ನಟ ಸುದೀಪ್ ತಾಯಿ ಸರೋಜ ಇನ್ನಿಲ್ಲ: ತಾಯಿ ಇಲ್ಲದೆ ತಬ್ಬಲಿಯಾದ ಕಿಚ್ಚ..!
ಬೆಂಗಳೂರು: ಕನ್ನಡ ಚಿತ್ರರಂಗದ ಬಾದ್ಶಾ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ತಾಯಿ ಸರೋಜ ಅವರು ಇಂದು ಬೆಳಿಗ್ಗೆ ಇಹಲೋಕ ತ್ಯಜಿಸಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಜಯನಗರದಲ್ಲಿ ಇರುವ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಬೆಳಗ್ಗೆ ಸುಮಾರು 7 ಗಂಟೆಗೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಈ ಆಘಾತಕಾರಿ ಸುದ್ದಿ ಕಿಚ್ಚನ ಕುಟುಂಬವನ್ನು ದುಃಖದ ಕಡಲಲ್ಲಿ ನೂಕಿದೆ.
ಅಂತಿಮ ದರ್ಶನ:
ಸರೋದ ಅವರ ಮೃತದೇಹದ ಅಂತಿಮ ದರ್ಶನಕ್ಕಾಗಿ ಸುದೀಪ್ ಅವರ ಜೆಪಿ ನಗರದ ನಿವಾಸದಲ್ಲಿ ಮದ್ಯಾಹ್ನ 12 ಗಂಟೆಯಿಂದ ಅನುವು ಮಾಡಿಕೊಡಲಾಗುವುದು ಎಂದು ಹೇಳಲಾಗಿದೆ.
ಬಿಗ್ ಬಾಸ್ ಶೂಟಿಂಗ್‌ನಲ್ಲಿದ್ದ ಸುದೀಪ್:
ಕಿಚ್ಚ ಸುದೀಪ್ ಅವರು ನಿರೂಪಕರಾಗಿ ನಡೆಸಿಕೊಡುವ ಬಿಗ್ ಬಾಸ್ ಕನ್ನಡ ಸೀಸನ್ 11 ರ ಶೂಟಿಂಗ್ ನಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ ಬರ ಸಿಡಿಲಿನಂತೆ ಬಂದಿತ್ತು ಈ ಸುದ್ದಿ. ಸಮಯ ವ್ಯರ್ಥ ಮಾಡದೆ ಸುದೀಪ್ ಬೇಗನೆ ಶೂಟಿಂಗ್ ಮುಗಿಸಿ ಆಸ್ಪತ್ರೆಗೆ ಓಡಿದರು ಎಂದು ತಿಳಿದು ಬಂದಿದೆ.
ತುಳು ನಾಡಿಗೆ ಹಾಗೂ ಸುದೀಪ್ ತಾಯಿಯವರಿಗಿದೆ ನಂಟು:
ಸುದೀಪ್ ಅವರ ತಾಯಿ ಸರೋಜ ಅವರು ಮಂಗಳೂರು ಮೂಲದವರು. ಹೀಗೆಂದು ಸುದೀಪ್ ಅವರು ವಿಕ್ರಾಂತ ರೋಣ ಚಿತ್ರದ ಸಂದರ್ಶನ ಒಂದರಲ್ಲಿ ಸುದೀಪ್ ತಿಳಿಸಿದ್ದರು. ತುಳು ಭಾಷೆ ನನಗೆ ತುಂಬಾ ಇಷ್ಟ, ನನ್ನ ಅಜ್ಜಿ ಕೂಡಾ ತುಳು ಮಾತನಾಡುತ್ತಿದ್ದರು ಎಂದು ಅಜ್ಜಿ ಮನೆ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದ್ದರು ಕಿಚ್ಚ.
ತಾಯಿ ಇಲ್ಲದೆ ತಬ್ಬಲಿಯಾದ ಕಿಚ್ಚ:
ಸರೋಜ ಅವರಿಗೆ ಮೂರು ಮಕ್ಕಳು. ಎರಡು ಹೆಣ್ಣು ಹಾಗೂ ಒಂದು ಗಂಡು. ಅವರ ಅಗಲಿಕೆ ಈ ಮೂರು ಮಕ್ಕಳನ್ನು ತಬ್ಬಲಿ ಮಾಡಿದೆ. ಇದರೊಂದಿಗೆ ಸುದೀಪ್ ತಂದೆ ಸಂಜೀವ್ ಅವರು ಕೂಡ ಪತ್ನಿ ಶೋಕವನ್ನು ಅನುಭವಿಸುತ್ತಿದ್ದಾರೆ.