ಕೊಲ್ಕತ್ತಾ ಅತ್ಯಾಚಾರ ಪ್ರಕರಣ: ದೀದಿ ಸರ್ಕಾರದ ವಿರುದ್ಧ ಹರಿಹಾಯ್ದ ರಾಹುಲ್ ಗಾಂಧಿ!
ಕೊಲ್ಕತ್ತಾ: ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾ ಆರ್.ಜಿ. ಕಾರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಹಿಳಾ ವೈದ್ಯರೊಬ್ಬರ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆಯ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸಂಸದ ಹಾಗೂ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಗಂಭೀರ ಆರೋಪ ಹೊರಿಸಿದ್ದಾರೆ.
ಈ ಘಟನೆ ದೇಶವ್ಯಾಪಿ ಆಕ್ರೋಶ ಹುಟ್ಟುಹಾಕಿದ್ದು, ಹಿಂಸಾತ್ಮಕ ಘಟನೆಯ ಕಾಳಜಿಯನ್ನೂ, ವೈದ್ಯರ ಸಮುದಾಯ ಮತ್ತು ಮಹಿಳೆಯರಲ್ಲಿ ಉಂಟಾಗಿರುವ ಭಯದ ವಾತಾವರಣವನ್ನೂ ರಾಹುಲ್ ಗಾಂಧಿ ಅವರು ಎತ್ತಿಹಿಡಿದಿದ್ದಾರೆ.
ರಾಹುಲ್ ಗಾಂಧಿ ಟ್ವೀಟ್ ಮಾಡಿರುವ ಪ್ರಕಾರ, “ಆಸ್ಪತ್ರೆಯ ಆಡಳಿತದಲ್ಲಿ ಮತ್ತು ಸ್ಥಳೀಯ ಆಡಳಿತದಲ್ಲಿ ನ್ಯಾಯ ಒದಗಿಸುವ ಬದಲು ಆರೋಪಿಗಳನ್ನು ಉಳಿಸುವ ಪ್ರಯತ್ನ ನಡೆಯುತ್ತಿದೆ. ಇದು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ.”
ಇದರೊಂದಿಗೆ, ಅವರು ನ್ಯಾಯಕ್ಕಾಗಿ ಬಲವಾದ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡಬೇಕು ಎಂದು ಒತ್ತಿಹೇಳಿದ್ದಾರೆ.
ಇದರೊಂದಿಗೆ ರಾಹುಲ್ ಅವರು ಮತ್ತೊಂದು ಪ್ರಶ್ನೆ ಎತ್ತಿದ್ದಾರೆ, “ನಿರ್ಭಯಾ ಪ್ರಕರಣದ ನಂತರ ಜಾರಿಯಾದ ಕಠಿಣ ಕಾನೂನುಗಳೂ ಇಂತಹ ಘಟನೆಯನ್ನು ತಡೆಯಲು ವಿಫಲವಾದರೆ, ಈ ದೇಶದಲ್ಲಿ ಮಹಿಳೆಯರು ಸುರಕ್ಷಿತವಾಗಿದ್ದಾರೆಂದು ಹೇಗೆ ಭಾವಿಸಬಹುದು?”
ಈಗಾಗಲೇ, ಪ್ರಕರಣವನ್ನು ಸಿಬಿಐ ವಶಪಡಿಸಿಕೊಂಡಿದ್ದು, ದೆಹಲಿಯಿಂದ ವಿಶೇಷ ವೈದ್ಯಕೀಯ ಮತ್ತು ನೈಜ ತಾಂತ್ರಿಕ ತಂಡವನ್ನು ಕೋಲ್ಕತ್ತಾಗೆ ಕಳುಹಿಸಲಾಗಿದೆ. ಸಿಬಿಐ ಮೂಲಗಳ ಪ್ರಕಾರ, ದೆಹಲಿಯಿಂದ ಬಂದಿರುವ ಈ ತಂಡ, ವೈದ್ಯೆಯ ಮೇಲೆ ನಡೆದಿರುವ ಅತ್ಯಾಚಾರ ಘಟನೆಯನ್ನು ಪರಿಶೀಲಿಸುತ್ತಿದೆ.
ಈ ಘಟನೆಗೆ ಸಂಬಂಧಿಸಿದಂತೆ ದೇಶಾದ್ಯಾಂತ ಕಾನೂನು ಕ್ರಮಗಳನ್ನು ಕಠಿಣಗೊಳಿಸುವ ಬಗ್ಗೆ ಗಂಭೀರ ಚರ್ಚೆಗಳು ನಡೆಯಬೇಕು ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.