ಜೂನ್ 25ನ್ನು ‘ಸಂವಿಧಾನ ಹತ್ಯೆ ದಿನ’ ಎಂದು ಘೋಷಿಸಿದ ಕೇಂದ್ರ ಸರ್ಕಾರ.
ನವದೆಹಲಿ: ಕೇಂದ್ರ ಬಿಜೆಪಿ ಸರ್ಕಾರ ಪ್ರತಿವರ್ಷ ಜೂನ್ 25ನೇ ತಾರೀಖನ್ನು ‘ಸಂವಿಧಾನ ಹತ್ಯೆ ದಿನ’ ಎಂದು ಆಚರಿಸಲು ತೀರ್ಮಾನ ತೆಗೆದುಕೊಂಡಿದೆ. ಏನಿದು ಸಂವಿಧಾನ ಹತ್ಯೆ ದಿನ? ಜೂನ್ 25ರಂದು ಭಾರತದ ಇತಿಹಾಸದಲ್ಲಿ ನಡೆದ ಘಟನೆಯಾದರೂ ಯಾವುದು?
ಜೂನ್ 25, 1975 ರಂದು ಅಂದಿನ ಕೇಂದ್ರದ ಅಧಿಕಾರವನ್ನು ವಹಿಸಿಕೊಂಡಿದ್ದ, ಕಾಂಗ್ರೆಸ್ ಸರ್ಕಾರ ಸಂವಿಧಾನದ ವಿಧಿ 356 ಅನ್ನು ದುರುಪಯೋಗಪಡಿಸಿಕೊಂಡು, ಆಂತರಿಕ ಕಲಹ ಎಂಬ ಕಾರಣವಿಟ್ಟು, ರಾಷ್ಟ್ರಪತಿಗಳಿಂದ 21 ತಿಂಗಳುಗಳ ತುರ್ತುಪರಿಸ್ಥಿತಿ ಹೇರಿಕೆ ಮಾಡಿದ್ದರು. ಈ ಕಹಿ ಘಟನೆಯನ್ನು ನೆನಪಿಸಿಕೊಳ್ಳಲು ಕೇಂದ್ರ ಬಿಜೆಪಿ ಸರ್ಕಾರ, ಪ್ರತಿವರ್ಷ ಜೂನ್ 25ರಂದು ‘ಸಂವಿಧಾನ ಹತ್ಯೆ ದಿನ’ ಎಂದು ಆಚರಿಸಲು ಮುಂದಾಗಿದೆ.
“ಜೂನ್ 25, 1975 ರಂದು, ಅಂದಿನ ಪ್ರಧಾನಿ ಇಂದಿರಾಗಾಂಧಿ, ಸರ್ವಾಧಿಕಾರಿ ಮನಸ್ಥಿತಿಯ ನಿರ್ಲಜ್ಜ ಪ್ರದರ್ಶನದಲ್ಲಿ, ರಾಷ್ಟ್ರದ ಮೇಲೆ ತುರ್ತು ಪರಿಸ್ಥಿತಿಯನ್ನು ಹೇರುವ ಮೂಲಕ ನಮ್ಮ ಪ್ರಜಾಪ್ರಭುತ್ವದ ಆತ್ಮವನ್ನು ಕತ್ತು ಹಿಸುಕಿದರು, ಲಕ್ಷಾಂತರ ಜನರನ್ನು ತಮ್ಮ ತಪ್ಪಿಲ್ಲದೆ ಕಂಬಿಗಳ ಹಿಂದೆ ಎಸೆಯಲಾಯಿತು. ಮತ್ತು ಮಾಧ್ಯಮಗಳ ಧ್ವನಿಯನ್ನು ಮೌನಗೊಳಿಸಲಾಯಿತು, ”ಎಂದು ಗೃಹ ಸಚಿವ ಅಮಿತ್ ಶಾ ಅವರು ಎಕ್ಸ್ ನಲ್ಲಿ ಸರ್ಕಾರದ ಅಧಿಸೂಚನೆಯಲ್ಲಿ ಘೋಷಿಸಿದರು.
ಭಾರತವನ್ನು, ಭಾರತದ ಪ್ರಜಾಪ್ರಭುತ್ವವನ್ನು ಅಂಧಕಾರದಲ್ಲಿ ಮುಳುಗಿಸಿದ್ದು ಅಂದಿನ ತುರ್ತುಪರಿಸ್ಥಿತಿ ಸಂದರ್ಭ. ಇಂತಹ ಆ ಸಂವಿಧಾನಿಕ ಕಪ್ಪು ಕಲೆ, ಭಾರತದ ಭವಿಷ್ಯದಲ್ಲಿ ಮತ್ತೆ ಮರುಕಳಿಸಬಾರದು ಎಂಬ ದೃಷ್ಟಿಯಿಂದ ಕೇಂದ್ರ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ.