ಶಿರೂರು ಗುಡ್ಡ ಕುಸಿತ; ಸ್ಥಳಕ್ಕೆ ಭೇಟಿ ನೀಡಿದ ಎಚ್‌ಡಿಕೆ.

ಉತ್ತರ ಕನ್ನಡ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಗ್ರಾಮದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಗುಡ್ಡ ಕುಸಿತ ಸಂಭವಿಸಿತ್ತು. ಈ ಘಟನೆ ನಡೆದ ಸ್ಥಳಕ್ಕೆ ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಅವರು ಇಂದು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಘಟನೆಯ ಭೀಕರತೆಯನ್ನು ಕಂಡು ಮರುಗಿದ್ದಾರೆ.
ಗುಡ್ಡ ಕುಸಿತಕ್ಕೆ ಒಳಗಾಗಿ ತಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡ ಗ್ರಾಮಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಹಾಗೆಯೇ ಸಂತ್ರಸ್ತರಿಗೆ ಪರಿಹಾರ ಹಾಗೂ ಉದ್ಯೋಗದ ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ಹಾಗೂ ಕುಮಟಾ ಭಾಗದ ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ ಉಪಸ್ಥಿತರಿದ್ದರು.
ನಡೆದ ಘಟನೆಗೆ ಯಾವುದೇ ಅಧಿಕಾರಿಗಳನ್ನು ದೂಷಿಸುವುದಿಲ್ಲ. ದೇಶದ ಅಭಿವೃದ್ಧಿ ಮಾಡುವ ನೆಲೆಯಲ್ಲಿ, ಮೂಲಸೌಕರ್ಯ ವ್ಯವಸ್ಥೆಯನ್ನು ಉನ್ನತ ಗೊಳಿಸುವ ಸಂದರ್ಭದಲ್ಲಿ ಈ ರೀತಿಯ ಘಟನೆಗಳು ಸಂಭವಿಸುತ್ತವೆ. ಗುಡ್ಡ ಕುಸಿತದಿಂದ ರೈತರ ಬೆಳೆಗೂ ಕೂಡ ಹಾನಿ ಉಂಟಾಗಿದೆ. ರಾಜ್ಯ ಸರ್ಕಾರ ಕೇವಲ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸಿದರೆ ಸಾಲದು. ಪುಡಿಗಾಸು ಪರಿಹಾರದಿಂದ ಯಾವುದೇ ಉಪಯೋಗವಿಲ್ಲ. ಮೋದಿಯವರಿಗೆ ಕೂಡ ಗುಡ್ಡ ಕುಸಿತದ ಕುರಿತು ಮಾಹಿತಿ ನೀಡಲಾಗಿದೆ ಎಂದು ಮಾಧ್ಯಮಗಳಿಗೆ ಎಚ್.ಡಿ. ಕುಮಾರಸ್ವಾಮಿ ಅವರು ಹೇಳಿದ್ದಾರೆ.