“ಯಲಾಕುನ್ನಿ”: ಈ ವಾರ ಕೋಮಲ್ ಕುಮಾರ್ ಹೊಸ ಅವತಾರ!

ಬೆಂಗಳೂರು: ಅಭಿಮಾನಿಗಳು ಕಾಯುತ್ತಿದ್ದ “ಯಲಾಕುನ್ನಿ” ಸಿನಿಮಾ ಅಕ್ಟೋಬರ್ 25 ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಕೋಮಲ್ ಕುಮಾರ್ ಅವರು ಮೊದಲ ಬಾರಿಗೆ ದ್ವಿಪಾತ್ರದಲ್ಲಿ ಅಭಿನಯಿಸುತ್ತಿದ್ದು, ಇದರಲ್ಲಿ ಪ್ರಮುಖವಾಗಿ ಅವರು ಕನ್ನಡದ ದಿಗ್ಗಜ ನಟ ವಜ್ರಮುನಿ ಅವರ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಲುಕ್ ಅಭಿಮಾನಿಗಳನ್ನು ಫಿದಾ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.
ನಿರ್ದೇಶಕ ಎನ್.ಆರ್ ಪ್ರದೀಪ್ ಬರೆದ ಕಥೆ ಮತ್ತು ಚಿತ್ರಕಥೆ ಈ ಸಿನಿಮಾದ ಪ್ರಮುಖ ಆಕರ್ಷಣೆಯಾಗಿದ್ದು, ಹಳ್ಳಿ ಸೊಗಡಿನಲ್ಲಿ ಮೂಡಿಬಂದಿರುವ “ಯಲಾಕುನ್ನಿ” ಚಿತ್ರದಲ್ಲಿ ದತ್ತಣ್ಣ, ಸಾಧು ಕೋಕಿಲ, ಮಿತ್ರ, ಸುಚೇಂದ್ರ ಪ್ರಸಾದ್, ಮಾನಸಿ ಸುಧೀರ್ ಸೇರಿದಂತೆ ದೊಡ್ಡ ತಾರಾಬಳಗ ಕಾಣಿಸಿಕೊಳ್ಳುತ್ತಿದ್ದಾರೆ.
ವಜ್ರಮುನಿ ಮೊಮ್ಮಗ ಆಕರ್ಶ್ ಈ ಚಿತ್ರದ ಮೂಲಕ ಬೆಳ್ಳಿ ತೆರೆಯ ಪ್ರವೇಶ ಮಾಡಿದ್ದು, ಮಯೂರ ಪಟೇಲ್ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಧರ್ಮ ವಿಶ್ ಅವರು ಸಂಗೀತ ನಿರ್ದೇಶನ ಮಾಡಿದ್ದು, ಹಾಲೇಶ್ ಭದ್ರಾವತಿ ಅವರ ಛಾಯಾಗ್ರಹಣ ಚಿತ್ರಕ್ಕೆ ಹೊಸ ಶೈಲಿಯನ್ನು ತಂದಿದೆ.
“ಮೇರಾ ನಾಮ್ ವಜ್ರಮುನಿ” ಎಂಬ ಅಡಿಬರಹವು ಈ ಚಿತ್ರಕ್ಕೆ ಮತ್ತಷ್ಟು ಕುತೂಹಲವನ್ನು ಹೆಚ್ಚಿಸುತ್ತಿದೆ. ಹಾಸ್ಯ, ಎಮೋಷನಲ್ ಸೀನ್ಸ್, ಸಾಹಸಗಳೊಂದಿಗೆ ಕಮರ್ಷಿಯಲ್ ಎಂಟರ್‌ಟೈನರ್ ಆಗಿರುವ “ಯಲಾಕುನ್ನಿ” ಎಲ್ಲ ವಯೋಮಾನದ ಪ್ರೇಕ್ಷಕರಿಗೆ ಹಬ್ಬದ ಸಂಭ್ರಮ ನೀಡಲಿದೆಯೆಂದು ನಿರೀಕ್ಷಿಸಲಾಗಿದೆ.