
ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ ಈಗ ದೇಶದಾದ್ಯಂತ ಭಾರಿ ಪ್ರಶ್ನೆಗೆ ಗುರಿಯಾಗುತ್ತಿದೆ. ಪ್ರೊಬೇಷನರಿ ಪೂಜಾ ಖೇಡ್ಕರ್ ಅವರ ನಕಲಿ ದಾಖಲೆಗಳ ಪ್ರಕರಣ ಈಗ ದೇಶದ ಕಠಿಣ ಹಾಗೂ ಗೌರವಯುತ ಪರೀಕ್ಷೆಯಾದ ಯುಪಿಎಸ್ಸಿ ನಡೆಸುವ ಸಿವಿಲ್ ಸರ್ವಿಸ್ ಪರೀಕ್ಷೆ ಮೇಲೆ ಅನುಮಾನ ಪಡುವಂತಾಗಿದೆ.
ಏನಿದು ಪೂಜಾ ಖೇಡ್ಕರ್ ನಕಲಿ ದಾಖಲೆಗಳ ಪ್ರಕರಣ?
2023 ನೇ ಬ್ಯಾಚಿನ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರು, ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇವರು ತಮ್ಮ ಸ್ವಂತ ಆಡಿ ಕಾರಿಗೆ ಸರ್ಕಾರಿ ಸೈರನ್ ಗಳನ್ನು ಬಳಸಿ ಓಡಾಡುತ್ತಿದ್ದರು ಎಂದು ಆರೋಪಿಸಲಾಗಿತ್ತು. ತದನಂತರ ಇವರಿಗೆ ಸಂಬಂಧಿಸಿದ ಒಂದೊಂದೇ ಆರೋಪಗಳು ಹೊರಬರುತ್ತಿದೆ.
ಪೂಜಾ ಅವರು ತಾವು ಐಎಎಸ್ ಅಧಿಕಾರಿ ಆಗಬೇಕೆಂಬ ದುರುದ್ದೇಶದಿಂದ, ನಕಲಿ ಓಬಿಸಿ ದಾಖಲೆ ಹಾಗೂ ನಕಲಿ ಅಂಗವಿಕಲತೆಯ ದಾಖಲೆಯನ್ನು ಆಯೋಗಕ್ಕೆ ನೀಡಿ, ನಾನ್ ಕ್ರಿಮಿ ಲೆಯರ್ ಹಾಗೂ ಅಂಗವಿಕಲರ ಮೀಸಲಾತಿಯಲ್ಲಿ ಐಎಎಸ್ ಅಧಿಕಾರಿಯಾಗಿ ಆಯ್ಕೆಯಾಗುತ್ತಾರೆ. ಆದರೆ ನಿಜಾಂಶ ಎಂದರೆ, ಪೂಜಾ ಅವರ ಕುಟುಂಬದ ಒಟ್ಟು ಆಸ್ತಿ ಮೌಲ್ಯ 60 ಕೋಟಿಗೂ ಹೆಚ್ಚಾಗಿದೆ ಎನ್ನಲಾಗುತ್ತಿದೆ. ಈ ಹಿಂದೆ ಪೂಜಾ ಅವರು ಕುಣಿಯಲ್ಲಿರುವ ಕಾಶಿಬಾಯಿ ನವಳೆ ಮೆಡಿಕಲ್ ಕಾಲೇಜ್ ನಲ್ಲಿ 2007 ರ ಬ್ಯಾಚ್ನಲ್ಲಿ ಪ್ರವೇಶಾತಿ ಪಡೆಯಲು, ನಾನ್ ಕ್ರಿಮಿ ಲೆಯರ್ ದಾಖಲೆಯನ್ನು ಉಪಯೋಗಿಸಿದ್ದರು, ಆದರೆ ಯಾವುದೇ ಅಂಗವಿಕಲತೆ ದಾಖಲೆಯನ್ನು ಉಪಯೋಗಿಸಿರಲಿಲ್ಲ.
ಪೂಜಾ ಅವರ ಖುದ್ದು ಆಸ್ತಿಯ ಮೌಲ್ಯ ಸರಿ ಸುಮಾರು 22 ಕೋಟಿ ರೂಪಾಯಿ ಇರುವಾಗ, ಇವರ ತಂದೆ ಮಹಾರಾಷ್ಟ್ರ ಸರ್ಕಾರದಲ್ಲಿ ಉನ್ನತ ಐಎಎಸ್ ಅಧಿಕಾರಿಯಾಗಿರುವಾಗ, ಯಾವುದರ ಅಡಿಯಲ್ಲಿ ಇವರನ್ನು ಓಬಿಸಿ ನಾನ್ ಕ್ರಿಮಿ ಲೆಯರ್ ಎಂದು ಪರಿಗಣಿಸಲು ಸಾಧ್ಯ ಎಂಬ ಪ್ರಶ್ನೆ ಈಗ ಉದ್ಭವಿಸಿದೆ.
ಕೇಂದ್ರ ಲೋಕಸೇವಾ ಆಯೋಗದ ಮೇಲೆ ಅನುಮಾನ?!
ಪೂಜಾ ಖೇಡ್ಕರ್ ಅವರ ಪ್ರಕರಣ ಹೊರ ಬರುತ್ತಿದ್ದಂತೆ ದೇಶದಲ್ಲಿ ನಾನಾ ಭಾಗದಲ್ಲಿ ಇರುವ, ಹಲವಾರು ಐಎಎಸ್ ಹಾಗೂ ಇನ್ನಿತರ ಸಿವಿಲ್ ಸರ್ವಿಸ್ ಅಧಿಕಾರಿಗಳ ಮೇಲೆ ಸಾಮಾಜಿಕ ಜಾಲತಾಣದ ಕೆಲವು ಉಪಯೋಗಿಗಳು ಆರೋಪಗಳನ್ನು ಮಾಡುತ್ತಿದ್ದಾರೆ.
- ಭಾರತೀಯ ಕಂದಾಯ ಸೇವೆಯನ್ನು ಪಡೆದು, ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ದಿವ್ಯಾಂಶಿ ಸಿಂಗ್ ಎಂಬ ಅಧಿಕಾರಿ ನಕಲಿ ಅಂಗವಿಕಲತೆ ದಾಖಲೆಯನ್ನು ಆಯೋಗಕ್ಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
- ಯುಪಿಎಸ್‌ಸಿ 2021 ನೇ ಬ್ಯಾಚಿನಲ್ಲಿ 432ನೇ ಫ್ರಾಂಕ್ ಪಡೆದಿರುವ ಜ್ಯೋತಿ ಮಿಶ್ರಾ ಎಂಬ ಐಎಎಸ್ ಅಧಿಕಾರಿ, ನಕಲಿ ಪರಿಶಿಷ್ಟ ಜಾತಿ ದಾಖಲೆಯನ್ನು ನೀಡಿದ ಆರೋಪ ಎದುರಿಸುತ್ತಿದ್ದಾರೆ.
ಹೀಗೆ ಸಾಲು ಸಾಲು ಐಎಎಸ್ ಪರೀಕ್ಷೆಯ ಹಗರಣಗಳು ಬೆಳಕಿಗೆ ಬರುತ್ತಿದೆ. ದೇಶದಲ್ಲಿ ಲಕ್ಷಾಂತರ ಯುವಕರು ತಮ್ಮ ಪದವಿ ಮುಗಿಸಿದ ತಕ್ಷಣ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಸರ್ಕಾರಿ ನೌಕರಿಯನ್ನು ಪಡೆಯುವ ಕನಸನ್ನು ಹೊತ್ತು ತಯಾರಿ ನಡೆಸುತ್ತಿರುತ್ತಾರೆ. ಇಂತಹ ಅನೇಕ ನಿಷ್ಠಾವಂತ ಆಕಾಂಕ್ಷಿಗಳಿಗೆ ಈ ರೀತಿಯ ಹಗರಣಗಳು, ವರ್ಷಗಳ ತಯಾರಿಕೆ ನೀರು ಎರಚುತ್ತದೆ. ಇವೆಲ್ಲದಕ್ಕೂ ಕೇಂದ್ರ ಲೋಕಸೇವಾ ಆಯೋಗ ಆದಷ್ಟು ಬೇಗ ಉತ್ತರಿಸಬೇಕು. ಹಾಗೆ ಇನ್ನು ಮುಂದೆ ಈ ರೀತಿಯ ಲೋಕಗಳು ನಡೆಯದಂತೆ ನಿಗಾ ವಹಿಸಬೇಕು. ನಿಷ್ಠೆಯಿಂದ ಹಾಗೂ ಕಷ್ಟದಿಂದ ಓದುವ ಆಕಾಂಕ್ಷಿಗಳಿಗೆ ಅಧಿಕಾರ ಸಿಗಬೇಕು.