ಪೌರಕಾರ್ಮಿಕರ ಮೇಲಿನ ಹಲ್ಲೆ ಹಾಗೂ ಜಾತಿ ನಿಂದನೆ ಕಾನೂನು ರೀತಿಯಲ್ಲಿ ಅಪರಾಧ: ಸರ್ಕಾರದ ಎಚ್ಚರಿಕೆ!
ಬೆಂಗಳೂರು: ರಾಜ್ಯದ ಎಲ್ಲಾ ಮಹಾನಗರಪಾಲಿಕೆ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತಿ ವ್ಯಾಪ್ತಿಯ ಪೌರಕಾರ್ಮಿಕರ ಮೇಲೆ ಹಲ್ಲೆ ಮಾಡುವುದು, ಅಥವಾ ಜಾತಿಯ ಹೆಸರಿನಲ್ಲಿ ನಿಂದನೆ ನಡೆಸುವುದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಸರ್ಕಾರ ಮತ್ತೆ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ, ಸ್ಥಳೀಯ ನಿವಾಸಿಗಳು ಮತ್ತು ಸಾರ್ವಜನಿಕರು ಪೌರಕಾರ್ಮಿಕರೊಂದಿಗೆ ಗೌರವಯುತವಾಗಿ ನಡೆದುಕೊಳ್ಳಬೇಕಾಗಿದೆ.
ಭಾರತೀಯ ಸಂವಿಧಾನದ 17ನೇ ವಿಧಿಯು `ಅಸ್ಪೃಶ್ಯತೆ’ ನಿಷೇಧಿಸಿರುವಂತೆಯೇ, ಸ್ವಚ್ಛತಾ ಕಾರ್ಮಿಕರ ಮೇಲಿನ ಜಾತೀಯ ನಿಂದನೆ ಅಥವಾ ಯಾವುದೇ ತಾರತಮ್ಯವು ಅಪರಾಧವಾಗಿದೆ. ಈ ಬಗ್ಗೆ ನಗರಾಭಿವೃದ್ಧಿ ಇಲಾಖೆ ಪೌರಾಡಳಿತ ನಿರ್ದೇಶನಾಲಯವು ಮಹತ್ವದ ಪ್ರಕಟಣೆ ನೀಡಿದ್ದು, ಪೌರಕಾರ್ಮಿಕರನ್ನು ಗೌರವದಿಂದ ನಡೆಸಿಕೊಳ್ಳುವುದು, ಮತ್ತು ಅವರಿಗೆ ಅಗತ್ಯವಾದ ಘನತೆ ನೀಡುವುದು ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಜವಾಬ್ದಾರಿಯಾಗಿದೆ ಎಂದು ತಿಳಿಸಿದೆ.
ಪೌರಕಾರ್ಮಿಕರು ನಮ್ಮ ವಾಸಸ್ಥಳವನ್ನು ಸ್ವಚ್ಛಗೊಳಿಸುವ ಮೂಲಕ ನಮ್ಮ ಆರೋಗ್ಯ ಮತ್ತು ಪರಿಸರವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಈ ಹಿನ್ನೆಲೆ, ಎಲ್ಲರೂ ಅವರ ಸೇವೆಯನ್ನು ಗೌರವದಿಂದ ಸ್ವೀಕರಿಸಬೇಕು.