Cinema

ವೀಡಿಯೋ ಸಾಂಗ್ ಮೂಲಕ ತೆರೆದುಕೊಂಡ `ಸಾರಾಂಶ’ದ ನಶೆ-ನಕಾಶೆ!


ನಶೆಯೋ ನಕಾಶೆಯೋ ಎಂಬ ಈ ಹಾಡು ಮಾಧುರಿ ಶೇಷಾದ್ರಿ ಕಂಠಸಿರಿಯಲ್ಲಿ ಮೂಡಿ ಬಂದಿದೆ. ಕಾಂತಾರ ಖ್ಯಾತಿಯ ಪ್ರಮೋದ್ ಮರವಂತೆ ಸಾಹಿತ್ಯ ಮತ್ತು ಉದಿತ್ ಹರಿತಾಸ್ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಹಾಡು ರಾಮ್ ಕುಮಾರ್ ನೃತ್ಯ ನಿರ್ದೇಶನದೊಂದಿಗೆ ಕಳೆಗಟ್ಟಿಕೊಂಡಿದೆ. ಇದರ ಮೂಲಕವೇ ಶೃತಿ ಹರಿಹರನ್ ಪಾತ್ರದ ಝಲಕ್ ಕೂಡಾ ಜಾಹೀರಾಗಿದೆ.


ಈ ವೀಡಿಯೋ ಸಾಂಗ್ ಸಂಗೀತ, ಸಾಹಿತ್ಯದಾಚೆಗೂ ವಿಶೇಷತೆಗಳನ್ನೊಳಗೊಂಡಿದೆ. ಸಾಮಾನ್ಯವಾಗಿ ಒನ್ ಟೇಕ್ ಸಾಂಗ್ ಎಂಬ ಪರಿಕಲ್ಪನೆಯನ್ನು ದೃಷ್ಯಕ್ಕೆ ಒಗ್ಗಿಸುವುದು ವಿರಳ. ಅಂಥಾದ್ದೊಂದು ಅಪರೂಪದ ಚೌಕಟ್ಟಿನಲ್ಲಿ ಈ ಹಾಡು ರೂಪುಗೊಂಡಿದೆ. ಇನ್ನುಳಿದಂತೆ, ಕಥೆಗೆ ಪೂರಕವಾಗಿ ಸೂಕ್ಷ್ಮ ಕಾನ್ಸೆಪ್ಟಿನಲ್ಲಿ ಈ ಹಾಡು ಸಿದ್ಧಗೊಂಡಿದೆ. ಪ್ರತಿಯೊಬ್ಬರನ್ನೂ ಕಾಡುವ, ಪುಳಕಗೊಳಿಸುವ, ಎಂತೆಂಥಾದ್ದೋ ಸಾಹಸಗಳಿಗೆ ಒಡ್ಡಿಕೊಳ್ಳುವಂತೆ ಮಾಡುವ ಕನಸೆಂಬ ಮಾಯಾವಿ ಈ ಹಾಡಿನ ಹಿಂದಿರುವ ಮುಖ್ಯ ಮಾಯೆ. ಆ ಕ್ಷಣಕ್ಕೆ ವಾಸ್ತವಿಕ ಪರಿಧಿಯಾಚೆ ಕೊಂಡೊಯ್ಯುವ, ಅಸಾಧ್ಯವಾದುದನ್ನೂ ಕೂಡಾ ಸಾಧ್ಯವಾಗುವಂತೆ ಮಾಡುವ ಶಕ್ತಿ ಕನಸಿಗಿದೆ. ನಾವು ಸವಾಲು ಅಂತ ಬಂದಾಗ ಕಳೆದುಕೊಳ್ಳುವ ಭಯದಿಂದ ಹಿಂದಡಿ ಇಡೋದಿದೆ. ಆದರೆ, ಕನಸಿಗಾಗಿ ಮಾತ್ರ ಎಂಥಾ ತ್ಯಾಗಕ್ಕಾದರೂ ಸಿದ್ಧವಾಗಿ ಬಿಡುತ್ತೇವೆ. ಯಾಕೆ ಹೀಗೆ ಎಂಬಂತೆ ನಮ್ಮೊಳಗೇ ನಾವು ಪ್ರಶ್ನೆಯಾಗುತ್ತೇವೆ; ಅಚ್ಚರಿಗೊಳ್ಳುತ್ತೇವೆ. ಅಂಥಾ ಎಲ್ಲ ಭಾವಗಳೂ ಎರಕ ಹೊಯ್ದಂತೆ ಈ ಹಾಡು ಮೂಡಿ ಬಂದಿದೆ.


ಶೃತಿ ಹರಿಹರನ್ ಜೊತೆಗೆ ಇಲ್ಲಿ ಸುಮೇಶ್ ವಿ.ಎಂ ಮತ್ತು ಐಶ್ವರ್ಯಾ ಪ್ರತಾಪ್ ಕೂಡಾ ಹಾಡಿನ ಭಾಗವಾಗಿದ್ದಾರೆ. ಹೀಗೆ ಹೊಸತನದ ಹಾಡುಗಳ ಮೂಲಕವೇ ಪ್ರೇಕ್ಷಕರನ್ನು ಮುಟ್ಟುತ್ತಿರುವ ಸಾರಾಂಶ ಚಿತ್ರದಲ್ಲಿ ದೀಪಕ್ ಸುಬ್ರಮಣ್ಯ, ಸೂರ್ಯ ವಸಿಷ್ಠ, ಶೃತಿ ಹರಿಹರನ್, ಶ್ವೇತಾ ಗುಪ್ತ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ರವಿ ಕಶ್ಯಪ್ ಮತ್ತು ಆರ್.ಕೆ ನಲ್ಲಮ್ ವಿಭಾ ಕಶ್ಯಪ್ ಪ್ರೊಡಕ್ಷನ್ಸ್ ಮತ್ತು ಕ್ಲಾಪ್ ಬೋರ್ಡ್ ಪ್ರೊಡಕ್ಷನ್ ಮೂಲಕ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಆಸಿಫ್ ಕ್ಷತ್ರಿಯಾ, ರವಿ ಭಟ್, ರಾಮ್ ಮಂಜುನಾಥ್, ಸತೀಶ್ ಕುಮಾರ್, ಪೃಥ್ವಿ ಬನವಾಸಿ ಮುಂತಾದವರ ತಾರಾಗಣ, ಅಪರಾಜಿತ್ ಹಿನ್ನೆಲೆ ಸಂಗೀತ ಮತ್ತು ಪ್ರದೀಪ್ ನಾಯಕ್ ಸಂಕಲನ ಈ ಚಿತ್ರಕ್ಕಿದೆ.

Show More

Related Articles

Leave a Reply

Your email address will not be published. Required fields are marked *

Back to top button