ಕೊಪ್ಪಳದ ದಲಿತ ದೌರ್ಜನ್ಯ ಪ್ರಕರಣ: 97 ಮಂದಿಗೆ 10 ವರ್ಷಗಳ ನಂತರ ಹೈಕೋರ್ಟ್ ಜಾಮೀನು..!

ಕೊಪ್ಪಳ: ಜಿಲ್ಲೆಯ ಮರಕುಂಬಿ ಗ್ರಾಮದಲ್ಲಿ ನಡೆದ ದಲಿತ ದೌರ್ಜನ್ಯ ಪ್ರಕರಣದಲ್ಲಿ ಬಂಧಿತ 97 ಮಂದಿಗೆ ಕರ್ನಾಟಕ ಹೈಕೋರ್ಟ್ ಧಾರವಾಡ ಪೀಠವು ಮಹತ್ವದ ತೀರ್ಪು ನೀಡಿದ್ದು, ಜೀವಾವಧಿ ಶಿಕ್ಷೆ ಹೊಂದಿದ್ದ 97 ಮಂದಿಗೆ ಜಾಮೀನು ಮಂಜೂರು ಮಾಡಿದೆ. ಈ ಪೈಕಿ ಸಾಮಾನ್ಯ ಶಿಕ್ಷೆಯೊಂದಿಗೆ ಇಬ್ಬರೂ ಸೇರಿ ಒಟ್ಟು 99 ಮಂದಿಗೆ ಜಾಮೀನು ಸಿಕ್ಕಿದೆ.
10 ವರ್ಷಗಳ ಹಿಂದೆ ನಡೆದ ಭೀಕರ ಪ್ರಕರಣ:
2014ರಲ್ಲಿ ಕೊಪ್ಪಳ ಜಿಲ್ಲೆಯ ಮರಕುಂಬಿ ಗ್ರಾಮದಲ್ಲಿ ದಲಿತರ ಮೇಲೆ ನಡೆದ ದೌರ್ಜನ್ಯ ಪ್ರಕರಣ, ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು. ದಲಿತ ಸಮುದಾಯದ ಕೇರಿಗೆ ನುಗ್ಗಿ ಗುಡಿಸಲುಗಳಿಗೆ ಬೆಂಕಿ ಹಚ್ಚಿ ದೌರ್ಜನ್ಯ ಎಸಗಿದ್ದ ಆರೋಪಿಗಳು, ದಲಿತರು ಹೋಟೆಲ್ ಮತ್ತು ಕ್ಷೌರದಂಗಡಿಗೆ ಪ್ರವೇಶಿಸಬಾರದು ಎಂಬ ಕಾರಣಕ್ಕಾಗಿ ಗಲಾಟೆ ನಡೆಸಿದ್ದರು.
ಕೊಪ್ಪಳ ನ್ಯಾಯಾಲಯದಿಂದ ಐತಿಹಾಸಿಕ ತೀರ್ಪು:
ಕಳೆದ ತಿಂಗಳು ಕೊಪ್ಪಳ ಜಿಲ್ಲಾ ನ್ಯಾಯಾಲಯವು 98 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ಐತಿಹಾಸಿಕ ತೀರ್ಪು ನೀಡಿತ್ತು. ಈ ತೀರ್ಪಿನಿಂದ ಹಳ್ಳಿಯ ಸಾಕಷ್ಟು ಜನರು ಜೈಲು ಪಾಲಾಗಿದ್ದು, ಬಂಧಿತರು ತಕ್ಷಣ ಹೈಕೋರ್ಟ್ ಮೆಟ್ಟಿಲೇರಿದ್ದರು.
ಧಾರವಾಡ ಹೈಕೋರ್ಟ್‌ನಿಂದ ತಾತ್ಕಾಲಿಕ ಜಾಮೀನು:
ಧಾರವಾಡ ಹೈಕೋರ್ಟ್ ವಿಭಾಗೀಯ ಪೀಠವು 100 ಅಪರಾಧಿಗಳ ಪೈಕಿ 99 ಮಂದಿಗೆ ಜಾಮೀನು ಮಂಜೂರು ಮಾಡುವ ಮೂಲಕ ಈ ತೀರ್ಪಿಗೆ ತಾತ್ಕಾಲಿಕ ನಿರ್ಣಯವನ್ನು ನೀಡಿದೆ. ಪ್ರತಿಯೊಬ್ಬರನ್ನು 50 ಸಾವಿರ ರೂ ಬಾಂಡ್ ಮೇಲೆ ಬಿಡುಗಡೆ ಮಾಡಲು ಆದೇಶ ನೀಡಿದ್ದು, ಪ್ರತಿಯೊಬ್ಬರು ಶ್ಯೂರಿಟಿಯನ್ನು ಪಡೆಯಬೇಕಾಗಿದೆ.
ವಿಚಾರಣೆ ಮತ್ತು ಜಾಮೀನಿಗೆ ಕಾರಣ:
ಆದೇಶ ಹೊರಡಿಸುವಾಗ ಹೈಕೋರ್ಟ್ ಪೀಠವು ಪ್ರಕರಣದ ತೀವ್ರತೆ, ಇತ್ತೀಚಿನ ಮಾಹಿತಿಗಳ ಪ್ರಕಾರ ಕೆಲವು ಆರೋಪಿಗಳ ಸಾವು, ಮತ್ತು ಅನೇಕರು ಮಾನಸಿಕ ಒತ್ತಡಕ್ಕೊಳಗಾಗಿರುವ ಅಂಶಗಳನ್ನು ಪರಿಗಣಿಸಿದೆ.