ಎಲ್ಲರಿಗೂ ವಿಶ್ವ ಇಡ್ಲಿ ದಿನದ ಶುಭಾಶಯಗಳು……
ಇಡ್ಲಿ ದಕ್ಷಿಣ ಭಾರತ ದ ಸಾಂಪ್ರದಾಯಕ ತಿನಿಸು ಮತ್ತು ಪ್ರಾಚೀನ ತಿನಿಸು. ಪ್ರಧಾನವಾಗಿ ಅಕ್ಕಿ ಮತ್ತು ಉದ್ದಿನ ಬೇಳೆಯಿಂದ ತಯಾರಿಸಲ್ಪಡುವ ಇಡ್ಲಿ ಬೆಳಗ್ಗಿನ ಉಪಹಾರವಾಗಿ ಬಳಸಲ್ಪಡುತ್ತದೆ. ಸುಲಭವಾಗಿ ತಯಾರಿಸಲ್ಪಡುವ ಈ ಇಡ್ಲಿಯಲ್ಲಿ ಹಲವಾರು ವಿಧಗಳಿವೆ. ರವಾ ಇಡ್ಲಿ, ಮಿನಿ ಇಡ್ಲಿ, ಮಲ್ಲಿಗೆ ಇಡ್ಲಿ..ಹೀಗೆ ಬಗೆಬಗೆಯ ಆಕಾರ ಮತ್ತು ರುಚಿಗಳಲ್ಲಿ ಇಡ್ಲಿ ಹೊಟ್ಟೆ ಸೇರುತ್ತದೆ.
ಕಳೆದ ಕೆಲವು ವರ್ಷದಿಂದ ಮಾರ್ಚ್ 30ನೇ ತಾರೀಖಿನಂದು ಇಡ್ಲಿ ದಿನ ಆಚರಿಸಬೇಕೆಂದು ತಮಿಳ್ನಾಡು ಕೇಟರಿಂಗ್ ಎಂಪ್ಲಾಯೀಸ್ ಯೂನಿಯನ್ ಪ್ರೆಸಿಡೆಂಟ್ ಎಂ.ಜಿ ರಾಜಾಮಣಿ ಘೋಷಿಸುವುದರ ಮೂಲಕ ಇಡ್ಲಿ ದಿನ ಚಾಲ್ತಿಗೆ ಬಂದಿತ್ತು. 2013ರಲ್ಲಿ ಕೊಯಂಬತ್ತೂರು ನಿವಾಸಿಯಾದ ಇನಿಯವನ್ ಎಂಬವರು 128 ಕೆಜಿ ತೂಕದ ಇಡ್ಲಿಯೊಂದನ್ನು ತಯಾರಿಸಿ ಗಿನ್ನೆಸ್ ದಾಖಲೆ ಮಾಡಿದ್ದರು. ಆ ಇಡ್ಲಿ ತಯಾರಿಸಲು 75 ಕೆಜಿ ಅಕ್ಕಿ ಮತ್ತು ಉದ್ದಿನ ಕಾಳು ಬೇಕಾಗಿ ಬಂದಿತ್ತು.
ಎಂಟನೇ ತರಗತಿಯವರೆಗೆ ಮಾತ್ರ ಓದಿದ್ದ ಇನಿಯವನ್ ಆಟೋಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾಗ ಇಡ್ಲಿ ತಯಾರಿಸುವ ಮಹಿಳೆಯೊಬ್ಬಳನ್ನು ಪರಿಚಯವಾಗಿದ್ದು, ಅಷ್ಟೊಂದು ದೊಡ್ಡ ಇಡ್ಲಿ ತಯಾರಿಸಲು ಆತನಿಗೆ ಆ ಪರಿಚಯವೇ ಪ್ರೇರಣೆಯಾಗಿತ್ತು. ವಿಧವಿಧದ ಇಡ್ಲಿಗಳನ್ನು ತಯಾರಿಸುವುದರ ಬಗ್ಗೆ ಸದಾ ಪ್ರಯೋಗಗಳನ್ನು ನಡೆಸುತ್ತಿರುವ ಇನಿಯವನ್ 2000 ವಿಧದ ಇಡ್ಲಿಗಳನ್ನು ತಯಾರಿಸಿ ದಾಖಲೆ ಸೃಷ್ಟಿಸಿದ್ದರು. ಈತನ ಈ ಪ್ರಯೋಗಗಳನ್ನು ಗೌರವಿಸಿ ಅಮೆರಿಕದ ವಿವಿಯೊಂದು ಈತನಿಗೆ ಗೌರವ ಡಾಕ್ಟರೇಟ್‌ನ್ನೂ ನೀಡಿತ್ತು.
ಮಾರ್ಚ್ 30ರಂದೇ ಇಡ್ಲಿ ದಿನ ಆಚರಣೆ ಮಾಡಲಿಕ್ಕೂ ಒಂದು ಮಹತ್ವದ ಕಾರಣವಿದೆ. ಯಾಕೆಂದರೆ ಮಾ.30 ಇನಿಯವಣ್ ಜನ್ಮದಿನವಾಗಿದೆ.
ಅಂದಹಾಗೆ ಇಡ್ಲಿ ಎಂಬುದು ಬರೀ ತಿಂಡಿಯಲ್ಲ. ಅದಕ್ಕೊಂದು ಇತಿಹಾಸವಿದೆ. ಈ ಇತಿಹಾಸದ ಪುಟಗಳನ್ನು ಕೆದಕುವಾಗ ಮೊದಲು ಬರುವ ಪ್ರಶ್ನೆ ಮೊದಲ ಬಾರಿಗೆ ಇಡ್ಲಿಯನ್ನು ತಯಾರಿಸಿದ್ದು ಯಾರು? ಎಂಬುದು.
ಕ್ರಿಸ್ತ ಶಕ 920ರಲ್ಲಿ ಕನ್ನಡ ಭಾಷೆಯಲ್ಲಿ ಶಿವಕೋಟಿ ಆಚಾರ್ಯರು ಬರೆದ ವಡ್ಡರಾಧನೆ ಎಂಬ ಕೃತಿಯಲ್ಲಿ ಮತ್ತು ಕ್ರಿಸ್ತ ಶಕ 1130ರಲ್ಲಿ ಪ್ರಕಟವಾದ ಸಂಸ್ಕೃತ ಕೃತಿ ಮಾನಸೊಲ್ಲಾಸದಲ್ಲಿಯೂ ಇಡ್ಲಿ ಬಗ್ಗೆ ಉಲ್ಲೇಖವಿದೆ. 17ನೇ ಶತಮಾನದಲ್ಲಿನ ತಮಿಳು ಕೃತಿಗಳಲ್ಲಿಯೂ ಇಡ್ಲಿಯ ಬಗ್ಗೆ ವ್ಯಾಖ್ಯಾನಗಳಿವೆ. 10 ಮತ್ತು 12 ನೇ ಶತಮಾನದ ಮಧ್ಯೆ ದಕ್ಷಿಣ ಭಾರತಕ್ಕೆ ಬಂದ ಸೌರಾಷ್ಟ್ರದವರು ಇಡ್ಲಿಯನ್ನು ದಕ್ಷಿಣ ಭಾರತೀಯರಿಗೆ ಪರಿಚಯಿಸಿದ್ದರು ಎಂದು ಹೇಳಲಾಗುತ್ತಿದೆ. ಅದೇ ವೇಳೆ ಇಡ್ಡ ಎಂಬ ಹೆಸರಿನಲ್ಲಿ ಉದ್ದಿನ ಕಾಳು ಮತ್ತು ಅಕ್ಕಿಯನ್ನು ಸೇರಿ ಅದನ್ನು ಆವಿಯಲ್ಲಿ ಬೇಯಿಸುವ ತಿಂಡಿ ಗುಜರಾತ್ ಮೂಲದ್ದು ಎಂಬ ವಾದವೂ ಇದೆ.
ದಕ್ಷಿಣ ಭಾರತದಲ್ಲಿ ಬೆಳಗ್ಗಿನ ಪ್ರಧಾನ ತಿಂಡಿಯಾಗಿ ಮಾರ್ಪಟ್ಟಿರುವ ಇಡ್ಲಿಯನ್ನು ಭಾರತೀಯರಿಗಿಂತ ಮೊದಲು ಇಂಡೋನೇಷ್ಯಾದವರೇ ತಯಾರಿಸಿದ್ದಾರೆ ಎಂಬ ವಾದವೂ ಇದೆ. ಫರ್ಮಂಟೇಷನ್ ಪ್ರಕ್ರಿಯೆ ಮೂಲಕ ಮುನ್ನಾದಿನ ತಯಾರಿಸಿಟ್ಟ ಹಿಟ್ಟನ್ನು ಮರುದಿನ ಆವಿಯಲ್ಲಿ ಬೇಯಿಸುವ ಮೂಲಕ ಇಡ್ಲಿ ತಯಾರಿಸಲಾಗುತ್ತದೆ. ಫರ್ಮಂಟೇಷನ್ ವಿದ್ಯೆ ಮೊದಲು ಆರಂಭಿಸಿದ್ದು ಇಂಡೋನೇಷ್ಯಾದಲ್ಲಿ ಎಂದು ಚರಿತ್ರಾಪುಟಗಳು ಹೇಳುತ್ತವೆ
ಏನೇ ಆಗಲಿ, ಇಡ್ಲಿ ಎಂಬುದು ನಮ್ಮ ಬ್ರೇಕ್‌ಫಾಸ್ಟ್ ಮೆನುವಿನಲ್ಲಿ ಅಗ್ರ ಸ್ಥಾನ ಪಡೆದುಕೊಂಡಿರುವುದಕ್ಕೆ ಅದರ ರುಚಿಯೇ ಕಾರಣ ಎಂಬುದನ್ನು ಮಾತ್ರ ಅಲ್ಲಗೆಳೆಯುವಂತಿಲ್ಲ.
ಸಂಗ್ರಹ: ಕಶಿಮೋಹನ್ ಕುಮಾರ್