ಜಲಿಯನ್ ವಾಲಾ ಬಾಗ್ ಹತ್ಯಾಕಾಂಡಕ್ಕೆ ಈಗ 105 ವರ್ಷ.
ನವದೆಹಲಿ: ಪಂಜಾಬ್ ಪ್ರಾಂತ್ಯದ ಅಮೃತ್ಸರ್ ನಗರದಲ್ಲಿ ಏಪ್ರಿಲ್ 13, 1919ರಲ್ಲಿ ರೌಲಟ್ ಕಾಯ್ದೆ ವಿರುದ್ಧ ಹೋರಾಟಗಾರರು ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದರು. ಅಷ್ಟಲ್ಲದೆ ಆವತ್ತು ಬೈಸಾಕಿ ಹಬ್ಬವು ಕೂಡ ನಡೆಯುತ್ತಿತ್ತು. ಮೂರು ದಿಕ್ಕಿನಿಂದ ಗೋಡೆಗಳಿಂದ ಸುತ್ತುವರಿದ ಹಾಗೂ ಬರಲು ಹಾಗೂ ಹೋಗಲು ಒಂದೇ ದಾರಿ ಇದ್ದ ಸ್ಥಳದಲ್ಲಿ ಸೇರಿದ ಜನರ ಮೇಲೆ ಆವತ್ತು ಊಹಿಸಲು ಅಸಾಧ್ಯವಾದ ಘಟನೆ ನಡೆಯಿತು.
ಪಂಜಾಬಿನ ಗವರ್ನರ್ ಮೈಕೆಲ್ ಓ’ಡ್ವೈರ್ ಆದೇಶದ ಮೇರೆಗೆ, ಆಂಗ್ಲೋ-ಇಂಡಿಯನ್ ಬ್ರಿಗೇಡಿಯರ್. ಆರ್.ಇ.ಎಚ್ ಡೈಯರ್, ತನ್ನ ಗೂರ್ಖಾ ಬ್ರೀಟಿಷ್ ಇಂಡಿಯನ್ ಆರ್ಮಿಯ ತುಕಡಿಯಿಂದ, ನೆರೆದಂತಹ ಎಲ್ಲಾ ಶಾಂತಿಪ್ರಿಯ ಹೋರಾಟಗಾರರ ಮೇಲೆ ಗುಂಡಿನ ಸುರಿಮಳೆ ಸುರಿಸಿದರು. ಮಕ್ಕಳು, ವಯಸ್ಕರು, ಮಹಿಳೆಯರು, ವೃದ್ದರು ಸೇರಿ ಸರಿಸುಮಾರು 379 ಮಂದಿ ಅಂದು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದರು.
ಈ ಹತ್ಯಾಕಾಂಡದ ಬೂದಿಯಿಂದಲೇ ಹುಟ್ಟಿದ್ದು ಕ್ರಾಂತಿಕಾರಿಗಳು. ಭಗತ್ ಸಿಂಗ್, ಉದಯ್ ಸಿಂಗ್, ಚಂದ್ರಶೇಖರ್ ಆಜಾದ್ ಹೀಗೆ ಹಲವಾರು ವೀರ ಪುರುಷರು. ಇಂದು ಈ ಜಲಿಯನ್ ವಾಲಾ ಬಾಗ್ ಕರಾಳ ನರಮೇಧಕ್ಕೆ 105 ವರ್ಷಗಳು ಸಂದಿವೆ. ಇಂದು ನಮಗಾಗಿ ಬಲಿಯಾದ ನೂರಾರು ಹುತಾತ್ಮರನ್ನು ನೆನೆಯುವ ದಿನ.