ಬೆಂಗಳೂರು: ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ಹಿಂಸಾಚಾರ, ದಾಳಿಗಳು, ದೇಗುಲಗಳ ನಾಶ, ಮಹಿಳೆಯರ ಮೇಲೆ ಅಮಾನವೀಯ ಕೃತ್ಯಗಳ ಬಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ತೀವ್ರ ವಿರೋಧ ವ್ಯಕ್ತಪಡಿಸಿದೆ. ಸಂಘದ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ, ಬಾಂಗ್ಲಾದೇಶ ಸರ್ಕಾರ ಮತ್ತು ಅದರ ಸಂಬಂಧಿತ ಸಂಸ್ಥೆಗಳನ್ನು ಆಕ್ಷೇಪಿಸಿ, ಇವುಗಳು ಕೇವಲ ನಿಷ್ಕ್ರಿಯ ಪ್ರೇಕ್ಷಕರಾಗಿ ಉಳಿದಿರುವುದನ್ನು ಕಟುವಾಗಿ ಟೀಕಿಸಿದ್ದಾರೆ.
“ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಕ್ಷಣವೇ ನಿಲ್ಲಿಸಬೇಕು” ಎಂದು ಹೊಸಬಾಳೆ ಒತ್ತಾಯಿಸಿದರು.
ಚಿನ್ಮಯ ಕೃಷ್ಣ ದಾಸ್ ಬಿಡುಗಡೆಗೆ ಒತ್ತಾಯ:
ISCKON ಸಂಘಟನೆಗೆ ಸಂಬಂಧಿಸಿದ ಆಧ್ಯಾತ್ಮಿಕ ನಾಯಕ ಚಿನ್ಮಯ ಕೃಷ್ಣ ದಾಸ್ ಅವರನ್ನು ಸೆಡಿಷನ್ ಆರೋಪದಡಿ ಬಂಧಿಸಿರುವುದನ್ನು RSS ತೀವ್ರವಾಗಿ ವಿರೋಧಿಸಿದ್ದು, ಅವರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಬಾಂಗ್ಲಾದೇಶ ಸರ್ಕಾರವನ್ನು ಕೋರಿದೆ.
ಭಾರತ ಸರ್ಕಾರದ ಹಸ್ತಕ್ಷೇಪಕ್ಕೆ ವಿನಂತಿ:
RSS, ಭಾರತ ಸರ್ಕಾರವನ್ನು ಕೋರಿಕೊಂಡು, ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಯಲು ಜಾಗತಿಕ ಪ್ರಜ್ಞೆ ಮೂಡಿಸುವಂತೆ ವಿನಂತಿಸಿತು. “ಭಾರತ ತನ್ನ ಶಕ್ತಿ ಬಳಸಿ, ಬಾಂಗ್ಲಾದೇಶದ ಅಲ್ಪಸಂಖ್ಯಾತರ ರಕ್ಷಣೆಗಾಗಿ ಅಗತ್ಯ ಕ್ರಮ ಕೈಗೊಳ್ಳಬೇಕು,” ಎಂದು RSS ಪ್ರಕಟಣೆಯಲ್ಲಿ ತಿಳಿಸಿದೆ.
ಆಗಿದ್ದು ಏನು?
ಬಾಂಗ್ಲಾದೇಶದಲ್ಲಿ ಚಟೋಗ್ರಾಮದ ಕೆಲವು ದೇಗುಲಗಳ ಮೇಲೆ, ಹಿಂದೂ ಕುಟುಂಬಗಳ ಮೇಲೆ ದಾಳಿ ನಡೆದಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಇದು ವಿಸ್ತಾರವಾಗಿ ಹರಡುತ್ತಿದೆ. ಬಾಂಗ್ಲಾದೇಶದಲ್ಲಿ ಈ ಕೃತ್ಯಗಳಿಗೆ ಆಕ್ರೋಶ ವ್ಯಕ್ತವಾಗಿದ್ದು, ಹಿಂದೂ ಸಮುದಾಯ ಪ್ರತಿಭಟನೆ ಮಾಡುತ್ತಿದೆ.
ಜಾಗತಿಕ ಮಟ್ಟದಲ್ಲಿ ಚರ್ಚೆಯ ಅವಶ್ಯಕತೆ:
ಹಿಂಸಾಚಾರದ ವಿರುದ್ಧ ಜಾಗತಿಕ ಮಟ್ಟದಲ್ಲಿ ಒತ್ತಡ ಹೇರುವ ಅಗತ್ಯವನ್ನು RSS ಪುನರುಚಿಸುತ್ತಿದ್ದು, ಬಾಂಗ್ಲಾದೇಶದಲ್ಲಿ ಸಾಮಾಜಿಕ ಶಾಂತಿಗೆ ಕೊಡುಗೆ ನೀಡಲು ಮನವಿ ಮಾಡಿದೆ.