ಶಿಗ್ಗಾಂವಿ: ಕರ್ನಾಟಕ ರಾಜ್ಯದ ಉಪಚುನಾವಣೆಯಲ್ಲಿ ಶಿಗ್ಗಾಂವಿ ಕ್ಷೇತ್ರ ಎಲ್ಲರೂ ಗಮನ ಸೆಳೆದಿತ್ತು. ಈ ಕ್ಷೇತ್ರ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಕ್ಷೇತ್ರವಾಗಿತ್ತು. ಬಸವರಾಜ ಬೊಮ್ಮಾಯಿ ಅವರು 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಕಂಡ ನಂತರ, ಈ ಕ್ಷೇತ್ರ ಖಾಲಿಯಾಗಿತ್ತು. ಈ ಕಾರಣಕ್ಕಾಗಿ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ಉಂಟಾಯಿತು.
ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಕ್ಕೆ ಈ ಬಾರಿ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ್ ಬೊಮ್ಮಾಯಿ ಅವರು ಮೊಟ್ಟಮೊದಲ ಬಾರಿಗೆ ಚುನಾವಣೆಯ ಕಣದಲ್ಲಿ ಇಳಿದಿದ್ದರು. ಕಾಂಗ್ರೆಸ್ ಪರವಾಗಿ ಯಾಸಿರ್ ಪಠಾಣ್ ಅಧಿಕೃತ ಅಭ್ಯರ್ಥಿಯಾಗಿ ನಿಂತಿದ್ದರು. ಬಿಜೆಪಿಯವರು ಶಿಗ್ಗಾಂವಿ ವಿಧಾನಸಭಾ ಕ್ಷೇತ್ರ ಸುಲಭದ ತುತ್ತು ಎಂದು ಪರಿಗಣಿಸಿದ್ದರು. ಆದರೆ ಈ ಬಾರಿ ಮತದಾರ ಬಿಜೆಪಿಯ ಕನಸನ್ನು ನುಚ್ಚುನೂರು ಮಾಡಿದ್ದಾನೆ.
ವಕ್ಫ್ ಭೂಮಿ ದುರ್ಬಳಕೆ, ಭ್ರಷ್ಟಾಚಾರ ಹಗರಣಗಳು, ಹೀಗೆ ಹತ್ತು ಹಲವು ಆರೋಪಗಳನ್ನು ಕಾಂಗ್ರೆಸ್ ಮೇಲೆ ಹೊರಿಸಿದರೂ ಕೂಡ, ಮತದಾರ ಕಾಂಗ್ರೆಸ್ ಪಕ್ಷವನ್ನೇ ಆರಿಸಿ ತಂದಿದ್ದಾನೆ. ತಮ್ಮ ಸೋಲಿನ ಬಳಿಕ ಪ್ರತಿಕ್ರಿಯಿಸಿದ ಭರತ್ ಬೊಮ್ಮಾಯಿ, “ಕಾಂಗ್ರೆಸ್ ಪಕ್ಷ ಈ ಉಪಚುನಾವಣೆಯಲ್ಲಿ ಹಣವನ್ನು ಚೆಲ್ಲಿದೆ.” ಎಂದು ಆರೋಪಿಸಿದ್ದಾರೆ
“ಮುಂದೆಯೂ ಕೂಡ ಶಿಗ್ಗಾಂವಿಯ ಜನರ ಅಭಿವೃದ್ಧಿಗಾಗಿ ನಾನು ಸದಾ ನಿಂತಿರುತ್ತೇನೆ.” ಎಂದು ತಮ್ಮ ಬಿಜೆಪಿ ಕಾರ್ಯಕರ್ತರಿಗೆ ಹಾಗೂ ಶಿಗ್ಗಾಂವಿ ಮತದಾರರಿಗೆ ಭರವಸೆಯನ್ನು ನೀಡಿದ್ದಾರೆ ಭರತ್ ಬೊಮ್ಮಾಯಿ.