Politics

ಎರಡನೇ ಅಭ್ಯರ್ಥಿಗಳ ಪಟ್ಟಿಯಲ್ಲೂ ಬರದ ‘ಹಿಂದೂ ಫೈರ್ ಬ್ರಾಂಡ್’ ಹೆಸರು.

ಉತ್ತರ ಕನ್ನಡ: ತಮ್ಮ ವಿವಾದಾತ್ಮಕ ಭಾಷಣಗಳಿಂದಲೇ ಪ್ರಸಿದ್ಧಿ ಪಡೆದಂತಹ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಹಾಲಿ ಸಂಸದರಾದ ಶ್ರೀ ಅನಂತ್ ಕುಮಾರ್ ಹೆಗಡೆ ಅವರ ಹೆಸರನ್ನು ಭಾರತೀಯ ಜನತಾ ಪಕ್ಷ ತನ್ನ ಎರಡನೇ ಅಭ್ಯರ್ಥಿಗಳ ಪಟ್ಟಿಯಲ್ಲಿಯೂ ಸೂಚಿಸದೆ ಇರುವುದು ಆಶ್ಚರ್ಯ ಮೂಡಿಸಿದೆ.

ಸುಮಾರು ಎರಡುವರೆ ದಶಕಗಳಿಂದ ಲೋಕಸಭಾ ಸಂಸದರಾಗಿರುವ ಅನಂತ್ ಕುಮಾರ್ ಹೆಗಡೆಯವರು ವಿವಾದಾತ್ಮಕ ಹಿಂದೂ ಪರ ಭಾಷಣಗಳಿಂದಲೇ ಸುದ್ದಿಯಲ್ಲಿ ಇರುತ್ತಾರೆ. ‘ಹಿಂದೂ ಫೈಯರ್ ಬ್ರಾಂಡ್’ ಇದು ಹೆಗಡೆಯವರಿಗೆ ಜನರು ನೀಡಿರುವ ಉಪನಾಮವಾಗಿದೆ.

2014ರ ನರೇಂದ್ರ ಮೋದಿಯವರ ಸರ್ಕಾರದಲ್ಲಿ ಮೊದಲ ಬಾರಿಗೆ ಇವರು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆಯ ರಾಜ್ಯ ಸಚಿವರಾದರು. ಆದರೆ 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ತಮ್ಮ ಸ್ವಕ್ಷೇತ್ರದ ಬಿಜೆಪಿ ಕಾರ್ಯಕರ್ತರ ವಿರೋಧವನ್ನು ಹೊಂದಿದ್ದಾರೆ ಎಂಬ ಸುದ್ದಿಯು ಸಹ ಹರಿದಾಡುತ್ತಿದೆ.

ಇದಲ್ಲದೆ, ಸದ್ಯ ಅವರ ಕ್ಷೇತ್ರದಲ್ಲಿ ನಡೆದ ಒಂದು ಸಭೆಯಲ್ಲಿ “ಬಿಜೆಪಿ 400 ರ ಗಡಿ ದಾಟಿದರೆ ಸಂವಿಧಾನವನ್ನು ಬದಲಾಯಿಸುತ್ತೇವೆ.” ಎಂಬ ಹೇಳಿಕೆ ನೀಡಿದ್ದರು. ಈ ವಿವಾದಾತ್ಮಕ ಹೇಳಿಕೆಯು ದೇಶದಾದ್ಯಂತ ಅನಂತಕುಮಾರ್ ಹೆಗಡೆ ಹಾಗೂ ಬಿಜೆಪಿಯ ವಿರುದ್ಧ, ವಿರೋಧ ಪಕ್ಷಗಳು ಹಾಗೂ ಇನ್ನಿತರ ಸಂಘಟನೆಗಳು‌ ಅಸಮಾಧಾನ ಹೊರಹಾಕಿದ್ದಾರೆ. ಇದಾದ ಬೆನ್ನಲ್ಲೇ, ಬಿಜೆಪಿಯು ಸಹ ತನ್ನ ಲೋಕಸಭೆ ಅಭ್ಯರ್ಥಿಗಳ ಎರಡನೆಯ ಪಟ್ಟಿಯಲ್ಲಿ ಅನಂತಕುಮಾರ್ ಹೆಗಡೆಯವರ ಹೆಸರನ್ನು ಸೂಚಿಸಿಲ್ಲ. ಸತತ ಐದು ಬಾರಿ ಒಂದೇ ಕ್ಷೇತ್ರದಿಂದ ಗೆದ್ದರೂ ಸಹ ಬಿಜೆಪಿಯು ತನ್ನ ಅಭ್ಯರ್ಥಿಗಳ ಹೆಸರುಗಳಲ್ಲಿ ಹಾಲಿ ಸಂಸದರ ಹೆಸರನ್ನು ಸೂಚಿಸದೆ ಇರುವುದು, ಅವರ ಮಾತು ಮತ್ತು ನಡವಳಿಕೆಯ ಮೇಲೆ ಹಿಡಿತವಿಟ್ಟು ಹೇಳಿಕೆ ನೀಡಿರಿ ಎಂದು ಎಚ್ಚರಿಸಿದಂತಾಗಿದೆ.

ಕರ್ನಾಟಕದ 20 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಹೆಸರನ್ನು ಸೂಚಿಸಿರುವ ಬಿಜೆಪಿ ಪಕ್ಷ, ಇನ್ನು ಕೆಲವೇ ದಿನಗಳಲ್ಲಿ ಮೂರನೇ ಪಟ್ಟಿಯನ್ನು ಸಹ ಬಿಡುಗಡೆ ಮಾಡಲಿದ್ದು ಉಳಿದಂತ ಎಂಟು ಕ್ಷೇತ್ರಗಳಿಗೆ ಯಾವ ಅಭ್ಯರ್ಥಿಗಳ ಹೆಸರನ್ನು ಸೂಚಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

Show More

Related Articles

Leave a Reply

Your email address will not be published. Required fields are marked *

Back to top button