ಚುನಾವಣಾ ಆಯೋಗ ನೇಮಕಾತಿಗಳ, ವಿವಾದಾತ್ಮಕ ಮಸೂದೆ ಲೋಕಸಭೆಯಲ್ಲಿ ಅಂಗೀಕಾರ.

ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಉಳಿದಿದ್ದು, ಚುನಾವಣಾ ಅಧಿಕಾರಿಗಳ ನೇಮಕಾತಿಯಲ್ಲಿ ಪ್ರಭಾವ ಬೀರುವ ಮಸೂದೆಯನ್ನು ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ. ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರು (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರದ ಅವಧಿ) ಮಸೂದೆ, 2023, ಈಗಾಗಲೇ ರಾಜ್ಯಸಭೆಯಿಂದ ಅಂಗೀಕರಿಸಲ್ಪಟ್ಟಿದೆ. ಈ ಮಸೂದೆಯು ಭಾರತೀಯ ಚುನಾವಣಾ ಆಯೋಗದ (ECI) ಮೂವರು ಸದಸ್ಯರ ನೇಮಕಾತಿ ಕುರಿತ ಕಾರ್ಯವಿಧಾನಗಳನ್ನು ಸೂಚಿಸುತ್ತದೆ. ಚುನಾವಣಾ ಆಯೋಗದ ಆಯ್ಕೆ ಪ್ರಧಾನ ಮಂತ್ರಿ, ವಿರೋಧ ಪಕ್ಷದ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿ (CJI) ಅವರನ್ನು ಒಳಗೊಂಡ ಸಮಿತಿ ಮಾಡಬೇಕೆಂಬ ಸುಪ್ರೀಂ ಕೋರ್ಟ್‌ನ ನಿರ್ದೇಶನದೊಂದಿಗೆ ಹೊಸ ಮಸೂದೆ ನೇರವಾಗಿ ಸಂಘರ್ಷಿಸುತ್ತದೆ. ಈ ವರ್ಷದ ಮಾರ್ಚ್‌ನಲ್ಲಿ, ನ್ಯಾಯಮೂರ್ತಿ ಕೆಎಂ ಜೋಸೆಫ್ ನೇತೃತ್ವದ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠವು, ಸಂಸತ್ತಿನಲ್ಲಿ ಆಯ್ಕೆ ಪ್ರಕ್ರಿಯೆಯನ್ನು ಸೂಚಿಸುವ ಕಾನೂನನ್ನು ರೂಪಿಸುವವರೆಗೆ ಪ್ರಧಾನಿ, ವಿರೋಧ ಪಕ್ಷದ ನಾಯಕ ಮತ್ತು ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ಸಮಿತಿಯು ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುಲಿ ಎಂದು ತೀರ್ಪು ನೀಡಿತ್ತು.
ಚುನಾವಣಾ ಆಯುಕ್ತರ ಸ್ವಾಯತ್ತತೆಯನ್ನು ರಕ್ಷಿಸಲು ಸುಪ್ರೀಂ ಕೋರ್ಟ್ ಈ ನಿರ್ದೇಶನವನ್ನು ನೀಡಿತ್ತು. ಆದಾಗ್ಯೂ, ಹೊಸ ಮಸೂದೆಯಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಯನ್ನು ಆಯ್ಕೆ ಸಮಿತಿಯಿಂದ ಕೈಬಿಟ್ಟಿದ್ದೂ ಸುಪ್ರೀಂ ಕೋರ್ಟ್ ಅನ್ನು ಆಯ್ಕೆ ಪ್ರಕ್ರಿಯೆಯಿಂದ ದೂರವಿಡುವ ಪ್ರಯತ್ನವನ್ನು ಸ್ಪಷ್ಟವಾಗಿ ಕಾಣಬಹುದು. ಅಲ್ಲದೇ, ನಿವೃತ್ತ ಅಥವಾ ಹಾಲಿ ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರುಗಳು ತಮ್ಮ ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ತೆಗೆದುಕೊಂಡ ಕ್ರಮಗಳಿಗೆ ನ್ಯಾಯಾಲಯಗಳು ಕ್ರಿಮಿನಲ್ ಅಥವಾ ಸಿವಿಲ್ ಮೊಕದ್ದಮೆಗಳನ್ನು ನಡೆಸುವುದನ್ನು ಕೂಡ ಹೊಸ ಮಸೂದೆ ನಿಷೇಧಿಸುತ್ತದೆ. ಅಮಾನತುಗಳ ಭರಾಟೆಯ ಹಿನ್ನೆಲೆಯಲ್ಲಿ ಬಹುತೇಕ ಪ್ರತಿಪಕ್ಷಗಳ ಸದಸ್ಯರು ಸದನದಲ್ಲಿ ಇರದ ಸಂದರ್ಭದಲ್ಲಿ ಈ ಮಹತ್ವದ ಹಾಗೂ ವಿವಾದಾತ್ಮಕ ಮಸೂದೆಯನ್ನು ಅಂಗೀಕರಿಸಲಾಗಿದೆ.

ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ಅವರು ಈ ಮಸೂದೆಯು ಭಾರತದ ಚುನಾವಣಾ ಆಯೋಗದ (ಇಸಿಐ) ಸ್ವಾತಂತ್ರ್ಯಕ್ಕೆ ಗಂಭೀರ ಧಕ್ಕೆ ತರಬಹುದು ಎಂದು ಹೇಳಿದ್ದರು. ಮಸೂದೆ ಕಾನೂನಾದರೆ, ಚುನಾವಣಾ ಆಯುಕ್ತರನ್ನು ನೇಮಕ ಮಾಡುವಲ್ಲಿ ಕಾರ್ಯಾಂಗ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ, ಇದು ಮುಕ್ತ ಮತ್ತು ನ್ಯಾಯೋಚಿತ ಚುನಾವಣೆಗಳ ಮೇಲೆ ಪರಿಣಾಮ ಬೀರುತ್ತದೆ. “ನೀವು ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರನ್ನು ಈ ಮಾದರಿಯಲ್ಲಿ ನೇಮಿಸಲು ಹೋದರೆ, ಮುಕ್ತ ಮತ್ತು ನ್ಯಾಯೋಚಿತ ಚುನಾವಣೆಗಳು ಚಿಮೇರಾ(Chimera) ಆಗಲಿವೆ” ಎಂದು ಅವರು ಹೇಳಿದರು.
ಒಟ್ಟಿನಲ್ಲಿ ಸುಪ್ರೀಂ ಕೋರ್ಟ್‌ನ್ನು ದೂರವಿಡುವ ಪ್ರಯತ್ನದಲ್ಲಿ ಕಾರ್ಯಾಂಗ ಜಯಿಸಿದಂತಾಗಿದೆ. ಚುನಾವಣಾ ಹೊಸ್ತಿಲಲ್ಲೇ, ಸರ್ಕಾರದ ಈ ನಿರ್ಧಾರ ಮುಕ್ತ ಮತ್ತು ನ್ಯಾಯೋಚಿತ ಚುನಾವಣೆಗಳ ಮೇಲೆ ಪರಿಣಾಮ ಬೀರದಂತೆ ಸುಪ್ರೀಂ ಕೋರ್ಟ್, ವಿಪಕ್ಷಗಳು ಯಾವ ನಿಟ್ಟಿನಲ್ಲಿ ಯೋಚಿಸುತ್ತವೆ ಎಂದು ಕಾದು ನೋಡಬೇಕು. ಚುನಾವಣಾ ಆಯೋಗಗದತ್ತ ಸಂದೇಹದಿಂದ ಬೊಟ್ಟು ಮಾಡದಿರಬೇಕಾದರೆ, ಸರ್ಕಾರ ಮತ್ತು ಕಾರ್ಯಾಂಗ ಆದಷ್ಟು ಅಂತರ ಕಾಯ್ದುಕೊಳ್ಳಲೇಬೇಕು.