ಚನ್ನಪಟ್ಟಣ ಉಪಚುನಾವಣೆ 2024: ‘ಕೈ’ ಕೊಟ್ಟು ರಾಜೀನಾಮೆ ನೀಡಿದರೇ ಸಿ.ಪಿ.ಯೋಗೇಶ್ವರ್..?!
ಚನ್ನಪಟ್ಟಣ: 2024 ರ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ದಿನಾಂಕ ಘೋಷಣೆಯಾದ ನಂತರ, ರಾಜಕೀಯ ಕಣ ರಂಗೇರಿದೆ. ಬಿಜೆಪಿಯ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರು, ತಮ್ಮ ಪರಿಷತ್ ಸ್ಥಾನಕ್ಕೆ ಇಂದು ಸೋಮವಾರ ರಾಜೀನಾಮೆ ನೀಡಿದ್ದು, ಆ ಕ್ಷೇತ್ರದಲ್ಲಿ ಚುನಾವಣಾ ಕಣ ತೀವ್ರ ಸ್ವರೂಪ ತಾಳುವ ನಿರೀಕ್ಷೆಯಿದೆ.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರ ಕಚೇರಿಗೆ ಆಗಮಿಸಿದ ಯೋಗೇಶ್ವರ್ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಾನು ಪಕ್ಷೇತರನಾಗಿ ಸ್ಪರ್ಧಿಸಲು ಉತ್ಸುಕನಾಗಿದ್ದೇನೆ,” ಎಂದು ಸ್ಪಷ್ಟಪಡಿಸಿದರು.
ಯೋಗೇಶ್ವರ್ ಹೇಳಿದಂತೆ, “ನಾನು ಯಾವುದೇ ಪಕ್ಷವನ್ನು ಸಂಪರ್ಕಿಸಿದ್ದಿಲ್ಲ, ಆದರೆ ಹೈಕಮಾಂಡ್ ನನಗೆ ಒಂದು ಅವಕಾಶ ನೀಡಬೇಕೆಂದು ಆಶಿಸುತ್ತಿದ್ದೇನೆ. ಇದುವರೆಗೆ ನಾನು ಕಾಂಗ್ರೆಸ್ ಸೇರುವ ಬಗ್ಗೆ ಚಿಂತನೆ ಮಾಡಿಲ್ಲ.”
ಇದಕ್ಕೆ ಮುನ್ನ, ಜೆಡಿಎಸ್ ಕಾರ್ಯಕರ್ತರು ಯೋಗೇಶ್ವರ್ ಅವರನು ಅಭ್ಯರ್ಥಿಯಾಗಿ ಒಪ್ಪಲು ತಯಾರಿಲ್ಲ ಎಂದು ಹೇಳಲಾಗಿತ್ತು. ಆದರೆ, ಜೆಡಿಎಸ್ ಈ ಕ್ಷೇತ್ರವನ್ನು ನಿಖಿಲ್ ಕುಮಾರಸ್ವಾಮಿಗೆ ಮತ್ತೆ ನೀಡಲು ನಿರ್ಧರಿಸಿರುವ ಸಾಧ್ಯತೆ ಇದೆ. ಈ ನಡುವಲ್ಲಿಯೇ, ಯೋಗೇಶ್ವರ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ.
ಚುನಾವಣಾ ಸಮರದ ಅಸಲಿ ಕಥೆ:
ಸಾಧ್ಯತೆಯಿರುವ ಎಲ್ಲಾ ರಾಜಕೀಯ ಬದಲಾವಣೆಗಳು ಈಗ ಚನ್ನಪಟ್ಟಣ ಕ್ಷೇತ್ರದಲ್ಲಿ ಕುತೂಹಲ ಹುಟ್ಟಿಸುತ್ತಿವೆ. ಯೋಗೇಶ್ವರ್ ಬಿಜೆಪಿ ಅಥವಾ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸುವ ಕುರಿತು ನಿರೀಕ್ಷೆ ಇದ್ದರೂ, ಜೆಡಿಎಸ್ ತಮ್ಮ ಸ್ಥಾನವನ್ನು ಬಿಟ್ಟುಕೊಡುವ ಸೂಚನೆ ನೀಡಿಲ್ಲ. ಈ ಕಾರಣದಿಂದ, ಯೋಗೇಶ್ವರ್ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಗಟ್ಟಿಯಾಗಿ ಹರಿದಾಡುತ್ತಿದೆ.