ಎಲ್ಲಿ ನಡೆಯಲಿದೆ ಈ ಬಾರಿಯ ಯೋಗ ದಿನ?
ನವದೆಹಲಿ: ಯೋಗ ಭಾರತದ ಪ್ರಾಚೀನ ವಿದ್ಯೆ ಆಗಿದ್ದು, ಮನುಷ್ಯನ ಶಾರೀರಿಕ ಹಾಗೂ ಮಾನಸಿಕ ಆರೋಗ್ಯದ ಸದೃಢತೆಗೆ ಯೋಗ ಅತ್ಯಗತ್ಯ ಎಂದು ನಾವು ಪ್ರಾಚೀನ ಕಾಲದಿಂದಲೂ ನಂಬಿಕೊಂಡು ಬಂದಿದ್ದೇವೆ. ಪ್ರತಿ ವರ್ಷ ಅಂತರಾಷ್ಟ್ರೀಯ ಯೋಗ ದಿನವನ್ನು ಜೂನ್ 21ರಂದು ಆಚರಿಸಲಾಗುತ್ತದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, 2014ರಲ್ಲಿ ವಿಶ್ವಸಂಸ್ಥೆಯ 69ನೆಯ ಸಾಮಾನ್ಯ ಸಭೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲು ಪ್ರಸ್ತಾವನೆಯನ್ನು ಮುಂದಿಟ್ಟಿದ್ದರು. ಅದರಂತೆ ಡಿಸೆಂಬರ್, 11, 2014ರಲ್ಲಿ ವಿಶ್ವಸಂಸ್ಥೆ ಅಂತರಾಷ್ಟ್ರೀಯ ಯೋಗ ದಿನಕ್ಕೆ ಒಪ್ಪಿಗೆಯನ್ನು ಸೂಚಿಸಿತು.
2024ರಲ್ಲಿ ಹತ್ತನೇ ಅಂತರಾಷ್ಟ್ರೀಯ ಯೋಗ ದಿನವನ್ನು ಭಾರತ ಈ ಬಾರಿ ಕಣಿವೆ ರಾಜ್ಯವಾದ ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರ ದಾಳ ಸರೋವರದ ದಡದಮೇಲೆ ಆಚರಿಸಲಿದೆ. ಜೂನ್ 21ರಂದು ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲು ಒಂದು ಕಾರಣ ಕೂಡ ಇದೆ. ಜೂನ್ 21ಕ್ಕೆ ಸೂರ್ಯನು ಉತ್ತರ ಗೋಳಕ್ಕೆ ತನ್ನ ನೇರ ಕಿರಣಗಳನ್ನ ಪಸರಿಸುವುದರಿಂದ, ಅಂದು ಭೂಮಿಯ ಉತ್ತರ ಗೋಳಾರ್ದದಲ್ಲಿ ದೀರ್ಘವಾದ ಹಗಲನ್ನು ಹೊಂದುತ್ತದೆ. ಆದ್ದರಿಂದಲೇ ಜೂನ್ 21ಕ್ಕೆ ಯೋಗ ದಿನವನ್ನು ಆಚರಿಸಲಾಗುತ್ತದೆ.