‘ಶಾಂತಂ ಪಾಪಂ’ ಧಾರಾವಾಹಿ ಸರಣಿಯ ನಿರ್ದೇಶಕ ವಿನೋದ್ ದೊಂಡಾಲೆ ಆತ್ಮಹತ್ಯೆ.
ಬೆಂಗಳೂರು: ಕನ್ನಡ ಕಿರುತೆರೆಯ ಖ್ಯಾತ ನಿರ್ದೇಶಕ ವಿನೋದ್ ದೊಂಡಾಲೆ ಇಂದು ತಮ್ಮ ನಾಗರಬಾವಿಯಲ್ಲಿ ಇರುವ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರ ಮೃತ ದೇಹವನ್ನು ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಕಿರುತೆರೆ ಜೊತೆಗೆ ಸಿನಿಮಾ ರಂಗಕ್ಕೂ ನಿರ್ದೇಶನ ಮಾಡಲು ದೊಂಡಾಲೆ ಅವರು ಮುಂದಾಗಿದ್ದರು.
ಟಿ.ಶೇಷಾದ್ರಿ, ಟಿ.ಎನ್. ಸೀತಾರಾಂ ರಂತಹ ದಿಗ್ಗಜ ನಿರ್ದೇಶಕರೊಂದಿಗೆ, ವಿನೋದ್ ದೊಂಡಾಲೆ ಧಾರಾವಾಹಿಗಳಲ್ಲಿ ಸಂಚಿಕೆ ನಿರ್ದೇಶಕರಾಗಿ ಕೆಲಸ ನಿರ್ವಹಿಸಿದ್ದರು. ‘ಕರಿಮಣಿ’, ‘ಶಾಂತಂ ಪಾಪಂ’ ಧಾರಾವಾಹಿಗಳನ್ನು ಇವರು ನೀಡಿದ್ದಾರೆ. ಅತಿಥಿ, ಬೇರು, ತುತ್ತೂರಿ, ವಿಮುಕ್ತಿ ಎಂಬ ಚಿತ್ರಗಳಲ್ಲಿ ವಿನೋದ್ ಅವರು ಕೆಲಸ ಮಾಡಿದ್ದಾರೆ.
ನಿನಾಸಂ ಸತೀಶ್ ಅವರೊಂದಿಗೆ ‘ಅಶೋಕ ಬ್ಲೇಡ್’ ಎಂಬ ಚಿತ್ರವನ್ನು ನಿರ್ಮಿಸಲು ವಿನೋದ್ ಅವರು ಓಡಾಡುತ್ತಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ ಚಿತ್ರೀಕರಣದ ಕುಂಟುತ್ತಾ ಸಾಗುತ್ತಿತ್ತು. ಇವರೇ ಈ ಚಿತ್ರದ ನಿರ್ಮಾಪಕರಾಗಿದ್ದರಿಂದ ಸಾಲದ ಸುಳಿಗೆ ಸಿಲುಕಿದ್ದರು. ನಿನ್ನೆ ಕೂಡ ನಿನಾಸಂ ಸತೀಶ್ ಹಾಗೂ ಚಿತ್ರದ ತಂಡದೊಂದಿಗೆ ಮಾತನಾಡಿ ಬಂದಿದ್ದರು ಎಂದು ಹೇಳಲಾಗಿದೆ.