ಮಹಿಳೆಯ ಮೇಲೆ ಇನ್ನೊಬ್ಬ ಮಹಿಳೆ ಲೈಂಗಿಕ ದೌರ್ಜನ್ಯ ಎಸಗಿದರೆ 354ಎ ಸೆಕ್ಷನ್ ಅನ್ವಯವಾಗಲ್ಲ ಎಂದ ಕೇರಳ ಹೈಕೋರ್ಟ್.
ತಿರುವನಂತಪುರಂ: ಇತ್ತಿಚೆಗೆ ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಮಹಿಳೆಯೊಬ್ಬಳು ಮತ್ತೊಬ್ಬ ಮಹಿಳೆಯ ವಿರುದ್ಧ 354ಎ ಸೆಕ್ಷನ್ ಅಡಿಯಲ್ಲಿ ದಾಖಲಿಸಲಾದ ಎಫ್ಐಆರ್ ಅನ್ನು ರದ್ದುಪಡಿಸಿದೆ. ನ್ಯಾಯಮೂರ್ತಿ ಎ. ಬದರುದ್ದೀನ್ ಅವರ ಏಕಪೀಠ ಈ ತೀರ್ಪು ನೀಡಿದ್ದು, 354ಎ ಸೆಕ್ಷನ್ ಅಡಿಯಲ್ಲಿ ಲೈಂಗಿಕ ದೌರ್ಜನ್ಯ ಸಂಬಂಧಿಸಿದ ಕಾನೂನು ಪುರುಷರಿಗೆ ಮಾತ್ರ ಅನ್ವಯವಾಗುತ್ತದೆ ಎಂದು ಸ್ಪಷ್ಟಪಡಿಸಿದೆ.
ಆರೋಪಿ ಮಹಿಳೆಯರ ಪರ ವಕೀಲ ವಿ.ಜಿ. ಅರುಣ್ ವಾದ ಮಂಡಿಸಿದ್ದು, ಪ್ರತಿವಾದಿಗಳ ಪರ ವಕೀಲರಾದ ಪಬ್ಲಿಕ್ ಪ್ರಾಸಿಕ್ಯೂಟರ್ ಎಂ.ಪಿ. ಪ್ರಸಾದ್ ವಾದಿಸಿದರು. ಆರೋಪಿ ಮಹಿಳೆಯರು ಇನ್ನೊಂದು ಮಹಿಳೆಗೆ ಹಣ, ಫ್ಲಾಟ್ ಬೇಡಿಕೆ ಇಟ್ಟಿದ್ದಾರೆ ಎಂಬ ಆರೋಪದ ಮೇಲೆ 498ಎ, 354ಎ ಮತ್ತು 34 ಸೆಕ್ಷನ್ ಅಡಿಯಲ್ಲಿ ಎಫ್ಐಆರ್ ದಾಖಲಾಗಿತ್ತು.
ನ್ಯಾಯಾಲಯವು 354ಎ ಸೆಕ್ಷನ್ ಪುರುಷರಿಗೆ ಮಾತ್ರ ಅನ್ವಯವಾಗುತ್ತದೆ ಎಂಬ ತೀರ್ಪು ನೀಡಿದ ಪರಿಣಾಮ, ಈ ಸೆಕ್ಷನ್ ಅಡಿಯಲ್ಲಿ ಎಫ್ಐಆರ್ ರದ್ದುಪಡಿಸಲಾಗಿದೆ. ಆದರೆ, 498ಎ ಮತ್ತು 34 ಸೆಕ್ಷನ್‌ಗಳ ಅಡಿಯಲ್ಲಿ ಸಲ್ಲಿಸಿದ್ದ ಎಫ್ಐಆರ್ ಪ್ರಕರಣಗಳನ್ನು ಮುಂದುವರಿಸಲು ಹೈಕೋರ್ಟ್ ಅನುಮತಿಸಿದೆ.