ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ ಮಸೂದೆ ಮಂಡನೆ.


ಉತ್ತರಾಖಂಡ: ಫೆಬ್ರವರಿ 06ರಂದು, ಉತ್ತರಾಖಂಡದ ರಾಜ್ಯ ಸರ್ಕಾರ ಏಕರೂಪ ನಾಗರಿಕ ಸಂಹಿತೆಯ ಮಸೂದೆಯನ್ನು ತನ್ನ ವಿಧಾನಸಭೆಯಲ್ಲಿ ಮಂಡಿಸಿದೆ. ಈ ಮಸೂದೆ ಜಾರಿಗೆ ಬಂದರೆ, ಸ್ವಾತಂತ್ರ್ಯ ನಂತರದ ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತಂದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಉತ್ತರಾಖಂಡ ಪಾತ್ರವಾಗಲಿದೆ.
ಈ ಮಸೂದೆ ಮದುವೆ, ವಿಚ್ಚೇದನ, ಭೂಮಿ, ಮತ್ತು ಆಸ್ತಿ ವಿಷಯದಲ್ಲಿ ಎಲ್ಲಾ ನಾಗರಿಕರಿಗೂ ಸಮಾನವಾದ ಕಾನೂನನ್ನು ತಂದಿದೆ. ಆದರೆ ಉತ್ತರಾಖಂಡದ ಪರಿಶಿಷ್ಟ ಪಂಗಡಗಳನ್ನು ಈ ಮಸೂದೆಯಿಂದ ಹೊರಗಿಡಲಾಗಿದೆ.
ಈ ಮಸೂದೆಯಲ್ಲಿ ಲಿವ್ -ಇನ್-ಸಂಭಂದಗಳನ್ನು ಒಂದು ತಿಂಗಳೊಳಗಾಗಿ ರಿಜಿಸ್ಟ್ರಾರ್ ಕಛೇರಿಯಲ್ಲಿ ನೊಂದಣಿ ಮಾಡತಕ್ಕದ್ದು ಎಂದು ಷರತ್ತು ವಿಧಿಸಿದೆ. ಹಾಗೆ ಮಾಡದಿದ್ದರೆ, ಮೂರು ತಿಂಗಳ ಕಾರಾಗೃಹ ಶಿಕ್ಷೆ ಮತ್ತು 10,000 ರೂಪಾಯಿ ದಂಡ, ಇವೆರಡರಲ್ಲಿ ಒಂದನ್ನು ವಿಧಿಸಲಾಗುತ್ತದೆ ಎಂದು ತಿಳಿಸಿದೆ. ಇಂತಹ ಸಂಬಂಧಗಳಿಂದ ಜನಿಸುವ ಮಗುವನ್ನು ನ್ಯಾಯಸಮ್ಮತ ಎಂದು ಈ ಮಸೂದೆ ಒಪ್ಪಿಕೊಳ್ಳುತ್ತದೆ.
ಲಿವ್ -ಇನ್-ಸಂಭಂದದಲ್ಲಿ ಇರುವ ಜೋಡಿಯಲ್ಲಿ ಯಾರೊಬ್ಬರೂ ಅಪ್ರಾಪ್ತರಾಗಿಬಾರದು. ಇಬ್ಬರೂ ನೊಂದಣಿ ಮಾಡುವ ಸಮಯದಲ್ಲಿ ತಮ್ಮ ಒಪ್ಪಿಗೆಯನ್ನು ಸೂಚಿಸತಕ್ಕದ್ದು. ಒತ್ತಾಯದ, ದಬ್ಬಾಳಿಕೆಯ, ಅನಗತ್ಯ ಪ್ರಭಾವ, ತಪ್ಪು ನಿರೂಪಣೆ ಅಥವಾ ವಂಚನೆ ಮೂಲಕ ನೊಂದಣಿ ಮಾಡಿದ್ದಲ್ಲಿ ಮೂರು ತಿಂಗಳ ಜೈಲು ಶಿಕ್ಷೆಯಾಗುವುದು ಎಂದು ಈ ಮಸೂದೆ ತಿಳಿಸುತ್ತದೆ.
ಮಸೂದೆ ಜಾರಿಯಾದಲ್ಲಿ ಉತ್ತರಾಖಂಡ ರಾಜ್ಯದ ಬಿಜೆಪಿ ಪಕ್ಷ ತನ್ನ ವಚನವನ್ನು ಉಳಿಸಿಕೊಂಡಂತಾಗುತ್ತದೆ.