ಐಪಿಎಲ್ ಆರಂಭಕ್ಕೆ ದಿನಗಣನೆ! ಮೊದಲ ಪಂದ್ಯದಲ್ಲೇ ಇತಿಹಾಸ ಬರಿತಾರಾ ಕಿಂಗ್ ಕೊಹ್ಲಿ..!?

ಐಪಿಎಲ್ 17ನೇ ಆವೃತ್ತಿ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಮಾ. 22ರಂದು ಈ ಸೀಸನ್‌ನ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಲಿ ಚಾಂಪಿಯನ್ಸ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕಣಕ್ಕಿಳಿಯಲಿದೆ. ಈ ಪಂದ್ಯ ಚೆನ್ನೈನ ಎಂಸಿ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ. ಬಹುನಿರೀಕ್ಷಿತ ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆ ಸೃಷ್ಟಿಸುವ ಎಲ್ಲ ಸಾಧ್ಯತೆ ಇದೆ.

ಇತಿಹಾಸ ಬರೆಯೋಕೆ ಕಿಂಗ್ ಕೊಹ್ಲಿಗೆ ಬೇಕು ಕೇವಲ 6 ರನ್!
ಕ್ರಿಕೆಟ್‌ನಲ್ಲಿ ದಾಖಲೆಗಳನ್ನು ಸೃಷ್ಟಿಸೋದು ಕಿಂಗ್ ಕೊಹ್ಲಿಗೆ ಹೊಸದಲ್ಲ..! ಅಂತಾರಾಷ್ಟ್ರೀಯ ಮಟ್ಟದ ಮೂರೂ ಕ್ರಿಕೆಟ್ ಮಾದರಿಯಲ್ಲೂ ಅತ್ಯುತ್ತಮ ಪ್ರದರ್ಶನ ನೀಡುತ್ತ ನಂಬರ್ 1 ಬ್ಯಾಟ್ಸ್‌ಮನ್, ಶ್ರೇಷ್ಠ ಆಟಗಾರ ಎಂದು ಖ್ಯಾತಿ ಪಡೆದವರು ಕಿಂಗ್ ಕೊಹ್ಲಿ! ಇದೀಗ ಟಿ20 ಕ್ರಿಕೆಟ್ ಮಾದರಿಯಲ್ಲಿ 12000 ರನ್ ಗಳಿಸಿದ ಮೊದಲ ಭಾರತೀಯ ಎಂದು ದಾಖಲೆ ನಿರ್ಮಿಸಲು ವಿರಾಟ್ ಕೊಹ್ಲಿಗೆ ಕೇವಲ 6ರನ್ ಬೇಕಾಗಿದೆ. ಈಗಾಗಲೇ ಕೊಹ್ಲಿ ಒಟ್ಟು 11994 ರನ್‌ಗಳನ್ನು ಟಿ20 ಮಾದರಿಯಲ್ಲಿ ಗಳಿಸಿದ್ದಾರೆ. ಅದರಲ್ಲಿ 4037 ರನ್‌ಗಳು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬಂದಿವೆ. ಐಪಿಎಲ್‌ನಲ್ಲಿ ಒಟ್ಟು 7263 ರನ್ ಗಳಿಸಿದ್ದಾರೆ. ಇದರೊಂದಿಗೆ ದೇಶೀಯ ಕ್ರಿಕೆಟಲ್ಲಿ ದೆಹಲಿ ತಂಡಕ್ಕೆ ಆಡುವಾಗ ಸಹ ಕೊಹ್ಲಿ ಒಂದಷ್ಟು ರನ್ ಗಳಿಸಿದ್ದಾರೆ. ಈಗ ಕೇವಲ 6ರನ್ ಗಳಿಸಿದರೆ 12000ರನ್ ಗಡಿ ದಾಟಿದ ಮೊದಲ ಭಾರತೀಯ ಎಂದು ಸಾರ್ವಕಾಲಿಕ ದಾಖಲೆ ಬರೆಯಲಿದ್ದಾರೆ.
ಐಪಿಎಲ್‌ನಲ್ಲಿ ಕೊಹ್ಲಿಯ ಇತರ ದಾಖಲೆಗಳು
- ಐಪಿಎಲ್ ಇತಿಹಾಸದಲ್ಲಿ ಒಂದೇ ತಂಡಕ್ಕೆ ಎಲ್ಲಾ 16 ಲೀಗ್‌ಗಳನ್ನು ಆಡಿದ ಏಕೈಕ ಆಟಗಾರ ವಿರಾಟ್ ಕೊಹ್ಲಿ. 2008ರಲ್ಲಿ ಆರಂಭವಾದಗಿಂದಲೂ ಇಲ್ಲಿವರೆಗೆ ರಾಯಲ್ ಚಾಲೆಂಚರ್ಸ್ ಬೆಂಗಳೂರು ತಂಡಕ್ಕೆ ಮಾತ್ರ ಆಡಿದ್ದಾರೆ.
- ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ರನ್ ಮತ್ತು ಶತಕಗಳನ್ನು ಸಿಡಿಸಿರುವ ದಾಖಲೆ ಕೊಹ್ಲಿ ಹೆಸರಿನಲ್ಲಿದೆ. ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಇದುವರೆಗೂ ಒಟ್ಟು 7263 ರನ್ ಗಳಿಸಿ, 7 ಶತಕಗಳನ್ನು ಸಿಡಿಸಿದ್ದಾರೆ.
- 2016ರಲ್ಲಿ ನಡೆದ ಐಪಿಎಲ್ ಸೀಸನ್‌ನಲ್ಲಿ ಕೊಹ್ಲಿ 973ರನ್ ಗಳಿಸಿ, ಒಂದೇ ಸೀಸನ್‌ನಲ್ಲಿ ಅತಿಹೆಚ್ಚು ರನ್ ಗಳಿಸಿದ ಖ್ಯಾತಿಗೂ ಪಾತ್ರರಾಗಿದ್ದಾರೆ.
ಕಳೆದ 16ವರ್ಷಗಳ ಐಪಿಎಲ್ ಜರ್ನಿಯಲ್ಲಿ ದಾಖಲೆಗಳ ಸರದಾರ ವಿರಾಟ್ ಕೊಹ್ಲಿ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಅತ್ಯುತ್ತಮ ಪ್ರದರ್ಶನ ನೀಡಿ, ದಶಕಗಳ ಕಾಲ ನಾಯಕತ್ವ ವಹಿಸಿ, ತಂಡವನ್ನು ಮುನ್ನಡೆಸಿದ್ದಾರೆ.
ಇದನ್ನೂ ಓದಿ : ಆರ್‌ಜೆ ಪ್ರದೀಪ “ಮರ್ಯಾದೆ ಪ್ರಶ್ನೆ!”
ಆದರೆ ನನಸಾಗದ ಕನಸು..!
ಉತ್ತಮ ತಂಡ, ಅದ್ಭುತ ಆಟಗಾರರು, ಬಲಿಷ್ಠ ಪ್ರದರ್ಶನದ ನಡುವೆಯೂ ರಾಯಲ್ ಚಾಲೆಂಚರ್ಸ್ ಬೆಂಗಳೂರು ತಂಡಕ್ಕೆ ಐಪಿಎಲ್ ಟ್ರೋಫಿ ಗೆಲ್ಲುವ ಕನಸು ಮರೀಚಿಕೆಯಾಗೇ ಉಳಿದಿದೆ. ಕಿಂಗ್ ಕೊಹ್ಲಿ ತಮ್ಮ ದಾಖಲೆಗಳ ಆಟದ ಮಧ್ಯೆ ಆರ್‌ಸಿಬಿಗೆ ಕಪ್ ಗೆಲ್ಲಿಸಿ ಕೊಡುವಲ್ಲಿ ಈ ಸಲ ಯಶಸ್ವಿಯಾಗ್ತಾರಾ?
ಈ ಬಾರಿ ಆರ್‌ಸಿಬಿ ತನ್ನ ಹೆಸರಿನಲ್ಲಿ ತುಸು ಬದಲಾವಣೆ ಮಾಡಿಕೊಂಡು ಅದೃಷ್ಟ ಪರೀಕ್ಷೆಗೆ ಇಳಿಯಲಿದೆ ಎಂಬ ವರದಿಗಳು ಇವೆ. ಈ ಬಾರಿಯಾದರೂ ವಿಜಯಲಕ್ಷ್ಮಿ ಆರ್‌ಸಿಬಿಗೆ ಒಲಿಯುತ್ತಾಳಾ? ಕೋಟಿ ಕನ್ನಡಿಗರ ಕನಸು ನನಸಾಗುತ್ತಾ? ಈ ಸಲ ಕಪ್….?