ಹವ್ಯಕ ಪರಂಪರೆ, ಸಂಸ್ಕೃತಿಯ ಅನಾವರಣ, ವಿಶ್ವ ಹವ್ಯಕ ಸಮ್ಮೇಳನದಲ್ಲಿ ಜನಸ್ತೋಮ…!

ತೃತೀಯ ವಿಶ್ವ ಹವ್ಯಕ ಸಮ್ಮೇಳ-2024 ಡಿ.27,28 ಮತ್ತು 29 ರಂದು ಬೆಂಗಳೂರಿನ ಅರಮನೆ ಮೈದಾನನದಲ್ಲಿ ನಡೆಯಿತು. ಒಂದೇ ಸೂರಿನಡಿ ಹವ್ಯಕ ಸಮುದಾಯದ ಹಲವು ವಿಶೇಷತೆಗಳು ನೋಡುಗರ ಕಣ್ಮನ ಸೆಯೆಯುತ್ತಿದ್ದವು. ಗ್ರಾಮೀಣ ಸೊಗಡಿನ ಆಲೆಮನೆ, ಮಲೆನಾಡು-ಕರಾವಳಿ ಭಾಗದ ಹವ್ಯಕರ ಪಾರಂಪರಿಕ ಖಾದ್ಯಗಳು, ಕರಕುಶಲ ವಸ್ತುಗಳು, ಸಿರಿಧಾನ್ಯದ ಉತ್ಪನ್ನಗಳು, ಯಕ್ಷಗಾನ ಕಲಾಕೃತಿಗಳು, ಅಡಕೆ ವಿಧಗಳ ಸಮಗ್ರ ದರ್ಶನಗಳು ಹವ್ಯಕ ಪರಂಪರೆಯನ್ನು ಬಿಂಬಿಸುತ್ತಿದ್ದವು.

ಸಮ್ಮೇಳನದಲ್ಲಿ ಜನರನ್ನು ಆಕರ್ಷಿಸಿದ್ದು ಗೋವುಗಳು. ಅಖಿಲ ಹವ್ಯಕ ಮಹಾಸಭೆ ಅವಕಾಶ ಮಾಡಿಕೊಟ್ಟಿದ್ದರಿಂದ ಈ ಸಮ್ಮೇಳನದಲ್ಲಿ ಗೋ ಪ್ರದರ್ಶನವನ್ನು ಮಾಡಲಾಗಿತ್ತು. ಮಾಲೂರು ತಾಲ್ಲೂಕಿನ, ಗಂಗಾಪುರ ಹಳ್ಳಿಯ ಶ್ರೀ ರಾಘವೇಂದ್ರ ಗೋ ಶಾಲೆಯಿಂದ ತಂದಂತಹ ಗೋವುಗಳನ್ನು ಇಲ್ಲಿ ಪ್ರದರ್ಶನಕ್ಕೆ ಇರಿಸಲಾಗಿತ್ತು. ಮಲೆನಾಡು ಗಿಡ್ಡ, ಕಾಂಕ್ರಿಜ್, ಬರ್ಗೂರ್‌ತಳಿ, ರೆಡ್‌ಸಿಂಧಿ, ಪುಂಗನೂರು, ಜವಾರಿ ಹಾಗೂ ದೇವಣಿ ಹೀಗೆ ಸುಮಾರು 7 ತಳಿಗಳ ಗೋವುಗಳ ಪ್ರದರ್ಶನವನ್ನು ಈ ಸಮ್ಮೇಳನದಲ್ಲಿ ನೋಡಬಹುದಾಗಿತ್ತು. ಗೋ ಪೂಜೆಯನ್ನು ಸಹ ಇಲ್ಲಿ ಮಾಡಬಹುದಾಗಿತ್ತು. ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿಗಳ ರಾಮಚಂದ್ರಾಪುರ ಮಠ, ಇವರ ನಿರ್ದೇಶನ ಹಾಗೂ ಮಾರ್ಗದರ್ಶನದಲ್ಲಿ ಸುಮಾರು ವರ್ಷಗಳಿಂದ ಈ ಗೋ ಆಶ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಇವರ ಆಶ್ರಮದಲ್ಲಿ ಪ್ರಸ್ತುತ 260 ಹಸುಗಳು ಇವೆ. ಇವರ ಗೋ ಶಾಲೆಗಳು ಸುಮಾರು 13 ಸ್ಥಳಗಳಲ್ಲಿ ಇವೆ. ಮಂಗಳೂರಿನಲ್ಲಿ 4 ರಿಂದ 5 ಗೋ ಆಶ್ರಮಗಳು, ಸಿದ್ದಾಪುರ ತಾಲ್ಲೂಕಿನ ಭಾನುಕುಳಿ ಎಂಬಲ್ಲಿ, ಕೋಲಾರ ಜಿಲ್ಲೆಯಲ್ಲಿ, ಹೊಸನಗರದಲ್ಲಿ ಇರುವ ಗೋ ಲೋಕದಲ್ಲಿ 32 ತಳಿಗಳನ್ನು ನೋಡಬಹುದು ಹಾಗೂ ಕೋಲಾಡ್ ಮುಂಬೈನಲ್ಲಿಯೂ ಸಹ ಇವರ ಗೋ ಆಶ್ರಮಗಳು ಇವೆ. ಪ್ರತಿಯೊಂದು ಗೋ ಆಶ್ರಮದಲ್ಲೂ 300 ರಿಂದ 500 ಗೋವುಗಳ ಸಂರಕ್ಷಣೆಯನ್ನು ಮಾಡುತ್ತಿದ್ದಾರೆ. ಹಸುಗಳಿಂದ ಸಿಗುವ ವಸ್ತುಗಳಿಂದ ಮಾಡಿದ ಅನೇಕ ವಸ್ತುಗಳನ್ನು ಸಹ ಇಲ್ಲಿ ಮಾರಾಟ ಮಾತ್ತು ಪ್ರದರ್ಶನಕ್ಕೆ ಇಡಲಾಗಿತ್ತು.

ಸಂಜೆಯಾದಂತೆ ಮುಖ್ಯದ್ವಾರ ಹಾಗೂ ರಸ್ತೆಗಳೆಲ್ಲಾ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದವು. ಅರಮನೆ ಮೈದಾನದ ಆವರಣದಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ಸಾಯಂಕಾಲ ಆಗುತ್ತಿದ್ದಂತೆ ದೊಡ್ಡ ಜನ ಸಮೂಹವೇ ಹರಿದುಬರುತ್ತಿತ್ತು.
ಹವ್ಯಕರ ಸಂಸ್ಕೃತಿಯನ್ನು ಪರಿಚಯಿಸುತ್ತಾ, ತೃತೀಯ ವಿಶ್ವ ಹವ್ಯಕ ಸಮ್ಮೇಳನ-2024 ಐತಿಹಾಸಿಕ ದಾಖಲೆಯ ಸ್ಮರಣೀಯ ಮೂರು ದಿನಗಳ ವಿಜೃಂಬಣೆಯ ಉತ್ಸವ ನಡೆಯಿತು.
ಹೇಮ ಎನ್.ಜೆ
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿನಿ