ಅವೈಜ್ಞಾನಿಕ ರೋಡ್ ಅಗಲೀಕರಣ; ಜೀವ ತೆಗೆದುಕೊಂಡ ಐಆರ್‌ಬಿ ಕಂಪನಿ.
ಉತ್ತರ ಕನ್ನಡ: ಪಶ್ಚಿಮ ಘಟ್ಟಗಳು ಹಾದು ಹೋಗುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಅವೈಜ್ಞಾನಿಕ ರಸ್ತೆ ಅಗಲೀಕರಣದಿಂದ ಗುಡ್ಡ ಕುಸಿದು ಸುಮಾರು ಎಂಟರಿಂದ ಹತ್ತು ಜನ ಪ್ರಾಣ ಕಳೆದುಕೊಂಡಿದ್ದಾರೆ. ರಾಷ್ಟ್ರೀಯ ಚತುಷ್ಪಥ ರಸ್ತೆ ಯೋಜನೆಯಡಿಯಲ್ಲಿ, ಸುಮಾರು ಹತ್ತು ವರ್ಷಗಳಿಂದ ಕಾಮಗಾರಿಗಳನ್ನು ನಡೆಸುತ್ತಿರುವ ಐಆರ್‌ಬಿ ಕಂಪನಿ, ಪಶ್ಚಿಮ ಘಟ್ಟಗಳು ಹಾಗೂ ಅರಬೀ ಸಮುದ್ರ ಸೇರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಯಾವುದೇ ರೀತಿಯ ವೈಜ್ಞಾನಿಕ ಸಂಶೋಧನೆ ನಡೆಸದೆ ಕಾಮಗಾರಿಗಳನ್ನು ಕೈಗೊಂಡಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಈ ಕುರಿತು ಕಾರವಾರ ಮತ್ತು ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ. ಸತೀಶ್ ಸೈಲ್ ಅವರು ಮಾತನಾಡಿ, “ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಐಆರ್‌ಬಿ ಕಂಪನಿಯ ಕಾಮಗಾರಿ ಸರಿಯಾಗಿ ನಡೆದಿಲ್ಲ. ಹಾಗೂ ಈ ಕಾಮಗಾರಿಯು ಅವೈಜ್ಞಾನಿಕ ರೀತಿಯಿಂದ ಆಗಿದೆ. ಹಾಗೆಯೇ ಗುಡ್ಡದಿಂದ ಹರಿದು ಬರುವ ನೀರನ್ನು ಸಾಗಿಸಲು ಇರುವ ಪೈಪ್ ಅಳತೆ ಕೂಡ ಚಿಕ್ಕದಾಗಿದೆ. ಈ ಜಿಲ್ಲೆಯಲ್ಲಿ ಒಂದು ಕಡೆ ಗುಡ್ಡಗಳು ಇದ್ದರೆ, ಇನ್ನೊಂದು ಕಡೆ ಸಮುದ್ರವಿದೆ. ಅದೇ ರೀತಿ ಇಲ್ಲಿಯ ಸೀಬರ್ಡ್ ನೌಕಾನೆಲೆ ಕಟ್ಟಡಗಳು ಸಹ ಅವೈಜ್ಞಾನಿಕವಾಗಿದ್ದು, ಮುಂದೆ ಅಲ್ಲಿಯೂ ಸಹ ಈ ರೀತಿಯ ಘಟನೆಗಳು ಆಗಿಯೇ ಆಗುತ್ತದೆ.” ಎಂದು ಹೇಳಿದರು.
ಈ ರೀತಿಯ ಗುಡ್ಡ ಕುಸಿತಗಳನ್ನು ಕಂಡಾಗ ಗಾಡ್ಗೀಳ್ ವರದಿಯತ್ತ ರಾಜ್ಯ ಹಾಗೂ ಕೇಂದ್ರ ಸರ್ಕಾರ ನಿಷ್ಪಕ್ಷಪಾತವಾಗಿ ಗಮನ ಹರಿಸಲೇಬೇಕು ಎಂದೆನಿಸುತ್ತದೆ. ಪಶ್ಚಿಮ ಘಟ್ಟಗಳು ಅತ್ಯಂತ ನಾಜೂಕಾದ ಪ್ರದೇಶವಾಗಿದ್ದು, ಎಲ್ಲಿ ನಡೆಸುವ ಯಾವುದೇ ಕಾಮಗಾರಿಗಳು ಕೂಡ ಇಲ್ಲಿಯ ಪರಿಸರ ವ್ಯವಸ್ಥೆಯ ಮೇಲೆ ಹಾನಿ ಉಂಟು ಮಾಡುತ್ತದೆ. ಅದಕ್ಕಾಗಿ ಯಾವುದೇ ಅಭಿವೃದ್ಧಿ ಪರ ಯೋಜನೆಗಳನ್ನು ಈ ಪ್ರದೇಶಕ್ಕೆ ತರುವ ಮುಂಚೆ ಸರ್ಕಾರಗಳು ವೈಜ್ಞಾನಿಕ ಸಂಶೋಧನೆಗಳನ್ನು ಸಂಪೂರ್ಣಗೊಳಿಸಿ, ತದನಂತರ ಇಂತಹ ಯೋಜನೆಗಳನ್ನು ಜಾರಿಗೆ ತರಬೇಕು.