ಸೋಲಿಲ್ಲದ ಸರದಾರ ‘ ವ್ಲಾದಿಮಿರ್ ಪುಟಿನ್ ‘.

ರಷ್ಯಾ: 71 ವರ್ಷ ಪ್ರಾಯದ ರಷ್ಯಾ ದೇಶದ ರಾಷ್ಟ್ರಪತಿ ಆದಂತಹ ವ್ಲಾದಿಮಿರ್ ಪುಟಿನ್, ಮಗದೊಮ್ಮೆ 87.97% ಮತಗಳೊಂದಿಗೆ, 200 ವರ್ಷಗಳ ಇತಿಹಾಸದಲ್ಲಿ, ರಷ್ಯಾದ ದೀರ್ಘಾವಧಿ ಸೇವೆ ಸಲ್ಲಿಸಿದ ನಾಯಕನಾಗಿ ಹೊರಹೊಮ್ಮಿದ್ದಾರೆ.
ಮಾರ್ಚ್ 17 ರಂದು, ಭಾನುವಾರ ಪುಟಿನ್ ಅವರ ವಿಜಯದ ಘೋಷಣೆ ಆಯಿತು. ಇದರ ಹಿನ್ನೆಲೆಯಲ್ಲಿ ವಿಶ್ವದ ಗಣ್ಯ ನಾಯಕರು ಪುಟಿನ್ ಅವರಿಗೆ ಶುಭಾಶಯವನ್ನು ಕೋರಿದರು. ನರೇಂದ್ರ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ” “ಮುಂಬರುವ ವರ್ಷಗಳಲ್ಲಿ ಭಾರತ ಮತ್ತು ರಷ್ಯಾ ನಡುವಿನ ಸಮಯ-ಪರೀಕ್ಷಿತ ವಿಶೇಷ ಮತ್ತು ವಿಶೇಷ ಸವಲತ್ತುಗಳ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಒಟ್ಟಾಗಿ ಕೆಲಸ ಮಾಡಲು ಎದುರುನೋಡಬಹುದು” ಎಂದು ಬರೆದುಕೊಂಡಿದ್ದಾರೆ.
ರಷ್ಯಾದ ಗುಪ್ತಚರ ಇಲಾಖೆಯ ಲೆಫ್ಟಿನೆಂಟ್ ಕರ್ನಲ್ ಆಗಿ ಸೇವೆ ಸಲ್ಲಿಸಿದ್ದ ವ್ಲಾದಿಮಿರ್ ಪುಟಿನ್, 1999 ರಲ್ಲಿ ಮೊದಲ ಬಾರಿಗೆ ರಷ್ಯಾದ ಪ್ರಧಾನಮಂತ್ರಿಯಾಗಿ ಆಯ್ಕೆಯಾಗುತ್ತಾರೆ. ಅದಾದ ಮರುವರ್ಷವೇ ಅಂದರೆ 2000ರಲ್ಲಿ ಪುಟಿನ್ ಅವರು ಮೊದಲ ಬಾರಿಗೆ ರಷ್ಯಾದ ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸುತ್ತಾರೆ. ಅದಾದ ನಂತರ ಇಲ್ಲಿಯ ತನಕ ರಾಷ್ಟ್ರಪತಿ ಪುಟಿನ್ ಅವರು ಸೋಲಿಲ್ಲದ ಸರದಾರನಂತೆ ತಮ್ಮ ಅಧಿಕಾರದ ಚುಕ್ಕಾಣಿಯನ್ನು ಯಾರಿಗೂ ಬಿಡದೆ ತಮ್ಮ ಆಡಳಿತ ನಡೆಸುತ್ತಿದ್ದಾರೆ.
2024ರ ಈ ಚುನಾವಣೆಯ ಗೆಲುವು ಪುಟಿನ್ ಅವರಿಗೆ ಮತ್ತೆ ಆರು ವರ್ಷಗಳ ಅಧಿಕಾರವನ್ನು ತಂದುಕೊಟ್ಟಿದೆ. ಆದರೆ ಈ ಚುನಾವಣೆಯ ಕುರಿತು ಪ್ರತಿಕ್ರಿಯಿಸಿರುವ ಅಮೇರಿಕಾ,”ಇದೊಂದು ಅಸಂವಿಧಾನಿಕ ಚುನಾವಣೆ, ಪುಟೀನ್ ಅವರು ತಮ್ಮ ರಾಜಕೀಯ ವಿರೋಧಿಗಳನ್ನು ಹಾಗೂ ತಮ್ಮ ವಿರುದ್ಧ ಪ್ರತಿಭಟನೆ ನಡೆಸುವವರನ್ನು ಕಾರಾಗೃಹದಲ್ಲಿ ಇರಿಸಿ ಈ ಚುನಾವಣೆಯನ್ನು ಗೆದ್ದಿದ್ದಾರೆ.” ಎಂದು ಆರೋಪಿಸಿದೆ.