ನಿನಗೆ ಬೇರೆ ಹೆಸರು ಬೇಕೇ…ಸ್ತ್ರೀ ಅಂದರೆ ಅಷ್ಟೇ ಸಾಕೇ…!

ಹೆಣ್ಣು ಹುಟ್ಟುವುದಿಲ್ಲ…ಸಮಾಜದಿಂದ ಮಾಡಲ್ಪಡುತ್ತಾಳೆ…!
ಹುಟ್ಟಿದ ಮಗುವಿಗೇನು ಗೊತ್ತು ತಾನು ಹೆಣ್ಣೋ ಗಂಡೋ ಎಂದು. ಏನೂ ಅರಿವಿಲ್ಲದ ಮಗುವಿನ ಮನಸ್ಸಿಗೆ ಸಮಾಜ ಒಪ್ಪಿಸುವುದು ನೀನು ಹೆಣ್ಣು ಎಂದು. ಹೆಣ್ಣೆಂದರೆ ಹೀಗೆ ಇರಬೇಕು ಎಂದು ಅದೆಷ್ಟೋ ದಶಕಗಳ ಹಿಂದೆಯೇ ಸಮಾಜ ಚಿತ್ರಿಸಿಬಿಟ್ಟಿದೆ.
ಪ್ರಕೃತಿಯ ವಿಶೇಷ ಸೃಷ್ಟಿಯೇ ಹೆಣ್ಣು “ವಜ್ರಾದಪಿ ಕಠೋರಾಣಿ ಮೃದುನೀ ಕುಸುಮಾದಪಿ” ಎಂದು ಹೆಣ್ಣಿನ ಬಗ್ಗೆ ಒಂದು ಮಾತಿದೆ. ಇದರ ಅರ್ಥ ವಜ್ರದಂತೆ ಕಠಿಣ ಹೂವಿನಂತೆ ಮನಸ್ಸು. ಹೆಣ್ಣಿನ ಮಾತು ಕಠಿಣವಾಗಿರಬಹುದು ಆದರೆ ಅವಳ ಮನಸ್ಸು ಹೂವಿನಷ್ಟು ಮೃದು ಎಂದು. ಮೇಲ್ನೋಟಕ್ಕೆ ಹೆಣ್ಣಿನ ಮನಸ್ಸು ಮೃದು ಹಾಗೂ ಕೋಮಲವೆಂದು ಕಂಡುಬಂದರೂ ಆಂತರ್ಯದಲ್ಲಿ ಹೆಣ್ಣಿನ ಸಂಕಲ್ಪಶಕ್ತಿ ದೃಢವಾಗಿರುತ್ತದೆ.
ಹೆಣ್ಣಿನ ಜೀವನವೇ ಒಂದು ಅದ್ಭುತ ಪಯಣ. ಹುಟ್ಟಿದಾಗಿನಿಂದ ಸಾಯುವವರೆಗೂ ಅವಳ ಪಯಣ ಸಾಗುತ್ತಲೇ ಇರುತ್ತದೆ, ಹುಟ್ಟಿದ ಮಗು ಯೌವನಕ್ಕೆ ಬರುವವರೆಗೂ ಹೆತ್ತವರ ಮಾತಿನಂತೆ ನಡೆದುಕೊಳ್ಳುತ್ತಾಳೆ, ತನ್ನ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸುತ್ತಾಳೆ, ಉನ್ನತ ವಿಧ್ಯಾಭ್ಯಾಸ ಪಡೆದುಕೊಳ್ಳುತ್ತಾಳೆ. ತನ್ನ ಹೆತ್ತವರಿಂದ ಹಾಗೂ ನೆರೆ-ಹೊರೆಯವರಿಂದ ಅದೆಷ್ಟೋ ಮಾತುಗಳನ್ನು ಅನಿಸಿಕೊಂಡು ಸಹಿಸಿಕೊಳ್ಳುತ್ತಾಳೆ. ನೀನು ಮತ್ತೊಂದು ಮನೆಗೆ ಹೋಗುವವಳು ಎಂದು ಎಷ್ಟೋ ಬಾರಿ ಅನಿಸಿಕೊಂಡು ಮನಸಲ್ಲಿಯೇ ನೋವು ನುಂಗಿಕೊಳ್ಳುತ್ತಾಳೆ. ಹೆತ್ತವರ ಇಷ್ಟದ ಪ್ರಕಾರ ಮದುವೆ ಸಹ ಆಗುತ್ತಾಳೆ.

ಹೆಣ್ಣು ಮದುವೆಯಾದ ನಂತರ ತನ್ನ ಗಂಡನಿಗಾಗಿ ಬದುಕುತ್ತಾಳೆ, ತನ್ನ ರಕ್ತ ಸಂಭಂಧವನ್ನೆಲ್ಲಾ ತೊರೆದು ಯಾವುದೇ ರಕ್ತ ಸಂಭಂಧವಿಲ್ಲದಿದ್ದರೂ ಮೂರು ಗಂಟಿಗೆ ತಲೆ ಬಾಗಿ ತನ್ನ ಗಂಡನಿಗಾಗಿ ಸಂಬಳವಿಲ್ಲದ ಗುಲಾಮಳಾಗುತ್ತಾಳೆ. ಪ್ರತಿಯೊಂದು ವಿಷಯಕ್ಕೂ ಗಂಡನ ಅನುಮತಿಗಾಗಿ ಕಾಯುತ್ತಾಳೆ. ಒಂದು ರೀತಿಯಲ್ಲಿ ತನ್ನ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಾಳೆ. ಹುಟ್ಟಿನಿಂದ ಬೆಳೆದ ತನ್ನ ಸ್ವಂತ ಮನೆಗೆ ತಾನೇ ಅತಿಥಿ ಆಗುವಳು, ಮದುವೆಯಾಗಿ ಹೋದ ಮನೆಯಲ್ಲೂ ಹೇಳುವರು ನೀನು ಹೊರಗಿನಿಂದ ಬಂದವಳು ಎಂದು.
ಮುಂದಿನ ಹಂತದಲ್ಲಿ ಹೆಣ್ಣು ತಾಯಿಯಾಗುತ್ತಾಳೆ, ಮೊದಲು ಜನಿಸಿದ ಮಗುವಿನ ಬಗ್ಗೆ ಹೆಚ್ಚಿನ ಅರಿವು ಇರುವುದಿಲ್ಲವಾದರೂ ನಂತರದ ದಿನಗಳಲ್ಲಿ ಮಗುವಿನ ಸ್ವಭಾವಕ್ಕೆ ಹೊಂದಿಕೊಳ್ಳುತ್ತಾಳೆ. ಎಂತಹ ಪರಿಸ್ಥಿತಿಯಲ್ಲೂ ತನ್ನ ಮಗುವನ್ನು ಬೇಸರವಿಲ್ಲದೆ ಪೊರೆಯತ್ತಾಳೆ. ಮಗು ಒಂದು ಹಂತಕ್ಕೆ ಬೆಳೆದರೂ, ಅವಳು ಗೃಹಿಣಿಯಾಗಿರಲಿ, ವೃತ್ತಿಪರ ಮಹಿಳೆಯೇ ಆಗಿರಲಿ, ಪ್ರತೀ ಹಂತದಲ್ಲೂ ಮಾಡಬೇಕಾದ ಕರ್ತವ್ಯಗಳನ್ನು ಚಾಚೂ ತಪ್ಪದೆ ನಿಭಾಯಿಸುತ್ತಾಳೆ. ಮಕ್ಕಳು ದೊಡ್ಡವರಾಗುತ್ತಾ ಅವರನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸಿ ಸಮಾಜಕ್ಕೆ ಕೊಡುಗೆಯಾಗಿ ನೀಡುವ ಜಾಣ್ಮೆ ಹೆಣ್ಣಿನಲ್ಲಿದೆ. ಜಗದ ಒಳಿತು-ಕೆಡುಕುಗಳೆರಡನ್ನೂ ತೋರಿಸಿ ಆಯ್ಕೆಯ ಮಾರ್ಗ ಮಕ್ಕಳಿಗೇ ಬಿಡುವಳು. ಎಂತಹ ಸನ್ನಿವೇಷದಲ್ಲೂ, ಏಕಾಂಗಿಯಾಗಿದ್ದಾಗಲೂ ಮಕ್ಕಳನ್ನು ಸಲಹುವ ಸಾಮರ್ಥ್ಯ ಹೆಣ್ಣಿನಲ್ಲಿದೆ.

ಹೆಣ್ಣು ಹುಟ್ಟಲು ಒಂದು ಮನೆಯಾದರೆ ಸಾಯಲು ಮತ್ತೊಂದು ಮನೆ ಸೇರುವಳು. ಹೆಣ್ಣಿಗೆ ಸ್ವಂತ ಮನೆಯೆಂಬುದೇ ಇಲ್ಲ. ʼಸಾಯುವವರೆಗೂ ಹೋರಾಡುವಳು ಕೊನೆಗೊಂದು ದಿನ ಅವಳೇ ಸಾಯಲುʼ.
ಆಧುನಿಕ ಯುಗದಲ್ಲಿ ಹೆಣ್ಣು ಗಂಡಿಗೆ ಸರಿಸಮಾನಳು, ಹೆಣ್ಣು ತನ್ನನ್ನು ಎಲ್ಲಾ ಕ್ಷೇತ್ರಗಳಲ್ಲಿಯೂ ತೊಡಗಿಸಿಕೊಂಡಿದ್ದಾಳೆ, ತನ್ನ ಸಾಮರ್ಥ್ಯವನ್ನು, ಪ್ರಾಭಲ್ಯವನ್ನು ಮೆರೆದಿದ್ದಾಳೆ. ಪ್ರತಿಯೊಂದು ಘಟ್ಟದಲ್ಲೂ ಹೆಣ್ಣು ತಾನು ಅಬಲೆಯಲ್ಲ, ಸಬಲೆ ಎಂಬುದನ್ನು ಸಾಧಿಸಿ ತೋರಿಸಿದ್ದಾಳೆ. ಒಳಗಿನ ಹಾಗೂ ಹೊರಗಿನ ಕೆಲಸಗಳೆರಡನ್ನೂ ಶ್ರೇಣೀಕರಿಸದೆ ಸಮಾನ ಆಸಕ್ತಿಯಿಂದ, ಸಮಾನ ಪ್ರೀತಿಯಲ್ಲಿ, ಸಮಾನ ದಕ್ಷತೆಯಲ್ಲಿ ನಿಭಾಯಿಸುವ ಈ ಗುಣವೇ ಸ್ರ್ತೀಯಲ್ಲಿರುವ ವಿಶಿಷ್ಟತೆ. ಎಂತಹ ಕೆಲಸವನ್ನೇ ಆಗಲಿ ಸಮರ್ಪಕವಾಗಿ ನಿಭಾಯಿಸುವ ಶಕ್ತಿ ಆಕೆಯದು.
ಬದುಕಿನ ಜೊತೆ ತಾಳ್ಮೆ…ಜಗತ್ತಿನ ಜೊತೆ ಧೈರ್ಯದಿಂದ ಹೆಣ್ಣು ತನ್ನನ್ನು ತಾನು ಸೃಷ್ಟಿಸಿಕೊಳ್ಳುತ್ತಿದ್ದಾಳೆ. ಸಮಾಜದಿಂದ ಮಾಡಲ್ಪಟ್ಟ ಹೆಣ್ಣು ಸುಳ್ಳು ಎಂದು ಸಾಭೀತು ಪಡಿಸುತ್ತಿದ್ದಾಳೆ.
ಹೇಮ ನಿರ್ಭಯ
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿನಿ