ಮೀನುಗಾರರಿಗೆ ಎಚ್ಚರಿಕೆ! ಸಮುದ್ರಕ್ಕೆ ಇಳಿಯಬೇಡಿ.
ಉಡುಪಿ: ಕರಾವಳಿ ಜಿಲ್ಲೆಗಳಲ್ಲಿ ವಾಸವಾಗಿರುವ ಮೀನುಗಾರ ಜನಾಂಗ, ಕೇವಲ ಮೀನುಗಾರ ವೃತ್ತಿಯನ್ನು ನಂಬಿ ಬದುಕುವವರು. ಸಮುದ್ರಕ್ಕೆ ದೋಣಿ ಇಳಿಸದೆ, ಇವರ ಹೊಟ್ಟೆಗೆ ಹಿಟ್ಟು ಇಳಿಯದು. ಆದರೆ ಮಳೆಗಾಲ ಸಮೀಪಿಸುತ್ತಿದ್ದಂತೆ ಇವರಿಗೆ ಸಂಕಷ್ಟ ಎದುರಾಗುತ್ತದೆ. ಕಡಲ ಭೋರ್ಗರೆತ ಹಾಗೂ ಅತಿಯಾದ ಗಾಳಿ ಮಳೆ, ಸಮುದ್ರಕ್ಕೆ ಇಳಿದ ಮೀನುಗಾರರ ಜೀವಕ್ಕೆ ಹಾನಿ ಉಂಟುಮಾಡುತ್ತದೆ.
ರಾಜ್ಯದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮುಂಗಾರಿನಿಂದ ಹಲವೆಡೆ ನೀರು ನಿಂತು ಜನರ ಆಸ್ತಿ ಪಾಸ್ತಿಗೆ ಹಾನಿ ಉಂಟು ಮಾಡಿದೆ. ಅತಿಯಾದ ಮಳೆಯು ಮೀನುಗಾರಿಕೆ ಮೇಲೆ ಕೂಡ ಪರಿಣಾಮವನ್ನು ಬೀರಿದೆ. ಜುಲೈ 10ರವರೆಗೆ ರಾಜ್ಯದಲ್ಲಿ ಧಾರಾಕಾರ ಮಳೆ ಸುರಿಯುವ ಮುನ್ಸೂಚನೆಯಿಂದ ರಾಜ್ಯ ಸರ್ಕಾರ ಮೀನುಗಾರರಿಗೆ ಎಚ್ಚರಿಕೆ ನೀಡಿದೆ.
“ಮೀನುಗಾರರಿಗೆ ಎಚ್ಚರಿಕೆ: ಕರ್ನಾಟಕ ರಾಜ್ಯದ ಕರಾವಳಿ ತೀರಗಳಲ್ಲಿ ದಿನಾಂಕ 06-07-2024ರಿಂದ 07-07-2024 ವರೆಗೆ, ಗಾಳಿಯು ಪ್ರತಿ ಗಂಟೆಗೆ 35 ರಿಂದ 45 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆಯಿದ್ದು, ಸಮುದ್ರದ ಅಲೆಗಳು ಉಲ್ಬಣಗೊಳ್ಳಲಿದೆ. ಈ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ, ಮುಲ್ಕಿ-ಮಂಗಳೂರು, ಉಡುಪಿ ಜಿಲ್ಲೆಯ ಬೈಂದೂರು-ಕಾಪು, ಉತ್ತರ ಕನ್ನಡ ಜಿಲ್ಲೆಯ ಮಜಲಿ-ಭಟ್ಕಳ ಸಮುದ್ರ ತೀರಗಳಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ.” ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ ತನ್ನ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದೆ.