ತಮಿಳಿನ “ಅಮರನ್” ಚಿತ್ರದ ಪ್ರಚಾರ: ಬೆಂಗಳೂರಿಗೆ ಬಂದ ಶಿವಕಾರ್ತಿಕೇಯನ್ ಹಾಗೂ ತಂಡ!

ಬೆಂಗಳೂರು: ನಟ ಶಿವಕಾರ್ತಿಕೇಯನ್ ನಟನೆಯ ಬಹುನಿರೀಕ್ಷಿತ ಚಿತ್ರ ಅಮರನ್ ಈ ದೀಪಾವಳಿಗೆ ಬೆಳ್ಳಿ ಪರದೆಯನ್ನು ಅಲಂಕರಿಸಲು ಸಜ್ಜಾಗಿದೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮೇಜರ್ ಮುಕುಂದ್ ವರದರಾಜನ್ ಅವರ ಜೀವನದಿಂದ ಪ್ರೇರಿತವಾಗಿರುವ ಈ ಚಿತ್ರ ಅಕ್ಟೋಬರ್ 31 ರಂದು ಪ್ರೇಕ್ಷಕರ ಮುಂದೆ ಬರಲಿದೆ. ದೀಪಾವಳಿ ಹಬ್ಬದ ಮಧ್ಯೆ ಈ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದ್ದು, ಇದರ ಪ್ರಚಾರಕ್ಕಾಗಿ ಶಿವಕಾರ್ತಿಕೇಯನ್ ನಿನ್ನೆ ಬೆಂಗಳೂರಿಗೆ ಆಗಮಿಸಿ ಅಭಿಮಾನಿಗಳಿಗೆ ಭರ್ಜರಿ ಸಡಗರ ನೀಡಿದರು.
ಅಮರನ್ ಚಿತ್ರದ ಪ್ರಚಾರ:
ನಟ ಶಿವಕಾರ್ತಿಕೇಯನ್ ಮತ್ತು ದಕ್ಷಿಣ ಭಾರತದ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ಅವರ ಜೋಡಿ ಈ ಚಿತ್ರದಲ್ಲಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಅವರ ಜೋಡಿಯನ್ನು ಪರದೆಯ ಮೇಲೆ ನೋಡಲು ಅಭಿಮಾನಿಗಳು ಆಕಾಂಕ್ಷೆಯ ಜೊತೆ ಕಾಯುತ್ತಿದ್ದಾರೆ. ಬೆಂಗಳೂರಿನ ಕೋರಮಂಗಲದ ನೆಕ್ಸಸ್ ಮಾಲ್‌ನಲ್ಲಿ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಭಾಗವಹಿಸಿದ್ದ ಶಿವಕಾರ್ತಿಕೇಯನ್ ಕನ್ನಡ ಪ್ರೇಕ್ಷಕರಿಗೆ ಕನ್ನಡದಲ್ಲಿಯೇ ನಮಸ್ಕಾರ ಹೇಳಿ ಎಲ್ಲರನ್ನು ಸಂತೋಷಪಡಿಸಿದರು.
ಚಿತ್ರದ ಹೈಲೈಟ್ಸ್:
ಅಮರನ್ ಸಿನಿಮಾದ ಕಥೆಯನ್ನು ರಾಜಕುಮಾರ್ ಪೆರಿಯಸಾಮಿ ನಿರ್ದೇಶಿಸಿದ್ದು, ಜಿ.ವಿ. ಪ್ರಕಾಶ್ ಕುಮಾರ್ ಅವರ ಸಂವೇದನಾಶೀಲ ಸಂಗೀತ ಹಾಗೂ ಸಿ.ಎಚ್. ಸಾಯಿ ಅವರ ಛಾಯಾಗ್ರಹಣ ಚಿತ್ರಕ್ಕೆ ವಿಶೇಷ ಬಣ್ಣ ತುಂಬುತ್ತವೆ. ಆರ್. ಕಲೈವನನ್ ಅವರ ಸಂಕಲನ ಚಿತ್ರದ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ವಿಶೇಷವೆಂದರೆ, ಕಮಲ್ ಹಾಸನ್ ಅವರ ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಜೊತೆಯಲ್ಲಿ ನಿರ್ಮಿತವಾಗಿರುವ ಈ ಚಿತ್ರ, ದೇಶಪ್ರೇಮದ ಮಹತ್ವವನ್ನು ಬಿಂಬಿಸಲು ಸಿದ್ಧವಾಗಿದೆ.
ಅಭಿಮಾನಿಗಳ ನಿರೀಕ್ಷೆ:
ಇತ್ತೀಚಿನ ದಿನಗಳಲ್ಲಿ ಈ ಸಿನಿಮಾದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದ್ದು, ಶಿವಕಾರ್ತಿಕೇಯನ್ ಬೆಂಗೂರಿಗೆ ಬಂದ ಬಳಿಕ ಅಭಿಮಾನಿಗಳು ಸಿನಿಮಾದ ಬಿಡುಗಡೆಗೆ ಕುತೂಹಲದಿಂದ ಕಾಯುತ್ತಿದ್ದಾರೆ. ಚಿತ್ರವು ಕನ್ನಡದಲ್ಲಿಯೂ ಬಿಡುಗಡೆಯಾಗುತ್ತಿದ್ದು, ರಾಜ್ಯದ ಅಭಿಮಾನಿಗಳು ಇದನ್ನು ಹೇಗೆ ಸ್ವೀಕರಿಸಲಿದ್ದಾರೆ ಎಂದು ನೋಡಬೇಕಾಗಿದೆ.