ಕಿಚ್ಚನ “ಮ್ಯಾಕ್ಸ್” ಪ್ರಿರಿಲೀಸ್: ಕೋಟೆನಾಡು ಚಿತ್ರದುರ್ಗದಲ್ಲಿ ಅಭಿಮಾನಿಗಳ ಸಂಭ್ರಮ..!

ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದಲ್ಲಿ ಬಹು ನಿರೀಕ್ಷಿತ “ಮ್ಯಾಕ್ಸ್” ಚಿತ್ರದ ಪ್ರಿರಿಲೀಸ್ ಕಾರ್ಯಕ್ರಮ ಭರ್ಜರಿಯಾಗಿ ನೆರವೇರಿತು. ಚಿತ್ರದುರ್ಗದ ಎಸ್.ಜೆ.ಎಂ. ಸ್ಟೇಡಿಯಂನಲ್ಲಿ ಸಂಯೋಜಿಸಿದ ಈ ವೇದಿಕೆ ಕನ್ನಡ ಚಿತ್ರರಂಗದ ಪ್ರಮುಖ ತಾರೆಯರನ್ನು ಒಂದೇ ಕಡೆ ಸೇರಿಸಿತು.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಡಿಸೆಂಬರ್ 25ರಂದು ಕನ್ನಡ ಚಿತ್ರರಸಿಕರ ಮುಂದೆ ತಮ್ಮ ಬಹು ನಿರೀಕ್ಷಿತ “ಮ್ಯಾಕ್ಸ್” ಸಿನಿಮಾವನ್ನು ತರಲು ಸಜ್ಜಾಗಿದ್ದು, ಪ್ರಿರಿಲೀಸ್ ವೇದಿಕೆಯಲ್ಲಿ “ನಾನು ಮಾತು ಕೊಟ್ಟಂತೆ ನನ್ನ ಕುಟುಂಬವನ್ನು ನಿಮ್ಮ ಮುಂದೆ ತಂದಿದ್ದೇನೆ” ಎಂದು ಭಾವನಾತ್ಮಕವಾಗಿ ಹೇಳಿದ್ದಾರೆ.
ಸುದೀಪ್ ಅವರ ಸಂಭ್ರಮಪೂರ್ಣ ಮಾತುಗಳ ನಡುವೆ, “ನಾನು ಚಿತ್ರದುರ್ಗಕ್ಕೆ ಬರಲು ಯಾವಾಗಲೂ ಇಷ್ಟಪಡುತ್ತೇನೆ. ‘ಹುಚ್ಚ’ ಸಿನಿಮಾಗೆ ಯಶಸ್ಸು ತಂದುಕೊಟ್ಟ ಜನತೆಗೆ ನಾನು ಯಾವಾಗಲೂ ಋಣಿಯಾಗಿದ್ದೇನೆ” ಎಂಬ ಮಾತು ಆಭಿಮಾನಿಗಳ ಮನಗೆದ್ದಿತು. “ಕನ್ನಡ ಚಿತ್ರರಂಗದ ಅಭಿವೃದ್ದಿ ಮತ್ತು ಪ್ರೋತ್ಸಾಹಕ್ಕೆ ನಿಮ್ಮ ಬೆಂಬಲ ಅಗತ್ಯ” ಎಂದು ಕಿಚ್ಚ ಮನವಿ ಮಾಡಿದರು.
ಟ್ರೇಲರ್ ಮತ್ತು ಡ್ಯಾನ್ಸ್ ಸ್ಪೆಷಲ್:
“ಮ್ಯಾಕ್ಸ್” ಚಿತ್ರದ ಟ್ರೇಲರ್ ಲಾಂಚ್ ಸಮಾರಂಭದ ವೇದಿಕೆಯಲ್ಲಿ ನಟಿ ಶರಣ್ಯ ಶೆಟ್ಟಿ ಮತ್ತು ಕಾರ್ತೀಕ್ ಮಹೇಶ್ ಅವರ ಅದ್ಭುತ ನೃತ್ಯ ಪ್ರದರ್ಶನ ಅಭಿಮಾನಿಗಳ ಉತ್ಸಾಹವನ್ನು ಇಮ್ಮಡಿಗೊಳಿಸಿತು. ಇದು ಚಿತ್ರದುರ್ಗದ ಸ್ಟೇಡಿಯಂನಲ್ಲಿ ಹಬ್ಬದ ಸಂಭ್ರಮ ತಂದುಕೊಟ್ಟಿತು.
ಡಿಸೆಂಬರ್ 25: ಕನ್ನಡಿಗರಿಗೆ ಮ್ಯಾಕ್ಸ್ ಉಡುಗೊರೆ
ವಿಶ್ವಾದ್ಯಂತ ಅಂತರಾಷ್ಟ್ರೀಯ ಮಟ್ಟದಲ್ಲಿ ಕಿಚ್ಚ ಸುದೀಪ್ ಅವರನ್ನು ಹೊಸ ಹಂತಕ್ಕೆ ಕೊಂಡೊಯ್ಯುವ “ಮ್ಯಾಕ್ಸ್” ಸಿನಿಮಾ ಡಿಸೆಂಬರ್ 25 ರಂದು ಕನ್ನಡದಲ್ಲಿ ಹಾಗೂ ಡಿಸೆಂಬರ್ 27 ರಂದು ಇತರೆ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ನಿರ್ದೇಶಕ ವಿಜಯ್ ಕಾರ್ತಿಕೇಯ ಅವರ ಮಾರ್ಗದರ್ಶನದಲ್ಲಿ ಮೂಡಿಬಂದಿರುವ ಈ ಚಿತ್ರವನ್ನು ಕಿಚ್ಚ ಕ್ರಿಯೇಶನ್ಸ್ ಹಾಗೂ ಕಲೈಪುಲಿ ಎಸ್. ತನು ಅವರ ವಿ ಕ್ರಿಯೇಶನ್ಸ್ ಭವ್ಯವಾಗಿ ನಿರ್ಮಾಣ ಮಾಡಿವೆ. ಅಜನೀಶ್ ಲೋಕನಾಥ್ ಅವರ ಸಂಗೀತ ಕೂಡ ಈ ಚಿತ್ರದ ಮುಖ್ಯ ಆಕರ್ಷಣೆಯಾಗಿದೆ.
ಮುಂದಿನ ಚಿತ್ರ: 2025ಕ್ಕೆ ಭರ್ಜರಿ ಯೋಜನೆ
ವಿತರಕ ಕಾರ್ತಿಕ್ ಗೌಡ ಪ್ರಸ್ತಾಪಿಸಿದಂತೆ, 2025ರಲ್ಲಿ ಸುದೀಪ್ ಅವರ ನಿರ್ದೇಶನದ ಹೊಸ ಚಿತ್ರ “ಕಿಚ್ಚ ಕ್ರಿಯೇಶನ್ಸ್” ಹಾಗೂ “ಕೆ.ಆರ್.ಜಿ. ಸ್ಟುಡಿಯೋಸ್” ಸಹಯೋಗದಲ್ಲಿ ಬಹು ದೊಡ್ಡಮಟ್ಟದಲ್ಲಿ ಬಿಡುಗಡೆಯಾಗಲಿದೆ.