ಐಎಸ್ಐ ಏಜೆಂಟ್ ನಿಶಾಂತ್ ಅಗರ್ವಾಲ್‌ಗೆ ಜೀವಾವಧಿ ಶಿಕ್ಷೆ.
ನಾಗ್ಪುರ: ರಷ್ಯಾ ಹಾಗೂ ಭಾರತ ಜಂಟಿಯಾಗಿ ನಿರ್ಮಿಸಿದ ಬ್ರಹ್ಮೋಸ್ ಕ್ಷಿಪಣಿಯ ಮಾಜಿ ಇಂಜಿನಿಯರ್ ನಿಶಾಂತ್ ಅಗರ್ವಾಲ್‌ಗೆ ಪಾಕಿಸ್ತಾನದ ಐಎಸ್‌ಐ ಗೂಢಚಾರಿಕೆಗಾಗಿ ಜೀವಾವಧಿ ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದೆ.
ಅಗರ್ವಾಲ್ ಎರಡು ಫೇಸ್ಬುಕ್ ಖಾತೆಗಳ ಮೂಲಕ ಶಂಕಿತ ಪಾಕಿಸ್ತಾನಿ ಗುಪ್ತಚರ ಕಾರ್ಯಕರ್ತರೊಂದಿಗೆ ಸಂವಹನ ನಡೆಸಿದ್ದರು ಎಂದು ಸಾಬೀತಾಗಿದೆ. ಪಾಕಿಸ್ತಾನದ ಐಎಸ್‌ಐ ಪರ ಬೇಹುಗಾರಿಕೆ ನಡೆಸಿದ್ದಕ್ಕಾಗಿ ಬ್ರಹ್ಮೋಸ್ ಏರೋಸ್ಪೇಸ್ ಮಾಜಿ ಎಂಜಿನಿಯರ್ ನಿಶಾಂತ್ ಅಗರ್‌ವಾಲ್‌ಗೆ ನಾಗ್ಪುರ ನ್ಯಾಯಾಲಯ ಸೋಮವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
2018 ರಲ್ಲಿ ಬಂಧನಕ್ಕೊಳಗಾಗಿದ್ದ ಅಗರ್ವಾಲ್, ಪಾಕಿಸ್ತಾನದ ಗುಪ್ತಚರ ಸಂಸ್ಥೆಗೆ ಬ್ರಹ್ಮೋಸ್ ಕ್ಷಿಪಣಿ ಬಗ್ಗೆ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪ ಹೊರಿಸಲಾಗಿತ್ತು. ಬ್ರಹ್ಮೋಸ್ ಏರೋಸ್ಪೇಸ್‌ನ ಹಿರಿಯ ಸಿಸ್ಟಮ್ ಇಂಜಿನಿಯರ್ ಆಗಿರುವ ಅಗರ್ವಾಲ್, DRDO ಮತ್ತು ರಷ್ಯಾದ ಮಿಲಿಟರಿ ಇಂಡಸ್ಟ್ರಿಯಲ್ ಕನ್ಸೋರ್ಟಿಯಂ (NPO Mashinostroyenia) ನಡುವಿನ ಜಂಟಿ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು, ಇದು ಭಾರತದ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಅಭಿವೃದ್ಧಿಪಡಿಸಿತು, ಇದು ಭೂಮಿ, ಗಾಳಿ, ಸಮುದ್ರ ಮತ್ತು ನೀರೊಳಗಿನಿಂದ ಉಡಾವಣೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.