ತಮಿಳುನಾಡಿನ ರಾಜಕೀಯಕ್ಕೆ ಮತ್ತೊಬ್ಬ ಸೂಪರ್ ಸ್ಟಾರ್ ಆಗಮನ.
ಸಿನೆಮಾ ರಂಗದಿಂದ ರಾಜಕೀಯಕ್ಕೆ ಧುಮುಕುವುದು ತಮಿಳುನಾಡಿನಲ್ಲಿ ಹೊಸದೇನೂ ಅಲ್ಲ. ಈ ಹಿಂದೆ ಸ್ಟಾರ್ ನಟರಾದ ಎಂ.ಜಿ.ಆರ್, ಜಯಲಲಿತಾ, ವಿಜಯಕಾಂತ್ ಮೊದಲಾದವರು ರಾಜಕೀಯ ಪ್ರವೇಶಿಸಿ ಯಶಸ್ವಿ ಆಗಿದ್ದಾರೆ. ಇದೇ ಹಾದಿಯನ್ನು ಈಗ ತುಳಿದಿದ್ದಾರೆ, ದಳಪತಿ ವಿಜಯ್.
‘ತಮಿಳಗ ವೆಟ್ರಿ ಕಳಗಂ'(TMK) ಎಂಬ ಹೊಸ ಪಕ್ಷವನ್ನು ಘೋಷಿಸಿ, ಅಭಿಮಾನಿಗಳಿಗೆ ‘ದಳಪತಿ 2.0’ ನನ್ನು ಪರಿಚಯಿಸಿದ್ದಾರೆ. 2026ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಕಣಕ್ಕೆ ಇಳಿಸುವ ಉದ್ದೇಶವನ್ನು ವಿಜಯ್ ಹೊಂದಿರಬೇಕು. ಜನವರಿ 25ರಂದು ನೋಂದಣಿಗಾಗಿ ಕೇಂದ್ರ ಚುನಾವಣಾ ಆಯೋಗಕ್ಕೆ ಅವರು ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.
1984ರಲ್ಲಿ ತೆರೆಕಂಡ ‘ವೆಟ್ರಿ’ ಚಿತ್ರದ ಮೂಲಕ ಬಾಲನಟನಾಗಿ ಸಿನೆಮಾ ರಂಗಕ್ಕೆ ಕಾಲಿಟ್ಟ ವಿಜಯ್, ತನ್ನ ಪಕ್ಷದ ಹೆಸರಲ್ಲಿಯೂ ವೆಟ್ರಿ ಎಂಬ ಪದವನ್ನು ಜೋಡಿಸಿರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ‘ ತಮಿಳಿಗ ವೆಟ್ರಿ ಕಳಗಂ’ ಎಂದರೆ ‘ತಮಿಳುನಾಡಿನ ವಿಜಯದ ಪಕ್ಷ’ ಎಂದರ್ಥವಾಗಿದೆ.
ಪ್ರಾದೇಶಿಕ ಪಕ್ಷಗಳೇ ರಾರಾಜಿಸುತ್ತಿರುವ ತಮಿಳುನಾಡಿನ ರಾಜಕೀಯದಲ್ಲಿ ಈ ಹೊಸ ಪಕ್ಷ ಏನು ಮೋಡಿ ಮಾಡಲಿದೆ, ಮತ್ತು ತಮಿಳುನಾಡಿನ ರಾಜಕೀಯದಲ್ಲಿ ಮತ್ತೊಬ್ಬ ಸೂಪರ್ ಸ್ಟಾರ್ ಯಶಸ್ವಿ ಆಗುವನೆ ಎಂದು ಕಾದು ನೋಡಬೇಕಿದೆ.