ಬೊಂಬಾಟ್ ಸುದ್ದಿ! 35 ರೂಪಾಯಿಗೆ ಈರುಳ್ಳಿ: ಬೆಂಗಳೂರಿನಲ್ಲಿ ಮೊಬೈಲ್ ವ್ಯಾನ್ ಮೂಲಕ ಮಾರಾಟ ಪ್ರಾರಂಭ

ಬೆಂಗಳೂರು: ಈರುಳ್ಳಿ ಪ್ರಿಯರಿಗಾಗಿ ಬೊಂಬಾಟ್ ಸುದ್ದಿ ಬಂದಿದೆ! ಮುಕ್ತ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಜಾಸ್ತಿಯಾದ ಹಿನ್ನಲೆಯಲ್ಲಿ, ಭಾರತದ ನ್ಯಾಷನಲ್ ಕೋಆಪರೇಟಿವ್ ಕನ್ಸ್ಯೂಮರ್ಸ್ ಫೆಡರೇಶನ್ (NCCF) ಸೆಪ್ಟೆಂಬರ್ 23 ರಿಂದ, ಬೆಂಗಳೂರಿನಲ್ಲಿ 35 ರೂಪಾಯಿಗೆ ಪ್ರತಿ ಕಿಲೋ ಈರುಳ್ಳಿ ಮಾರಾಟ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ರಿಯಾಯತಿ ದರದಲ್ಲಿ ಈರುಳ್ಳಿ:
ಎನ್‌ಸಿಸಿಎಫ್ ಅಧಿಕೃತವಾಗಿ ಬೆಲೆ ಸ್ಥಿರೀಕರಣ ನಿಧಿ (PSF) ಅಡಿಯಲ್ಲಿ ಈ ಯೋಜನೆಯನ್ನು ಅನುಸರಿಸುತ್ತಿದ್ದು, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ರಾಜ್ಯಗಳಿಂದ ಈರುಳ್ಳಿ ಖರೀದಿಸಲಾಗುತ್ತಿದೆ. ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಾದ್ಯಂತ 112 ಮೊಬೈಲ್ ವ್ಯಾನ್ಗಳು ಈ ಸೇವೆ ನೀಡಲಿವೆ. ಪ್ರತಿ ಕ್ಷೇತ್ರಕ್ಕೆ ನಾಲ್ಕು ಸಂಚಾರಿ ವ್ಯಾನ್ಗಳನ್ನು ನಿಯೋಜಿಸಲಾಗಿದೆ.
ನಿಮ್ಮ ಹತ್ತಿರವಿರುವ ಸ್ಥಳದಲ್ಲಿ ಮಾರಾಟ:
ವ್ಯಾನ್ಗಳ ಮೂಲಕ ಮಧ್ಯಾಹ್ನ 12.30 ರಿಂದ ನಂದಿನಿ ಲೇಔಟ್, ಡಾಲರ್ಸ್ ಕಾಲೋನಿಯಲ್ಲಿ ಈರುಳ್ಳಿ ಮಾರಾಟ ಪ್ರಾರಂಭವಾಗಿದೆ. ಹಂತ ಹಂತವಾಗಿ ಬೆಂಗಳೂರು ನಗರವಾಸಿಗಳಿಗೆ ಎಲ್ಲಾ ಕ್ಷೇತ್ರಗಳಲ್ಲಿ ಲಭ್ಯವಾಗಲಿದೆ. ಹೆಚ್ಚಿನ ಸಂಚಾರಿ ವಾಹನಗಳ ಪ್ರಸ್ತಾವನೆಯೊಂದಿಗೆ ಈ ಮಾರಾಟ ಮುಂದುವರಿಯಲಿದೆ.
ಸಾಮಾನ್ಯ ಜನರಿಗೆ ಕೈಗೆಟುಕುವ ಬೆಲೆ:
ಜನರಿಗೆ ಈರುಳ್ಳಿಯ ಬೆಲೆ ಏರಿಕೆಯ ಪರಿಣಾಮದಿಂದ ತೊಂದರೆ ಆಗಬಾರದು ಎಂಬ ಉದ್ದೇಶದಿಂದ, ಸರಕಾರದ ಸೂಚನೆಯಂತೆ ಈ ಮಾರಾಟ ನಡೆಯುತ್ತಿದ್ದು, ಈ ಮಾರಾಟವು ದರಗಳು ಸಹಜ ಸ್ಥಿತಿಗೆ ಬರುವವರೆಗೂ ಮುಂದುವರಿಯಲಿದೆ ಎಂದು ಎನ್‌ಸಿಸಿಎಫ್ ಅಧಿಕಾರಿಗಳು ತಿಳಿಸಿದ್ದಾರೆ.