ಬೆಂಗಳೂರಿನಲ್ಲಿ 26 ವರ್ಷದ ಮಹಿಳೆಯ ಭೀಕರ ಹತ್ಯೆ: ಫ್ರಿಜ್ ಒಳಗೆ ಸಿಕ್ಕಿತ್ತು ಶವದ ಭಾಗಗಳು!
ಬೆಂಗಳೂರು: ನಗರವಾಸಿಗಳಿಗೆ ತೀವ್ರ ಆಘಾತ ಉಂಟುಮಾಡಿದ ಕೃತ್ಯವೊಂದು ಘಟಿಸಿದೆ. 26 ವರ್ಷದ ಮಹಿಳೆಯ ಶವದ ಭಾಗಗಳು ಫ್ರಿಜ್‌ನಲ್ಲಿ ಪತ್ತೆಯಾದ ಘಟನೆ ಇದೀಗ ಬೆಳಕಿಗೆ ಬಂದಿದೆ. ಈ ಭಯಾನಕ ಘಟನೆ ವಯಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯ ಮುನೇಶ್ವರ ಬ್ಲಾಕ್ 4ನೇ ಕ್ರಾಸ್‌ನಲ್ಲಿ ನಡೆದಿದೆ.
ಪೊಲೀಸ್ ವರದಿ ಪ್ರಕಾರ, ಈ ಹತ್ಯೆ 10-15 ದಿನಗಳ ಹಿಂದೆ ನಡೆದಿದೆ ಎಂದು ಅಂದಾಜಿಸಲಾಗಿದೆ. ಮೃತ ಮಹಿಳೆ ಮಹಾಲಕ್ಷ್ಮಿ, ಕಳೆದ ಮೂರು ತಿಂಗಳಿಂದ ಈ ಪ್ರದೇಶದಲ್ಲಿ ಮನೆ ಬಾಡಿಗೆಗೆ ತೆಗೆದುಕೊಂಡಿದ್ದಳು. ಮುನೇಶ್ವರ ಬ್ಲಾಕ್‌ನಲ್ಲಿ ಈ ಮನೆ ಜಯರಾಮ್ ಎಂಬ ವ್ಯಕ್ತಿಗೆ ಸೇರಿದ್ದು ಎನ್ನಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ, ಮಹಾಲಕ್ಷ್ಮಿ ಪರಿಚಯದ ವ್ಯಕ್ತಿಯೇ ಈ ಕೃತ್ಯಕ್ಕೆ ಮುಂದಾಗಿದ್ದು, ಆಕೆ ಶವವನ್ನು 30 ಕ್ಕೂ ಹೆಚ್ಚು ಭಾಗಗಳಿಗೆ ಬೇರ್ಪಡಿಸಿ, ಅವುಗಳನ್ನು ಫ್ರಿಜ್‌ನಲ್ಲಿ ಇಟ್ಟಿದ್ದಾನೆ ಎಂದು ಶಂಕಿಸಲಾಗಿದೆ.
ಘಟನೆ ಕುರಿತು ಮಾಹಿತಿ ದೊರಕುತ್ತಿದ್ದಂತೆಯೇ ವಯಲಿಕಾವಲ್ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ. ಡಿಸಿಪಿ ಶೇಖರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು ಪೊಲೀಸರು ದುಷ್ಕರ್ಮಿಯ ಪತ್ತೆಗಾಗಿ ಶ್ರಮಿಸುತ್ತಿದ್ದು, ಸಾರ್ವಜನಿಕರು ಈ ಪ್ರಕರಣದ ಬಗ್ಗೆ ಯಾವುದೇ ಮಾಹಿತಿ ಹೊಂದಿದ್ದರೆ, ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.