ಜುಲೈ 10ರವರೆಗೆ ಮುಂದುವರೆಯಲಿದೆ ವರುಣನ ಆರ್ಭಟ.
ಬೆಂಗಳೂರು: ರಾಜ್ಯದಲ್ಲಿ ವರುಣ ತನ್ನ ಆರ್ಭಟವನ್ನು ಕಾಣಿಸಿದ್ದು, ಈಗಾಗಲೇ ಅನೇಕ ಜಿಲ್ಲೆಗಳಲ್ಲಿ ಭಾರಿ ಮಳೆ ಸಂಭವಿಸಿದೆ. ಅಲ್ಲಲ್ಲಿ ನೀರು ನಿಂತು ಜನ ಜೀವನಕ್ಕೆ ಹಾನಿ ಉಂಟಾಗಿದೆ. ಭೋರ್ಗರೆವ ನದಿ ಹಾಗೂ ಸಾಗರಗಳು ದಡದ ಸಮೀಪ ವಾಸಿಸುವ ಜನರಲ್ಲಿ ಆತಂಕ ಸೃಷ್ಟಿಸಿದೆ. ಜುಲೈ 10ರವರೆಗೆ ರಾಜ್ಯದಲ್ಲಿ ವರ್ಷಧಾರೆ ಮುಂದುವರೆಯಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮಾನಿಟರಿಂಗ್ ಅಂದಾಜಿಸಿದೆ.
“ಜುಲೈ 10 ರವರೆಗೆ ರಾಜ್ಯದ ಕರಾವಳಿ ಮತ್ತು ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಂತ ಮಲೆನಾಡು ಜಿಲ್ಲೆಗಳಲ್ಲಿ ತುಂತುರು ಮಳೆ ಮುಂದುವರೆಯುವ ಸಾದ್ಯತೆಯಿದ್ದು, ವ್ಯಾಪಕವಾಗಿ ಸಾಧಾರಣದಿಂದ ಭಾರಿ ಮಳೆ ಹಾಗೂ ಅಲ್ಲಲ್ಲಿ ಅತಿ ಭಾರಿ ಮಳೆ, ನಂತರ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದೆ.” ಎಂದು ಹೇಳಲಾಗಿದೆ.
ಮುಂದುವರೆಸಿ, “ಜುಲೈ 8 ಮತ್ತು 9 ರಂದು ಉತ್ತರ ಒಳನಾಡು ಜಿಲ್ಲೆಗಳಲ್ಲಿ ವ್ಯಾಪಕ ಸಾಧಾರಣದಿಂದ ಭಾರಿ ಮಳೆ ಹಾಗೂ ಉಳಿದ ದಿನಗಳಲ್ಲಿ ಚದುರಿದಿಂದ ವ್ಯಾಪಕವಾಗಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ.
ಜುಲೈ 8 ರಂದು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಸಾಧಾರಣ ಮಳೆ, ಉಳಿದ ದಿನಗಳಲ್ಲಿ ಅಲ್ಲಲ್ಲಿ ಚದುರಿದಂತೆ ತುಂತುರು ಮಳೆಯಾಗುವ ಸಾಧ್ಯತೆಯಿದೆ.” ಎಂದು ತಮ್ಮ ಎಕ್ಸ್ ಖಾತೆಯಲ್ಲಿ ತಿಳಿಸಿದೆ.