಗೆ ಕೋಳ ತೊಡಿಸಿ, ಅವರನ್ನು ಮಿಲಿಟರಿ ವಿಮಾನಗಳ ಮೂಲಕ ಆಯಾ ದೇಶಗಳಿಗೆ ರವಾನಿಸೋ ಪ್ರಕ್ರಿಯೆ ನಡೆಯುತ್ತಿದೆ.

ಇನ್ನು ಹಡಗುಗಗಳಿಗೆ ಪ್ರಮುಖ ಸಂಚಾರೀ ಮಾರ್ಗವಾದ, ʼಪನಾಮಾʼ ಕಾಲುವೆಯನ್ನು ವಶಕ್ಕೆ ಪಡೆಯುತ್ತೇವೆ ಎಂದು ಟ್ರಂಪ್ ಘೋಷಿಸಿದ್ದರು. ಪನಾಮಾ ಚೈನಾದ ಅಣತಿಯಂತೆ ವರ್ತಿಸುತ್ತಿದೆ, ಇದು ಅಮೆರಿಕಾದ ಸುರಕ್ಷತೆಗೆ ಧಕ್ಕೆಯನ್ನುಂಟುಮಾಡಬಹುದು. ಹಾಗಾಗಿ ನಾವು ಈ ಕಾಲುವೆಯನ್ನು ವಶಕ್ಕೆ ಪಡೆಯುತ್ತಿದ್ದೇವೆ ಅನ್ನೋದು ಟ್ರಂಪ್ ವಾದವಾಗಿತ್ತು. ಆರಂಭದಲ್ಲಿ ಪನಾಮಾ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಆದರೆ ಅಮೇರಿಕಾದ ತೀವ್ರ ಒತ್ತಡ ಹಾಗೂ ಟ್ರಂಪ್ ತೆರಿಗೆ ಬೆದರಿಕೆಗೆ ಮಣಿದಿದ್ದ ಪನಾಮಾ ತಣ್ಣಗಾಗಿತ್ತು. ಅಷ್ಟೇ ಅಲ್ಲ, ಚೈನಾದ ʼBelt and roadʼ ಯೋಜನೆಯಿಂದಲೂ ತಾನು ಹೊರಬರೋದಾಗಿ ಪನಮಾ ಘೋಷಿಸಿದೆ!!
ಇರಾನ್ ಅಂದರೆ ಟ್ರಂಪ್ʼಗೆ ಮೊದಲಿನಿಂದಲೂ ಅಷ್ಟಕ್ಕಷ್ಟೇ. ಇರಾನ್ ಮೇಲೆ ಟ್ರಂಪ್, ಟ್ರಂಪ್ ಮೇಲೆ ಇರಾನ್ ಸದಾ ಕಾಲ ಪರಸ್ಪರ ಕತ್ತಿ ಮಸೆಯುತ್ತಲೇ ಇರುತ್ತಾರೆ. ಅದರಲ್ಲೂ ಟ್ರಂಪ್, ಇರಾನ್ ಸೇನಾ ಜನರಲ್ ʼಖಾಸಿಂ ಸುಲೇಮಾನಿʼ ಹತ್ಯೆ ಮಾಡಿಸಿದ ಮೇಲಂತೂ, ಟ್ರಂಪ್ ವಿರುದ್ಧ ಪ್ರತೀಕಾರಕ್ಕಾಗಿ ಹಾತೊರೆಯುತ್ತಿದೆ ಇರಾನ್. ಈ ಹಿಂದೆ ನಡೆದ ಟ್ರಂಪ್ ಹತ್ಯಾ ಪ್ರಯತ್ನದಲ್ಲೂ ಇರಾನ್ ಕೈವಾಡ ಇದೆ ಅಂತಲೇ ಹೇಳಲಾಗುತ್ತಿತ್ತು. ಈಗ ಇರಾನ್ ಮೇಲೆ ಮತ್ತಷ್ಟು ನಿರ್ಬಂಧ ವಿಧಿಸೋಕೆ ಸಜ್ಜಾಗುತ್ತಿದ್ದಾರೆ ಟ್ರಂಪ್!

ʼಗಲ್ಫ್ ಆಫ್ ಮೆಕ್ಸಿಕೋʼದ ಮೇಲೂ ಕಣ್ಣು ಹಾಕಿರುವ ಟ್ರಂಪ್, ಅದನ್ನು ʼಗಲ್ಫ್ ಆಫ್ ಅಮೆರಿಕಾʼ ಎಂದು ಕರೆಯಬೇಕು ಎಂದು ಆದೇಶ ಹೊರಡಿಸಿದ್ದರು. ಇದೀಗ ಟ್ರಂಪ್ ಆಜ್ನೆಯಂತೆ ಗೂಗಲ್ ಕೂಡ ʼಗಲ್ಫ್ ಆಫ್ ಮೆಕ್ಸಿಕೋʼದ ಹೆಸರನ್ನು ʼಗಲ್ಫ್ ಆಫ್ ಅಮೆರಿಕಾʼ ಎಂದು ಬದಲಾಯಿಸಿದೆ. ಇದಿಷ್ಟೇ ಅಲ್ಲ ಬ್ರಿಕ್ಸ್ ದೇಶಗಳು ತಮ್ಮದೇ ಕರೆನ್ಸಿ ಹೊಂದುವ ಬಗ್ಗೆಯೂ ಕಿಡಿಕಾರಿದ್ದ ಟ್ರಂಪ್, ಒಂದು ವೇಳೆ ಬ್ರಿಕ್ಸ್ ದೇಶಗಳು ಡಾಲರನ್ನು ಹೊರತುಪಡಿಸಿ, ತಮ್ಮದೇ ಕರೆನ್ಸಿ ಮೂಲಕ ವ್ಯವಹರಿಸಿದಲ್ಲಿ, ಅಂತಹ ದೇಶಗಳ ಮೇಲೆ 100% ತೆರಿಗೆ ಹಾಕೋದಾಗಿ ಬೆದರಿಕೆ ಒಡ್ಡಿದ್ದರು!
ಇದೀಗ ಡೆನ್ಮಾರ್ಕ್ ಹಿಡಿತದಲ್ಲಿರುವ ʼಗ್ರೀನ್ ಲ್ಯಾಂಡ್ʼನ್ನೂ ಕೂಡ ವಶಕ್ಕೆ ಪಡೆಯೋದಾಗಿ ಈಗಾಗಲೇ ಟ್ರಂಪ್ ಘೋಷಿಸಿದ್ದಾರೆ. ಒಂದು ವೇಳೆ ಡೆನ್ಮಾರ್ಕ್ ಇದಕ್ಕೆ ಒಪ್ಪಿಗೆ ನೀಡದಿದ್ದಲ್ಲಿ, ಅದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು, ಈಗಾಗಲೇ ಡೆನ್ಮಾರ್ಕ್ ಮೇಲೆ ಒತ್ತಡ ಹೇರೋ ಕಾರ್ಯವನ್ನೂ ಆರಂಭಿಸಿದ್ದಾರೆ ಟ್ರಂಪ್. ಆದರೆ ಗ್ರೀನ್ ಲ್ಯಾಂಡ್ ವಶಕ್ಕೆ ಪಡೆಯುವ ಟ್ರಂಪ್ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಡೆನ್ಮಾರ್ಕ್, ಕ್ಯಾಲಿಫೋರ್ನಿಯಾವನ್ನು ನಮ್ಮ ವಶಕ್ಕೆ ನೀಡಿ ಎಂದು ಹೊಸ ಕ್ಯಾತೆ ತೆಗೆದಿದೆ!!
ತನ್ನ ಹಿಂದಿನ ಆಡಳಿತ ಅವಧಿಯಲ್ಲಿಯೂ, ಚೈನಾದ ಜೊತೆ ನೇರ ವ್ಯಾಪಾರೀ ಸಮರಕ್ಕಿಳಿದಿದ್ದ ಟ್ರಂಪ್, ತಮ್ಮ ಈ ಅವಧಿಯಲ್ಲೂ ಅದನ್ನು ಮುಂದುವರೆಸುವ ಸೂಚನೆ ನೀಡಿದ್ದಾರೆ. ಅಧಿಕಾರಕ್ಕೆ ಬರುತ್ತಿದ್ದಂತೆಯೇ ಚೈನಾದ ಸರಕುಗಳ ಮೇಲೆ 10% ತೆರಿಗೆ ವಿಧಿಸಿರುವ ಟ್ರಂಪ್, ಚೈನಾ ಸರಕುಗಳ ಮೇಲೆ ಇನ್ನೂ ಹೆಚ್ಚಿನ ತೆರಿಗೆ ವಿಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ಇದಕ್ಕೆ ತೀಕ್ಣವಾಗಿ ಪ್ರತಿಕ್ರಿಯಿಸಿದ್ದ ಚೈನಾ, ಇದು ವಿಶ್ವಸಂಸ್ಥೆಯ ವ್ಯಾಪಾರೀ ಒಪ್ಪಂದದ ಸ್ಪಷ್ಟ ಉಲ್ಲಂಘನೆ ಎಂದು ಹೇಳಿತ್ತು. ಅಷ್ಟೇ ಅಲ್ಲ, ಅಮೆರಿಕಾದಿಂದ ಆಮದಾಗುವ ವಸ್ತುಗಳ ಮೇಲೆ ತಾನೂ 25% ತೆರಿಗೆ ವಿಧಿಸಿರುವುದಾಗಿ ಘೋಷಿಸಿತ್ತು ಚೈನಾ! ಅಷ್ಟೇ ಅಲ್ಲ ʼವಿಶ್ವ ಆರೋಗ್ಯ ಸಂಸ್ಥೆʼಗೆ ಹೆಚ್ಚು ಅನುದಾನ ನೀಡುತ್ತಿರೋದು ಅಮೆರಿಕಾವಾದ್ರೂ, WHO ಚೈನಾದ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂದು ಟ್ರಂಪ್ ದೂರಿದ್ದರು. ಹಾಗಾಗಿ, ಅಧಿಕಾರಕ್ಕೆ ಬರುತ್ತಿದ್ದಂತೆಯೇ ಅಮೆರಿಕಾ WHOದಿಂದ ಹೊರಬರೋ ನಿರ್ಧಾರ ಮಾಡಿದ್ದರು ಟ್ರಂಪ್!

ಈಗ ಅಮೆರಿಕಾಕ್ಕೆ ಆಮದಾಗೋ ಸ್ಟೀಲ್ ಮತ್ತು ಅಲ್ಯೂಮಿನಿಯಮ್ ಮೇಲೆ 25% ತೆರಿಗೆ ವಿಧಿಸಿ ಟ್ರಂಪ್ ಆದೇಶ ಹೊರಡಿಸಿದ್ದಾರೆ. ಇದು ಭಾರತದ ರಫ್ತಿನ ಮೇಲೂ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ. ಭಾರತ, ಬ್ರೆಜಿಲ್ ಮೊದಲಾದ ದೇಶಗಳು ಅಮೆರಿಕಾದ ಉತ್ಪನ್ನಗಳಿಗೆ ಅತಿ ಹೆಚ್ಚು ತೆರಿಗೆ ವಿಧಿಸುತ್ತಿವೆ. ಇದು ಇದೇ ರೀತಿ ಮುಂದುವರೆದರೆ, ನಾವೂ ಸಹ ಆ ದೇಶಗಳ ಮೇಲೆ ಅಷ್ಟೇ ಪ್ರಮಾಣದ ತೆರಿಗೆ ವಿಧಿಸಬೇಕಾಗುತ್ತದೆ ಎಂದು, ಈಗಾಗಲೇ ಎಚ್ಚರಿಕೆ ನೀಡಿದ್ದಾರೆ ಟ್ರಂಪ್. ಪ್ರಧಾನಿ ಮೋದಿಯವರ ಅಮೆರಿಕಾ ಭೇಟಿಯ ವೇಳೆ, ಇವೆಲ್ಲ ವಿಷಯಗಳು ಚರ್ಚೆಗೆ ಬರೋ ಸಾಧ್ಯತೆ ಇದೆ.
ಇನ್ನು ರಷ್ಯಾ – ಯುಕ್ರೇನ್ ಯುದ್ಧ ನಿಲ್ಲಿಸುವ ಬಗ್ಗೆಯೂ ಮಾತನಾಡಿರುವ ಟ್ರಂಪ್, ಈಗಾಗಲೇ ಪುತಿನ್ ಜೊತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ ಎನ್ನುವ ವರದಿಗಳೂ ಇವೆ. ಯುಕ್ರೇನ್ ಸೇರಿದಂತೆ, ಇತರ ದೇಶಗಳಿಗೆ ಅಮೆರಿಕಾ ನೀಡುತ್ತಿದ್ದ ಹಣಕಾಸು ನೆರವನ್ನು 90 ದಿನಗಳ ಮಟ್ಟಿಗೆ ತಾತ್ಕಾಲಿಕವಾಗಿ ತಡೆ ಹಿಡಿದಿದ್ದಾರೆ ಟ್ರಂಪ್.
ಒಟ್ಟಿನಲ್ಲಿ, ತಾನು ಅಧಿಕಾರಕ್ಕೆ ಬರುತ್ತಿದ್ದಂತೆಯೇ, ತನ್ನ ಆದೇಶಗಳ ಮೂಲಕ ಜಗತ್ತಿನೆಲ್ಲೆಡೆ ಕೋಲಾಹಲ ಸೃಷ್ಟಿಸುತ್ತಿದ್ದಾರೆ ಟ್ರಂಪ್. ತಮ್ಮ ʼಅಮೆರಿಕಾ ಫಸ್ಟ್ʼ ನೀತಿಯ ಮೂಲಕ, ಮುಂದಿನ ದಿನಗಳಲ್ಲಿ ಯಾವ ನಿರ್ಧಾರಗಳನ್ನು ಟ್ರಂಪ್ ಕೈಗೊಳ್ಳಲಿದ್ದಾರೆ!? ಟ್ರಂಪ್ ಬತ್ತಳಿಕೆಯಿಂದ ಮುಂದಿನ ದಿನಗಳಲ್ಲಿ ಯಾವ ರೀತಿಯ ಬಾಣಗಳು ಹೊರಬರಲಿವೆ ಅನ್ನೋದನ್ನ ಕಾದುನೋಡಬೇಕಾಗಿದೆ!!
ಗಜಾನನ ಭಟ್
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿ