ವಿಶೇಷ ಅಂಕಣ - ಅಂತರಂಗದ ಚಳವಳಿ

ರಂಜಾನ್ ಉಪವಾಸದ ಹೊತ್ತಿನಲ್ಲಿ ಮತ್ತು ಸಿಎಎ ಅನುಷ್ಠಾನದ ಸಂದರ್ಭದಲ್ಲಿ………

ವಿವೇಕಾನಂದ. ಎಚ್. ಕೆ.

ಧರ್ಮದ ಆಧಾರದಲ್ಲಿ ನಿರ್ಧರಿಸಬೇಕೆ ?
ಸಂವಿಧಾನದ ಆಧಾರದ ಮೇಲೆ ನಿರ್ಧರಿಸಬೇಕೆ ?
ಸತ್ಯ ಮತ್ತು ಸಮನ್ವಯದ ಆಧಾರದ ಮೇಲೆ ನಿರ್ಧರಿಸಬೇಕೆ ?
ನೈತಿಕತೆಯ ಆಧಾರದ ಮೇಲೆ ನಿರ್ಧರಿಸಬೇಕೆ ?
ಅವರ ನಡವಳಿಕೆಗಳ ಆಧಾರದ ಮೇಲೆ ನಿರ್ಧರಿಸಬೇಕೆ ?
ಐತಿಹಾಸಿಕ ಮತ್ತು ಜಾಗತಿಕ ಪರಿಸ್ಥಿತಿಯ ಮೇಲೆ ನಿರ್ಧರಿಸಬೇಕೆ ?
ದೇಶದ ಶಾಂತಿ ಸುವ್ಯವಸ್ಥೆಯ ಆಧಾರದ ಮೇಲೆ ನಿರ್ಧರಿಸಬೇಕೆ ?

ಹೀಗೆ ನಾನಾ ಪ್ರಶ್ನೆಗಳು ಮುಸ್ಲಿಂ ಅಲ್ಲದ, ಯಾವುದೇ ಪಕ್ಷ ಸಿದ್ದಾಂತದ ಒಲವುಗಳಿಲ್ಲದ ಸಾಮಾನ್ಯ ಜನರನ್ನು ಕಾಡುತ್ತಿದೆ.

ಮುಸ್ಲಿಮರನ್ನು ಪ್ರೀತಿಸಬೇಕೆ ? ದ್ವೇಷಿಸಬೇಕೆ ? ಸಮಾನತೆ, ಸ್ವಾತಂತ್ರ್ಯ, ಹಕ್ಕು ಮತ್ತು ಕರ್ತವ್ಯಗಳು ಸಮಾನವೇ ಅಥವಾ ಪ್ರತ್ಯೇಕವೇ ? ಅವರು ನಮ್ಮೊಳಗಿನ ಒಬ್ಬರೇ ಅಥವಾ ಎಂದೆಂದಿಗೂ ನಮಗಿಂತ ಭಿನ್ನವೇ ? ಅವರನ್ನು ಸಂಪೂರ್ಣ ನಂಬಬೇಕೆ ಅಥವಾ ಅನುಮಾನ ವ್ಯಕ್ತಪಡಿಸಿ ಅವರ ಮೇಲೆ ನಿಯಂತ್ರಣ ಸಾಧಿಸಬೇಕೆ ? ಎಂಬುದು ಜನಸಾಮಾನ್ಯರ ಗೊಂದಲ….

ಮೂಲಭೂತವಾಗಿ ಒಂದು ವಿಷಯವನ್ನು ಗ್ರಹಿಸಬೇಕಾದರೆ ಮನಸ್ಸು ವಿಶಾಲವಾಗಿರಬೇಕು, ಸಮಗ್ರತೆಯನ್ನು ಹೊಂದಿರಬೇಕು, ಪ್ರೀತಿ, ಮಾನವೀಯತೆ ನಾಗರೀಕತೆಯನ್ನು ಅಳವಡಿಸಿಕೊಂಡಿರಬೇಕು, ದ್ವೇಷ ಅಸೂಯೆ ಮುಂತಾದ ಅರಿಷಡ್ವರ್ಗಗಳ ಮೇಲೆ ನಿಯಂತ್ರಣ ಹೊಂದಿರಬೇಕು. ಆಗ ವಿಷಯವನ್ನು ಗ್ರಹಿಸುವುದು ಸುಲಭವಾಗುತ್ತದೆ. ಮನಸ್ಸು ಪೂರ್ವಾಗ್ರಹ ಪೀಡಿತವಾದರೆ ಅಥವಾ ಕೆಲವು ಘಟನೆಗಳಿಂದ ಪ್ರಭಾವ ಹೊಂದಿದ್ದರೆ ವಿಷಯವನ್ನು ಅರ್ಥ ಮಾಡಿಕೊಳ್ಳುವುದು, ವಾಸ್ತವ ನೆಲೆಯಲ್ಲಿ ಅರಿಯುವುದು ಕಷ್ಟವಾಗುತ್ತದೆ. ಆದರೂ ಒಂದಷ್ಟು ಸಮಚಿತ್ತ ಮನೋಭಾವದಿಂದ ಈ ವಿಷಯವನ್ನು ವಿಮರ್ಶಿಸುವ ಪ್ರಯತ್ನವಿದು….‌

ಮೂಲಭೂತವಾಗಿ ಸಿಂಧೂ ನದಿ ನಾಗರಿಕತೆಯ ಹಿಂದೂ ಜೀವನಶೈಲಿಯ ದೇಶ ಈ ಭಾರತ ಉಪಖಂಡ. ನಂತರದಲ್ಲಿ ಇಸ್ಲಾಂ ಧರ್ಮದ ಸಾಮ್ರಾಜ್ಯ ಶಾಹಿಗಳು ಅಂದಿನ ವಿಸ್ತರಣವಾದದ ಭಾಗವಾಗಿ ಭಾರತದ ಮೇಲೆ ದಂಡೆತ್ತಿ ಬಂದು ಕೆಲವು ಭಾಗಗಳಲ್ಲಿ ಅಧಿಪತ್ಯ ಸ್ಥಾಪಿಸಿದರು.

ಸಹಜವಾಗಿ ಇಸ್ಲಾಂ ಮತ್ತು ಇಲ್ಲಿನ ಸನಾತನ ಧರ್ಮದ ಆಚರಣೆಗಳು ಭಿನ್ನ ಮತ್ತು ವಿರುದ್ಧ ಆಚರಣೆಗಳನ್ನು ಹೊಂದಿರುವ ಕಾರಣಕ್ಕಾಗಿ ದ್ವೇಷ ಬೆಳೆದುಬಂದಿತು. ಅಲ್ಲದೇ ಮುಸ್ಲಿಂ ದಾಳಿಕೋರರು ಇಲ್ಲಿನ ದೇವಾಲಯಗಳ ಮೇಲೆ ದಾಳಿ ಮಾಡಿ ಅದನ್ನು ದ್ವಂಸಗೊಳಿಸಿದ ಘಟನೆಗಳು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಇಲ್ಲಿನ ಜನರಲ್ಲಿ ಇಸ್ಲಾಂ ಬಗ್ಗೆ ಅಸಹನೆ ಬೆಳೆಯಲು ಕಾರಣವಾಯಿತು.

ಆಗಲೂ ಭಾರತವೇನು ಐಕ್ಯವಾಗಿರಲಿಲ್ಲ. ಇಲ್ಲಿನ ವಿವಿಧ ಪ್ರಾಂತ್ಯಗಳ ರಾಜರ ನಡುವೆಯೇ ಭೀಕರ ಯುದ್ದಗಳು ನಡೆದಿದೆ ಎಂಬುದು ಐತಿಹಾಸಿಕ ಸತ್ಯ. ಇಲ್ಲಿನ ಜಾತೀಯತೆ, ಪ್ರಾದೇಶಿಕತೆಯ ಭಿನ್ನತೆಯಿಂದಾಗಿ ಭಾರತ ಎಂಬ ಒಟ್ಟು ಪರಿಕಲ್ಪನೆ ಆಗ ಅಷ್ಟಾಗಿ ಇರಲಿಲ್ಲ.

ಹೀಗಿರಬೇಕಾದರೆ, ಬ್ರಿಟಿಷರು, ಪೋರ್ಚುಗೀಸರು, ಫ್ರೆಂಚರು, ಡಚ್ಚರು ನಮ್ಮನ್ನು ಆಕ್ರಮಿಸಿದ್ದು, ಅವರನ್ನು ಹೊರಗಟ್ಟಲು ಹಿಂದೂ ಮುಸ್ಲಿಂ ಮುಂತಾದ ಎಲ್ಲರೂ ಒಂದಾಗಿದ್ದು, ಅದಕ್ಕೆ ಗಾಂಧಿಯವರು ನಾಯಕತ್ವ ವಹಿಸಿದ್ದು, ನಂತರದಲ್ಲಿ ಅನೇಕ ಏರುಪೇರುಗಳಾಗಿ ಧರ್ಮದ ಆಧಾರದ ಮೇಲೆ ಭಾರತ ಪಾಕಿಸ್ತಾನ ವಿಭಜನೆಯಾಗಿದ್ದು, ಪಾಕಿಸ್ತಾನ ಇಸ್ಲಾಂ ಧಾರ್ಮಿಕ ದೇಶವಾದರೆ, ಭಾರತ ಮಹಾತ್ಮ ಗಾಂಧಿಯವರ ಅತ್ಯುನ್ನತ ಮಾನವತಾವಾದದ ಆದರ್ಶದ ಆಧಾರದಲ್ಲಿ ಸರ್ವಧರ್ಮ ಸಮನ್ವಯತೆಯ ಜಾತ್ಯಾತೀತ ರಾಷ್ಟ್ರವಾಗಿದ್ದು, ವಿಭಜನೆಯ ಸಮಯದಲ್ಲಿ ನಡೆದ ಹಿಂದೂ ಮುಸ್ಲಿಂ ಹತ್ಯಾಕಾಂಡ, ಅದರಲ್ಲೂ ಪಾಕಿಸ್ತಾನದಲ್ಲಿ ಅಲ್ಲಿನ ಹಿಂದೂಗಳ ಮೇಲೆ ನಡೆದ ಅತಿಹೆಚ್ಚು ಹಿಂಸೆಗಳು ಎಲ್ಲವೂ ಸೇರಿ ಹಿಂದೂ ಮುಸ್ಲಿಂ ದ್ವೇಷ ಒಳಗೊಳಗೆ ಹೊಗೆಯಾಡುತ್ತಲೇ ಇತ್ತು.

ದೇಶದಲ್ಲಿ ಆಗಾಗ ಮತೀಯ ಘಟನೆಗಳು ಸಂಭವಿಸುತ್ತಿದ್ದವು. ಆದರೆ ಬಾಬರಿ ಮಸೀದಿ ಧ್ವಂಸ ಮತ್ತು ಗುಜರಾತಿನ ಹತ್ಯಾಕಾಂಡ ಮುಸ್ಲಿಮರಿಗೆ ಹಿಂದೂ ಧಾರ್ಮಿಕ ಮುಖಂಡರ ಮೇಲೆ ಕೋಪ ಹೆಚ್ಚಿಸಿದರೆ, ಕಾಶ್ಮೀರಿ ಪಂಡಿತರ ಮೇಲೆ ಅಲ್ಲಿನ ಮುಸ್ಲಿಂ ಭಯೋತ್ಪಾದಕರ ಹತ್ಯಾಕಾಂಡ ಹಿಂದೂಗಳಿಗೆ ಮುಸ್ಲಿಂ ಧಾರ್ಮಿಕ ನಾಯಕರ ಮೇಲೆ ಆಕ್ರೋಶ ಹೆಚ್ಚು ಮಾಡಿದೆ.

ಇದರ ಜೊತೆಗೆ ಚುನಾವಣಾ ರಾಜಕೀಯ ಸಹ ತನ್ನ ಕೊಡುಗೆ ನೀಡುತ್ತಿದೆ. ಕಾಂಗ್ರೆಸ್ ಮುಸ್ಲಿಂ ತುಷ್ಟೀಕರಣದ ನಿಲುವುಗಳನ್ನು ಅತಿರೇಕ ಎಂಬಂತೆ ಮಾಡಿದರೆ ಇದರ ಜಾಡು ಹಿಡಿದ ಬಿಜೆಪಿ ಹಿಂದೂಗಳಲ್ಲಿ ಮುಸ್ಲಿಮರ ಮೇಲಿನ ದ್ವೇಷ ಹೆಚ್ಚಾಗುವಂತೆ ತಂತ್ರ ಹೆಣೆಯುತ್ತಿದೆ.

ಈಗ ನಿಜವಾದ ಸಮಸ್ಯೆ ಇರುವುದು ಭಾರತೀಯ ಸಾಮಾನ್ಯ ಜನರ ನಿಲುವುಗಳಲ್ಲಿ. ಏಕೆಂದರೆ ಮಾಧ್ಯಮಗಳು ಸೇರಿ ಬಹುತೇಕ ಜನರು ಮುಸ್ಲಿಂ ಎಂದರೆ ಭಯೋತ್ಪಾದಕರು, ತಂಟೆಕೋರರು, ಆಕ್ರಮಣಕಾರಿಗಳು, ದೇಶಕ್ಕಿಂತ ಧರ್ಮಕ್ಕೆ ಮಹತ್ವ ಕೊಡುತ್ತಾರೆ, ಅವರು ಅಪಾಯಕಾರಿ ಜನರು ಎಂದು ಭಾವಿಸುವಂತೆ ಮಾಡಲಾಗಿದೆ.

ಹಾಗಾದರೆ ವಾಸ್ತವ ಏನು ?
ನಮ್ಮ ದೇಶದಲ್ಲಿ ಈಗ ಸುಮಾರು 20 ಕೋಟಿ ಮುಸ್ಲಿಮರಿದ್ದಾರೆ. ನೂರಾರು ವರ್ಷಗಳಿಂದ ಇಲ್ಲಿಯ ಮಣ್ಣಿನಲ್ಲಿ ಬೆರೆತು ಹೋಗಿದ್ದಾರೆ. ಜನಜೀವನ ಭಾರತದ ಸಂಸ್ಕೃತಿಗೆ ಒಗ್ಗಿ ಹೋಗಿದೆ. ಈಗ ಭಾರತವೇ ಅವರ ಮಾತೃ ದೇಶ. ಆದರೆ ಹಿಂದುತ್ವದ ಸಂಘಟನೆಗಳು ಇದನ್ನು ಒಪ್ಪುತ್ತಿಲ್ಲ. ಅವರನ್ನು ಎರಡನೇ ದರ್ಜೆಯ ನಾಗರಿಕರಂತೆ ನೋಡುತ್ತಿವೆ. ಹಿಂದುಗಳ ನಂತರ ಮುಸ್ಲಿಮರು ಎಂಬ ಭಾವನೆ ಬೆಳೆಯುತ್ತಿದೆ, ಅದಕ್ಕೆ ಪ್ರತಿಕ್ರಿಯೆಯಾಗಿ ಮುಸ್ಲಿಮರು ಹಿಂಸಾತ್ಮಕವಾಗಿ ವರ್ತಿಸುತ್ತಿರುವ‌ ಘಟನೆಗಳು ನಡೆಯುತ್ತಿವೆ. ಸೇಡು – ದ್ವೇಷ ಭುಗಿಲೆದ್ದಿದೆ. ಎನ್ ಆರ್ ಸಿ ಮತ್ತು ಸಿ ಎ ಎ ತಿದ್ದುಪಡಿಗಳು ಇದಕ್ಕೆ ಮತ್ತಷ್ಟು ಪ್ರಚೋದನೆ ನೀಡಿದೆ.

ಕಾರಣಗಳು ಏನೇ ಇರಲಿ, ಮುಸ್ಲಿಮರು ಈಗ ಭಾರತದ ಅವಿಭಾಜ್ಯ ಅಂಗ ಮತ್ತು ಭಾರತೀಯರೆ. ಇಲ್ಲಿ ಯಾವುದೇ ವ್ಯಕ್ತಿಗೆ ಇರುವ ಎಲ್ಲಾ ರೀತಿಯ ಹಕ್ಕು ಮತ್ತು ಕರ್ತವ್ಯಗಳು ಅವರಿಗೆ ಸಂವಿಧಾನಾತ್ಮಕವಾಗಿ ಇದೆ. ಅವರು ಎರಡನೇ ದರ್ಜೆ ಅಥವಾ ವಲಸಿಗರು ಎಂಬುದು ತಪ್ಪಾಗುತ್ತದೆ ಮತ್ತು ಪ್ರಚೋದನೆಯಾಗುತ್ತದೆ ಅಲ್ಲದೆ ಅವರಲ್ಲಿ ಅಭದ್ರತೆಯ ಭಾವನೆ ಬೆಳೆಯಲು ಕಾರಣವಾಗಿ ಅದನ್ನು ಅಲ್ಲಿಯ ಮೂಲಭೂತವಾದಿಗಳು ದುರುಪಯೋಗ ಪಡಿಸಿಕೊಳ್ಳುತ್ತಾರೆ.

ಮುಸ್ಲಿಮರಲ್ಲಿ ಇರುವ ಗಾಢ ಧಾರ್ಮಿಕ ನಂಬಿಕೆ ಮತ್ತು ಬಡತನ, ಅಜ್ಞಾನ ಹಾಗು ಜಾಗತಿಕ ವಿದ್ಯಮಾನಗಳ ಪರಿಣಾಮ ಅವರು ಬಹುಬೇಗ ಪ್ರಚೋದನೆಗೆ ಒಳಗಾಗುತ್ತಿರುವುದು ಕಂಡುಬರುತ್ತಿದೆ. ಅದಕ್ಕೆ ತಕ್ಕಂತೆ ಇಲ್ಲಿನ ಹಿಂದೂ ಮೂಲಭೂತವಾದ ಅವರನ್ನು ಅನವಶ್ಯಕವಾಗಿ ಪ್ರಚೋದಿಸುತ್ತಿರುವುದು ಅಷ್ಟೇ ಸತ್ಯ. ಅದರ ಪರಿಣಾಮ ಭಾರತದ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಯ ಈ ಅಸಹನೆ ಇಲ್ಲಿನ ಶಾಂತಿ ಸಾಮರಸ್ಯ ಮತ್ತು ಅಭಿವೃದ್ಧಿಗೆ ಸದಾ ಅಡ್ಡಗಾಲಾಗಿದೆ. ಸಹೋದರತ್ವ ಮರೆಯಾಗಿದೆ. ಯಾವುದೇ ಕ್ಷಣದಲ್ಲಿ ಹಿಂಸೆ ಭುಗಿಲೇಳುವ ಸಾಧ್ಯತೆ ಇದೆ.
ಇದಕ್ಕೆ ಪರಿಹಾರವೇನು ?………..

ಖಂಡಿತವಾಗಿಯೂ ಜಗತ್ತಿನ ಎಲ್ಲ ನಾಗರಿಕ ಸಮುದಾಯಗಳಲ್ಲಿ ಇರುವಂತೆ ಮುಸ್ಲಿಮರಲ್ಲಿಯೂ ಪ್ರೀತಿ, ಮಾನವೀಯತೆ, ನಾಗರಿಕತೆ, ಕೌಟುಂಬಿಕ ಸಂಬಂಧಗಳು, ಜೀವನೋತ್ಸಾಹ, ಸಾಧನೆಯ ಛಲ ಸಮಾನವಾಗಿಯೇ ಇದೆ. ಅವರು ಕೂಡ ಎಲ್ಲರಂತೆ ಬದುಕಿನ ಆಸೆ ಆಕಾಂಕ್ಷೆಗಳಿಗೆ ಸ್ಪಂದಿಸುತ್ತಾ ಮುನ್ನಡೆಯುತ್ತಿದ್ದಾರೆ. ಎಲ್ಲರ ಗುರಿಯು ನೆಮ್ಮದಿಯ ಜೀವನವೇ ಆಗಿರುತ್ತದೆ.

ಆದರೆ ಭಾರತದಲ್ಲಿ ಹಿಂದೂ – ಮುಸ್ಲಿಂ ವೈಮನಸ್ಯ ಬಗೆಹರಿಸಲು ಸಾಧ್ಯವೇ ಇಲ್ಲ ಎಂಬಷ್ಟು ಸಂಕೀರ್ಣವಾಗಿದೆ. ಅದಕ್ಕೆ ಬಹುಮುಖ್ಯ ಕಾರಣ,
ಸಂಸದೀಯ ಪ್ರಜಾಪ್ರಭುತ್ವ, ಚುನಾವಣಾ ರಾಜಕೀಯ,
ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಹಿಂದೂ ಮತ್ತು ಇಸ್ಲಾಂ ಧರ್ಮದ ಆಚರಣೆಗಳ ಭಿನ್ನತೆ ಮತ್ತು ವಿರುದ್ಧತೆ.

ಹಾಗೆಂದು ಸುಮ್ಮನಿರಲು ಸಾಧ್ಯವಿಲ್ಲ. ರಾಷ್ಟ್ರದ ಹಿತಾಸಕ್ತಿಯಿಂದ ಏನಾದರೂ ಕ್ರಮ ಕೈಗೊಳ್ಳಲೇಬೇಕು ಮತ್ತು ಈ ಗಂಡಾಂತರದಿಂದ ದೇಶವನ್ನು ಕಾಪಾಡಲೇಬೇಕು. ಇನ್ನು ಮುಂದೆ ಇದನ್ನು ತೇಪೆ ಹಾಕುತ್ತಾ ಮುಚ್ಚಲು ಸಾಧ್ಯವಿಲ್ಲ. ಬಹುದೊಡ್ಡ ಕಂದಕ ಸೃಷ್ಟಿಯಾಗಿದೆ.

ವಾಸ್ತವವನ್ನು ಮುಕ್ತವಾಗಿ ಪರಿಶೀಲಿಸೋಣ. ಇತಿಹಾಸದ ನೆನಪುಗಳಲ್ಲಿ ಭಾವುಕರಾಗುವುದು ಬೇಡ.

1950 ಜನವರಿ 26 ರ ನಂತರದ ಭಾರತವನ್ನು ನಿಜವಾದ ಭಾರತ ಎಂದು ಪರಿಗಣಿಸಿ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ……

ಭಾರತೀಯತೆ ಎಂಬ ನೆರಳಲ್ಲಿ ಪ್ರಾದೇಶಿಕ ಸ್ವಾಯತ್ತತೆ ಕಾಪಾಡುವುದು,
ಧರ್ಮವನ್ನು ತೀರಾ ಖಾಸಗಿ ವಿಷಯ ಎಂದು ಪರಿಗಣಿಸುವುದು……

ಈ ದೇಶವನ್ನು ಹಿಂದುತ್ವದ ದೇಶ ಮಾಡಬೇಕು ಎಂಬ ಆಶಯ ಸಂವಿಧಾನ ಬಾಹಿರ ಎಂದು ಘೋಷಿಸಬೇಕು. ಏಕೆಂದರೆ ಹಿಂದುತ್ವದ ಜಾತೀಯತೆ ಎಂಬ ಕ್ಯಾನ್ಸರ್ ಗುಣಪಡಿಸದೆ ಹಿಂದುತ್ವದ ನಿಯಮಗಳನ್ನು ಪಾಲಿಸಲು ಸಾಧ್ಯವಿಲ್ಲ. ಹಿಂದೂ ಎಂದ ತಕ್ಷಣ ಜನ ಒಪ್ಪುವುದಿಲ್ಲ. ನೀವು ಯಾವ ಜಾತಿ ಎಂದು ಕೇಳುತ್ತಾರೆ. ನಂತರ ಜಾತಿಯ ಆಧಾರದ ಮೇಲೆ ನಿಮ್ಮ ಸ್ಥಾನ ನಿರ್ಧರಿಸುತ್ತಾರೆ. ಕೆಳಗಿನ ಅವಮಾನಕರ ವರ್ಗ ಹಿಂದೂ ಎಂದು ಒಪ್ಪಿಕೊಳ್ಳುವುದಿಲ್ಲ. ಕೇವಲ ದಲಿತ ಮತ್ತು ಹಿಂದುಳಿದ ವರ್ಗಗಳು ಮಾತ್ರವಲ್ಲ ಬಸವ ಧರ್ಮದ ಅನುಯಾಯಿಗಳು ಸಹ ಈ ಹಿಂದೂ ಧರ್ಮದ ಅಸಮಾನತೆಯ ವಿರುದ್ದ ಸಿಡಿದು ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ ಮಾಡುತ್ತಿದ್ದಾರೆ. ಆದ್ದರಿಂದ ಹಿಂದುತ್ವದ ರಾಷ್ಟ್ರಕ್ಕಿಂತ ಭಾರತೀಯತೆ ಎಲ್ಲರಿಗೂ ಸಮಾಧಾನ ಮತ್ತು ಸಮಾನತೆ ನೀಡುತ್ತದೆ.

ಇಷ್ಟು ಆದ ಮಾತ್ರಕ್ಕೆ ಹಿಂದೂ ಮುಸ್ಲಿಂ ಸೌಹಾರ್ದತೆ ಏರ್ಪಟ್ಟು ಶಾಂತಿ ಸ್ಥಾಪನೆಯಾಗುತ್ತದೆಯೇ ? ಖಂಡಿತಾ ಇಲ್ಲ. ಸಂವಿಧಾನದಲ್ಲಿ ” ಧಾರ್ಮಿಕ ಸ್ವಾತಂತ್ರ್ಯ ” ಎಂಬ ಕಾನೂನು ಇದೆ. ಅದರಲ್ಲಿ ಅಲ್ಪಸಂಖ್ಯಾತ ಧಾರ್ಮಿಕ ಸ್ವಾತಂತ್ರ್ಯ ಇಲ್ಲಿನ ಬಹುತೇಕರ ಅಸಮಾಧಾನಕ್ಕೆ ಕಾರಣವಾಗಿದೆ. ಮುಖ್ಯವಾಗಿ ಮುಸ್ಲಿಮರು ಈ ಸ್ವಾತಂತ್ರ್ಯದ ಹಕ್ಕನ್ನು ದುರುಪಯೋಗ ಪಡಿಸಿಕೊಂಡು ಪ್ರಚೋದನಾತ್ಮಕವಾಗಿ ವರ್ತಿಸುತ್ತಾರೆ ಎಂಬ ಆರೋಪ ಇದೆ. ಆ ಆರೋಪದ ಮುಖ್ಯ ತಿರುಳು ಅವರಿಗೆ ದೇಶಕ್ಕಿಂತ ಧರ್ಮವೇ ಮುಖ್ಯ. ಹಾಗಾದಲ್ಲಿ ಮುಂದೆ ದೇಶದ ಗತಿ ಏನು. ಮೂಲತಃ ಗಾಢ ಧಾರ್ಮಿಕ ನಂಬಿಕೆಯ, ಆಕ್ರಮಣಕಾರಿ ಮನೋಭಾವದ ಅವರು ಹೆಚ್ಚು ಬಲಶಾಲಿಗಳಾಗಿ ಕಾಶ್ಮೀರದಂತೆ ಹಿಂದುಗಳ ಅಸ್ತಿತ್ವಕ್ಕೆ ಧಕ್ಕೆ ತರಬಹುದು ಎಂಬ ಆತಂಕ ಬಹುಸಂಖ್ಯಾತರಲ್ಲಿ ಇದೆ. ದೇಶಕ್ಕಾಗಿ ಪ್ರಾಣ ಕೊಡುವುದಕ್ಕಿಂತ ಧರ್ಮಕ್ಕಾಗಿ ಪ್ರಾಣ ತ್ಯಾಗಕ್ಕೆ ಮುಸ್ಲಿಮರು ಒಂದು ಹೆಜ್ಜೆ ಮುಂದೆ ಇರುತ್ತಾರೆ. ವಿದ್ಯಾವಂತ – ಅವಿದ್ಯಾವಂತ ಎಂಬ ಭೇದವಿಲ್ಲದೆ ಕೆಲವರು ಭಯೋತ್ಪಾದಕ ಸಂಘಟನೆಗಳ ಜೊತೆ ಸಂಪರ್ಕ ಸಾಧಿಸಲು ಇದೇ ಕಾರಣ ಎಂದು ಹೇಳಲಾಗುತ್ತದೆ.

ಧರ್ಮದ ಮೌಡ್ಯಗಳು ಮತ್ತು ದೇವರ ಅಸ್ತಿತ್ವವನ್ನು ಜಿಜ್ಞಾಸೆಗೆ ಒಳಪಡಿಸುವಾಗ ಕಾನೂನಿನ ಅವಕಾಶಗಳು ಇದ್ದರೂ ಮುಸ್ಲಿಮರು ಅದನ್ನು ಸಹಿಸಿಕೊಳ್ಳುವ ಉದಾರ ಮನೋಭಾವ ಹಿಂದೂಗಳಷ್ಟು ಇಲ್ಲ ಎಂಬುದು ಸಹ ಮೇಲ್ನೋಟಕ್ಕೆ ಕಂಡುಬರುತ್ತದೆ.

ಈ ಗುಣಗಳಿಂದಾಗಿಯೇ
ಇಂದು ಎರಡು ಧರ್ಮಗಳ ಮೂಲಭೂತವಾದಿತನ ತುಂಬಾ ತುಂಬಾ ಪ್ರಚೋದನಕಾರಿ ಹಂತ ತಲುಪಿದೆ. ಹಿಂದುತ್ವದ ಕೂಗು ಬಲವಾದಷ್ಟು ಮುಸ್ಲಿಂ ಆಕ್ರೋಶ ಹೆಚ್ಚಾಗುತ್ತಾ ಸಾಗುತ್ತದೆ. ಮುಸ್ಲಿಂ ಆಕ್ರೋಶ ಹೆಚ್ಚಾದಷ್ಟು ಹಿಂದುತ್ವದ ಕೂಗು ಬಲವಾಗುತ್ತಾ ಸಾಗುತ್ತದೆ. ಇದು ಒಂದು ವಿಷಚಕ್ರವಾಗಿ ಸುತ್ತುತ್ತಿದೆ.

ಯಾರು ಏನೇ ಬೇಜಾರು ಮಾಡಿಕೊಳ್ಳಲಿ, ಈ ವೈವಿಧ್ಯಮಯ ದೇಶದಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸ್ವಾತಂತ್ರ್ಯವನ್ನು ಇನ್ನಷ್ಟು ವಿಸ್ತರಿಸಿದರೂ ಪರವಾಗಿಲ್ಲ ಆದರೆ ಧಾರ್ಮಿಕ ಸ್ವಾತಂತ್ರ್ಯವನ್ನು ಮೊಟಕುಗೊಳಿಸಲೇ ಬೇಕಿದೆ. ಧರ್ಮ ಎಂಬುದು ಒಳ್ಳೆಯತನ ಮಾತ್ರ. ಅದಕ್ಕೆ ಯಾವುದೇ ಹುಟ್ಟಿನ ಅಥವಾ ಆಚರಣೆಗಳ ಕಟ್ಟುಪಾಡು ಬೇಡ. ಭಾರತೀಯತೆ ಎಂಬ ಸಮಾನತೆ ಜಾರಿಯಾಗಲಿ. ಧರ್ಮ ಮತ್ತು ದೇವರು ಎಂಬುದು ಮನೆಯೊಳಗೆ ಮತ್ತು ಮಂದಿರ ಮಸೀದಿ ಚರ್ಚುಗಳಿಗಷ್ಟೇ ಸೀಮಿತವಾಗಲಿ. ಅಲ್ಪಸಂಖ್ಯಾತರೆಂಬ ವಿಶೇಷ ಸ್ಥಾನಮಾನವೂ ಬೇಡ, ಬಹುಸಂಖ್ಯಾತರೆಂಬ ದುರಹಂಕಾರವೂ ಬೇಡ. ಕಾನೂನು ಸುವ್ಯವಸ್ಥೆ ಎಲ್ಲರಿಗೂ ಏಕ ಪ್ರಕಾರವಾಗಿ ಮತ್ತು ನಿಷ್ಪಕ್ಷಪಾತವಾಗಿ ಸಿಗುವಂತಾಗಲಿ.

ಇಲ್ಲಿ ಇನ್ನೂ ಒಂದು ಸೂಕ್ಷ್ಮತೆ ಅಡಗಿದೆ.
” ಜೈ ಶ್ರೀರಾಮ್ ” ಎನ್ನುವ ಬಹಿರಂಗ ಕೂಗು ಅನವಶ್ಯಕವಾಗಿ ಮುಸ್ಲಿಂ ಆತಂಕಕ್ಕೆ ಕಾರಣವಾಗಿ ಹೇಗೆ ರಾಜಕೀಯ ದಾಳವಾಗುತ್ತಿದೆಯೋ, ಅದೇರೀತಿ ಇಸ್ಲಾಂ ಧರ್ಮ ದೇಶಕ್ಕಿಂತ ದೊಡ್ಡದು ಎಂಬ ಮುಸ್ಲಿಂ ಧಾರ್ಮಿಕ ಮುಖಂಡರ ಬಹಿರಂಗ ಹೇಳಿಕೆಗಳು ಹಿಂದೂ ಆತಂಕಕ್ಕೆ ಕಾರಣವಾಗಿ ದೇಶ ಅಗ್ನಿ ಜ್ವಾಲೆಯಾಗಿ ಸದಾ ಬೂದಿ ಮುಚ್ಚಿದ ಕೆಂಡದಂತೆ ಉರಿಯುತ್ತಲೇ ಇರುತ್ತದೆ.

ಹಿಂದೂ – ಮುಸ್ಲಿಂ ಸೌಹಾರ್ದ ಎಂಬುದಾಗಲಿ ಅಥವಾ ಹಿಂದೂ ರಾಷ್ಟ್ರವಾಗಲಿ ಅಥವಾ ಜಾತ್ಯಾತೀತ ಅಥವಾ ಧರ್ಮ ನಿರಪೇಕ್ಷ ದೇಶ ಎಂದಾಗಲಿ ಎಲ್ಲವೂ ಪುಸ್ತಕದ ಬದನೆಕಾಯಿ ಮಾತ್ರ ಆಗಿರುತ್ತದೆ.
ಈ ದೇಶದ ನಿಜವಾದ ಶಾಂತಿ – ಸೌಹಾರ್ದತೆ ಅಡಗಿರುವುದು ಧರ್ಮವನ್ನು ಅದರ ಆಚರಣೆಗಳನ್ನು ಮಿತಿಗೆ ಒಳಪಡಿಸಿ, ಕಾನೂನು ಸುವ್ಯವಸ್ಥೆ ಮನುಷ್ಯರೆಂಬ ಪ್ರಾಣಿಗಳಿಗೆ ಸಮನಾಗಿ ಮತ್ತು ನ್ಯಾಯವಾಗಿ ಅಳವಡಿಸಿದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಹಿಂದೂ ಮುಸ್ಲಿಂ ಮತ ಬ್ಯಾಂಕುಗಳಾಗಿ ಉಳಿಯುವುದಿಲ್ಲ. ಧರ್ಮ ರಕ್ಷಕರು ದೊಡ್ಡ ಮಟ್ಟದ ಜನಪ್ರಿಯತೆ ಗಳಿಸುವುದಿಲ್ಲ.

ದೇಶ ಮತ್ತು ಸಂವಿಧಾನ ಪಾಲಿಸುವವರು ಈ ದೇಶದ ನಾಗರಿಕರಾಗಿ ಉಳಿಯುತ್ತಾರೆ, ಇಲ್ಲದಿದ್ದರೆ ಜೈಲುಪಾಲಾಗುತ್ತಾರೆ ಅಥವಾ ದೇಶದಿಂದ ಗಡಿಪಾರಾಗುತ್ತಾರೆ. ಅಲ್ಲಾ ರಾಮ ಜೀಸಸ್ ನಮಗೆ ಮುಖ್ಯ, ಬೈಬಲ್ ಖುರಾನ್ ಭಗವದ್ಗೀತೆ ನಮಗೆ ಮುಖ್ಯ ಎನ್ನುವವರು ಎಂದಿಗೂ ದೇಶಕ್ಕೆ ಅಪಾಯಕಾರಿಯೇ, ಕಾರಣ ಈ ಗ್ರಂಥಗಳು ಮಾನವೀಯ ಧರ್ಮ ಶ್ರೇಷ್ಠ ಎನ್ನದೆ ತಮ್ಮ ಧರ್ಮಗಳು ಮಾತ್ರ ಈ ವಿಶ್ವದಲ್ಲಿ ಅಸ್ತಿತ್ವವನ್ನು ಉಳಿಸಿಕೊಳ್ಳಬೇಕು ಅದಕ್ಕಾಗಿ ಯಾವುದೇ ಹಿಂಸೆಯೂ ಧರ್ಮವೇ ಎಂದು ಸಾರುತ್ತದೆ ಅಥವಾ ಪರೋಕ್ಷವಾಗಿ ಅದರ ಅನುಯಾಯಿಗಳು ಇದನ್ನು ಪಾಲಿಸುತ್ತಿದ್ದಾರೆ.

ಆದ್ದರಿಂದ ಧರ್ಮದ ಮೇಲೆ ಅವಲಂಬಿತವಲ್ಲದ, ಭಾರತೀಯತೆ ಎಂಬ ನಾಗರಿಕ ಸಮಾಜದ ಬೆಳವಣಿಗೆ ಮಾತ್ರ ಭಾರತ ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಬಹುದು. ಇಲ್ಲದಿದ್ದರೆ ಈ ಹಿಂದೂ ಮುಸ್ಲಿಂ ಸಂಘರ್ಷ ಕಾಲ ಸರಿದಂತೆ ಅವಕಾಶ ಸಿಕ್ಕವರು ತಮ್ಮ ಹಿಡಿತ ಸಾಧಿಸಿ ಇನ್ನೊಂದು ಧರ್ಮದವರನ್ನು ತುಳಿಯುತ್ತಾ, ಹಿಂಸಿಸುತ್ತಾ ಇರುತ್ತಾರೆ. ಈ ರಕ್ತ ಸಿಕ್ತ ಇತಿಹಾಸ ಮತ್ತೆ ಮತ್ತೆ ಮರುಕಳಿಸುತ್ತಲೇ ಇರುತ್ತದೆ.

ದಯವಿಟ್ಟು ಈ ಬಗ್ಗೆ ಕೂಲಂಕಷವಾಗಿ ಮತ್ತು ಸಮಗ್ರವಾಗಿ ಯೋಚಿಸಿ ನಿಮ್ಮ ಅಭಿಪ್ರಾಯ ರೂಪಿಸಿಕೊಳ್ಳಿ, ಭಾವನಾತ್ಮಕತೆ, ನಂಬಿಕೆಗಿಂತ ವಾಸ್ತವ ಪ್ರಜ್ಞೆ ನಿಮಗಿರಲಿ ಎಂದು ಮನವಿ ಮಾಡಿಕೊಳ್ಳುತ್ತಾ…..

ಈ ನನ್ನ ಅಭಿಪ್ರಾಯ. ಹಿಂದೂಗಳ ಅಥವಾ ಮುಸ್ಲಿಮರ ಪರ ಅಥವಾ ವಿರುದ್ದವಲ್ಲ, ಧರ್ಮಗಳ ಪರ ಅಥವಾ ವಿರುದ್ಧವಲ್ಲ, ಭಾರತ ದೇಶ ಮತ್ತು ಅಲ್ಲಿನ ಜನರ ಹಿತಾಸಕ್ತಿಯ ಬಗ್ಗೆ ಮಾತ್ರ…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ.

Show More

Leave a Reply

Your email address will not be published. Required fields are marked *

Related Articles

Back to top button