ರಾಮಜನ್ಮಭೂಮಿಯ ನಂತರ ಜ್ಞಾನವಾಪಿ ಮಸೀದಿಯ ಪ್ರಕರಣ ದೇಶದ ಗಮನ ಸೆಳೆದಿದೆ. ಜನವರಿ 31 ರಂದು ವಾರಣಾಸಿಯ ಜಿಲ್ಲಾ ನ್ಯಾಯಾಲಯ, ಮಸೀದಿಯ ನೆಲಮಾಳಿಗೆಯಲ್ಲಿ ಪೂಜೆ ಸಲ್ಲಿಸಲು ಹಿಂದೂಗಳಿಗೆ ಅನುವು ಮಾಡಿಕೊಟ್ಟಿದೆ. ಪುರಾತತ್ವ ಇಲಾಖೆಯೂ ಸಹ ಮಸೀದಿಯಲ್ಲಿ ಹಿಂದೂ ಧರ್ಮಕ್ಕೆ ಸೇರಿದ ಮೂರ್ತಿಗಳು ಸಿಕ್ಕ ಪುರಾವೆಗಳನ್ನು ನ್ಯಾಯಾಲಯಕ್ಕೆ ನೀಡಿದೆ.
ಈ ಹಿನ್ನೆಲೆಯಲ್ಲಿ ‘ಇಂಡಿಯಾ ಟುಡೇ’ಯ ಸಂದರ್ಶನದಲ್ಲಿ ಪುರಾತತ್ವ ಇಲಾಖೆಯವರು ದೇವಸ್ಥಾನದ ಕುರುಹು ಪತ್ತೆ ಆಗಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅಖಿಲ ಭಾರತ ಮಜ್ಲಿಸ್-ಇ-ಇತ್ತೆಹಾದ್-ಉಲ್-ಮುಸ್ಲಿಮೀನ್ ಪಕ್ಷದ ಮುಖಂಡ ಅಸಾದುದ್ದೀನ್ ಓವೈಸಿ, “ಹಿಂದೂಗಳಿಗೆ ಯಾವುದೇ ಮಸೀದಿಗಳನ್ನು ಬಿಟ್ಟುಕೊಡುವ ಮಾತೇ ಇಲ್ಲ” ಎಂದು ವಾಗ್ದಾಳಿ ನಡೆಸಿದರು.
“ಅಯೋಧ್ಯೆಯ ಬಾಬರಿ ಮಸೀದಿಯಲ್ಲಿ ಮುಸ್ಲಿಂರು ಪ್ರಾರ್ಥನೆ ಸಲ್ಲಿಸುತ್ತಿರಲಿಲ್ಲ, ಆದರೆ ಜ್ಞಾನವಾಪಿ ಮಸೀದಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ, ಹಾಗಾಗಿ ಈ ಪ್ರಕರಣದ ಸಂಬಂಧ ನ್ಯಾಯಾಲಯಕ್ಕೆ ಸೂಕ್ತ ದಾಖಲೆಗಳನ್ನು ಸಲ್ಲಿಸಿ, ಕಾನೂನಾತ್ಮಕ ಹೋರಾಟವನ್ನು ಮುಂದುವರಿಸುತ್ತೇವೆ”. ಎಂದರು.
“ಮುಸ್ಲಿಮರಿಗೆ ಸಂಬಂಧಿಸಿದಂತೆ ನಾನು ಹಲವು ಬಾರಿ ಸಂಸತ್ತಿನಲ್ಲಿಯೂ ಮಾತನಾಡಿದ್ದೇನೆ. ಪ್ರಧಾನಿ ಮೋದಿ ಮೇಲೆ ನಮಗೆ ಯಾವುದೇ ವಿಶ್ವಾಸ ಉಳಿದಿಲ್ಲ”. ಎಂದು ಓವೈಸಿ ಟೀಕಿಸಿದರು.