‘ಯಲಾ ಕುನ್ನಿ’ ಚಿತ್ರದ ಟೀಸರ್ ರಿಲೀಸ್: ವಜ್ರಮುನಿ ಗತ್ತು ತೋರಿಸಿದ ಕೋಮಲ್!
ಬೆಂಗಳೂರು: ಕನ್ನಡ ಚಿತ್ರರಂಗವನ್ನು ದಶಕಗಳ ಕಾಲ ತಮ್ಮ ಭಯಂಕರ ನಟನೆಯ ಮೂಲಕ ಆಳಿದ, “ಎಲ್ಲಾ ವಿಲ್ಲನ್‌ಗಳ ಅಪ್ಪ” ವಜ್ರಮುನಿ ಅವರ ಖ್ಯಾತ ಡೈಲಾಗ್ “ಯಲಾ ಕುನ್ನಿ’ ಈಗ ಒಂದು ಚಿತ್ರದ ಶೀರ್ಷಿಕೆಯಾಗಿ ತೆರೆಗೆ ಬರುತ್ತಿದೆ. ಸೆನ್ಸೇಷನಲ್ ಸ್ಟಾರ್ ಕೋಮಲ್ ಕುಮಾರ್ ಅವರು ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಟೀಸರ್ ಈಗ ಬಿಡುಗಡೆ ಆಗಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.
ಚಿತ್ರದ ಟೀಸರ್ ನಲ್ಲಿ ವಜ್ರಮುನಿ ವೇಷ ಧರಿಸಿ ಗ್ರಾಂಡ್ ಎಂಟ್ರಿ ಕೊಡುವ ಕೋಮಲ್ ಅವರನ್ನು ಒಮ್ಮೆ ನೋಡಿದಾಗ, ‘ಸಂಪತ್ತಿಗೆ ಸವಾಲ್’ ಚಿತ್ರದಲ್ಲಿ ಅಬ್ಬರಿಸಿ ಬೊಬ್ಬಿರಿದ ವಜ್ರಮುನಿ ಅವರು ನೆನಪಾಗದೆ ಇರಲು ಸಾಧ್ಯವಿಲ್ಲ. ಆ ಉರಿ ಜ್ವಾಲೆಯನ್ನು ಹೊರಚೆಲ್ಲುವ ಕಣ್ಣುಗಳು, ಆ ತಿರುವಿದ ಮೀಸೆ, ಆ ಮುಖ ಭಾವನೆ, ನಿಮ್ಮನ್ನು ನಟ ಭಯಂಕರ ವಜ್ರಮುನಿ ಅವರನ್ನು ಒಮ್ಮೆ ಕಣ್ಣಮುಂದೆ ತರಿಸುತ್ತದೆ.
ಈ ಚಿತ್ರವು ನರಸಿಂಹ ಸಿನಿಮಾಸ್ ಹಾಗೂ ಸೌಂದರ್ಯ ಲಹರಿ ಪ್ರೊಡಕ್ಷನ್ ಹೌಸ್ ನಿಂದ ನಿರ್ಮಾಣ ಆಗುತ್ತಿದೆ. ಅನಸೂಯಾ ಕೋಮಲ್ ಕುಮಾರ್, ಸಹನಾ ಮೂರ್ತಿ ಹಣ ಹೂಡಿಕೆ ಮಾಡಿದ್ದಾರೆ. ಚಿತ್ರದ ರಚನೆ, ಸಾಹಿತ್ಯ, ಸಂಭಾಷಣೆ ಹಾಗೂ ನಿರ್ದೇಶನ ಮಾಡಿರುವುದು ಎನ್.ಆರ್. ಪ್ರದೀಪ್, ಈ ಚಿತ್ರಕ್ಕೆ ಸಂಗೀತ ದರ್ಮವಿಶ್, ಸಂಕಲನ ದೀಪು ಎಸ್ ಕುಮಾರ್, ಛಾಯಾಗ್ರಹಣ ಹಾಲೇಶ್.ಎಸ್ ಮಾಡಿದ್ದಾರೆ.
ಈ ಚಿತ್ರದ ಇನ್ನೊಂದು ವಿಶೇಷ ಎಂದರೆ, ಯಲಾ ಕುನ್ನಿ ಚಿತ್ರದಲ್ಲಿ ವಜ್ರಮುನಿ ಅವರ ಮೊಮ್ಮಗ ಆಕರ್ಷ ವಜ್ರಮುನಿ ಕೂಡ ಬಣ್ಣ ಹಚ್ಚಿದ್ದಾರೆ. ವಜ್ರಮುನಿ ಅಭಿಮಾನಿಗಳು ಈ ಚಿತ್ರವನ್ನು ತೆರೆಯ ಮೇಲೆ ನೋಡಲು ಅತೀವ ಕುತೂಹಲದಿಂದ ಕಾಯುತ್ತಿದ್ದಾರೆ.