‘ಡೆಡ್ಲಿ ಗ್ಯಾಂಗ್’: ಉತ್ತರ ಕರ್ನಾಟಕದ ಭೂಗತ ಲೋಕವನ್ನು ಬಿಚ್ಚಿಡಲಿದೆಯೇ ಈ ಸಿನಿಮಾ..?!

ಬೆಂಗಳೂರು: ಕನ್ನಡ ಚಿತ್ರರಂಗದ ಪ್ರಸಿದ್ಧ ನಿರ್ದೇಶಕ ರವಿ ಶ್ರೀವತ್ಸ ಅವರು ಮತ್ತೆ ಪ್ರೇಕ್ಷಕರ ಮುಂದೆ ‘ಡೆಡ್ಲಿ ಗ್ಯಾಂಗ್’ ಮೂಲಕ ಬಣ್ಣದ ಜಗತ್ತಿಗೆ ಪಯಣ ಬೆಳೆಸಿದ್ದಾರೆ. ಈ ಬಾರಿ ತಮ್ಮದೇ ಡೆಡ್ಲಿ ಆರ್ಟ್ಸ್ ನಿರ್ಮಾಣ ಸಂಸ್ಥೆಯಡಿ ಅವರು ಹೊಸ ಆವೃತ್ತಿಯಲ್ಲಿ ಬಂದಿದ್ದು, ಚಿತ್ರಕ್ಕೆ ಸ್ವತಃ ಕಥೆ, ಚಿತ್ರಕಥೆ, ನಿರ್ದೇಶನದ ಹೊಣೆಗಳನ್ನು ಹೊತ್ತಿದ್ದಾರೆ. ‘ಗ್ಯಾಂಗ್ಸ್ ಆಫ್ ಯು.ಕೆ’ ಎಂಬ ಉತ್ತರ ಕರ್ನಾಟಕದ ಭೂಗತ ಲೋಕದ ಸ್ವಾರಸ್ಯಕರ ಕಥೆಯು ನೈಜ ಘಟನೆಗಳ ಆಧಾರದ ಮೇಲೆ ಮೂಡಿ ಬಂದಿದೆ.
ಕಥೆಯ ಕುರಿತ ಮಾಹಿತಿ:
ಚಿತ್ರದ ಕಥೆ ಬಾಗಲಕೋಟೆಯ ಪಿಲ್ಲಾರಿ ಫಾಲ್ಸ್‌ನಲ್ಲಿ ನಡೆದ ಘಟನೆಯನ್ನು ಆಧರಿಸಿದೆ. “ಒಂದು ಹತ್ಯೆಯಾದಾಗ, ರಕ್ತ ತನ್ನ ಕಲೆಯನ್ನು ಬಿಟ್ಟು ಹೋಗುತ್ತದೆ” ಎಂಬ ಪ್ರಾರಂಭಿಕ ಡೈಲಾಗ್ ಮತ್ತು `ಉತ್ತರ ಕರ್ನಾಟಕದ ಹತ್ಯಾಕಾಂಡ’ ಎಂಬ ಟ್ಯಾಗ್‌ಲೈನ್ ಈ ಚಿತ್ರವನ್ನು ಇನ್ನಷ್ಟು ಕುತೂಹಲಕಾರಿಯನ್ನಾಗಿ ಮಾಡಿದೆ.
56 ಹೊಸ ಪ್ರತಿಭೆಗಳ ಎಂಟ್ರಿ!:
ಚಿತ್ರದಲ್ಲಿ ‘ಒರಟ’ ಪ್ರಶಾಂತ್, ಜ್ಯೋತಿ ಶೆಟ್ಟಿ, ಕೋಟೆ ಪ್ರಭಾಕರ್, ಮತ್ತು ಪದ್ಮಾ ವಾಸಂತಿ ಸೇರಿದಂತೆ 56 ನವೋದಯ ಕಲಾವಿದರಿಗೆ ಅವಕಾಶ ನೀಡಲಾಗಿದೆ. ಪತ್ರಕರ್ತ ನವೀನ್ ಕೃಷ್ಣ ಪುತ್ತೂರು ಈ ಚಿತ್ರದಲ್ಲಿ ವಿಶೇಷ ಪಾತ್ರ ವಹಿಸಿದ್ದು, ಬೆಂಗಳೂರು ರಂಗಭೂಮಿಯಲ್ಲಿ ಗುರುತಿಸಿಕೊಂಡು `ಮೇಲೊಬ್ಬ ಮಾಯಾವಿ’ ಮೂಲಕ ನಿರ್ದೇಶಕರಾಗಿ ಹೆಸರು ಗಳಿಸಿದ್ದವರು, ಈ ಬಾರಿ ಬಂಗಾರಪ್ಪ ಭೋಸರಾಜ ಎಂಬ ಉಸ್ತುವಾರಿ ಸಚಿವನಾಗಿ ತಮ್ಮ ಪಾತ್ರವನ್ನು ಮೆರೆದಿದ್ದಾರೆ.
ಶಿಶುನಾಳ ಷರೀಫರ ಕಾವ್ಯ ಮತ್ತು ಸಾಧು ಕೋಕಿಲ ಸಂಗೀತ:
ಚಿತ್ರದಲ್ಲಿ ಸಂತ ಶಿಶುನಾಳ ಷರೀಫರ ಎಂಟು ಗೀತೆಗಳನ್ನು ಬಳಸಿಕೊಂಡು ಸಂಗೀತಕ್ಕೆ ಜೀವ ತುಂಬಿದ್ದು, ಸಾಧು ಕೋಕಿಲ ಅವರ ಸಂಗೀತ ನಿರ್ದೇಶನ ಚಿತ್ರಕ್ಕೆ ಮತ್ತಷ್ಟು ಆಕರ್ಷಕ ತಿರುವನ್ನು ತಂದಿದೆ.
ಈ ಚಿತ್ರ ಕನ್ನಡ ಚಿತ್ರರಂಗದಲ್ಲಿ ಭೂಗತ ಕಥೆಗಳನ್ನು ಹೊಸ ಮಟ್ಟಕ್ಕೆ ಏರಿಸಲು ಶ್ರಮಿಸುತ್ತಿದ್ದು, ನೈಜ ಘಟನೆಗಳ ಆಧಾರದ ಮೇಲೆ ರವಿಯವರ ಮೇಕಿಂಗ್ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.