ಪರಿಶಿಷ್ಟ ಜಾತಿಗೆ ಸೇರಿದ ಭೂಮಿಯನ್ನು ಸಿದ್ದರಾಮಯ್ಯನವರು ನುಂಗಿದ್ದಾರೆ ಎಂದು ಆರೋಪಿಸಿದ ಯತ್ನಾಳ್.
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಂಬಂಧಿಸಿದ ಭೂಮಿ ಪರಿಶಿಷ್ಟ ಜಾತಿಯ ಫಲಾನುಭವಿಗಳಿಗೆ ಸಲ್ಲತಕ್ಕದ್ದು. ಈ ಭೂಮಿಯನ್ನು ಸಿದ್ದರಾಮಯ್ಯನವರ ಪತ್ನಿಯ ಸಹೋದರ ಮಲ್ಲಿಕಾರ್ಜುನ ಸ್ವಾಮಿ, ಜಿಲ್ಲಾಧಿಕಾರಿಗಳ ಅನುಮತಿ ಪಡೆಯದೆ ಖರೀದಿ ಮಾಡಿದ್ದಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ದಾನ ಪತ್ರ ಹಾಗೂ ಆರ್‌ಟಿಸಿ ಗಳನ್ನು ಯತ್ನಾಳ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
“ಜಿಲ್ಲಾಧಿಕಾರಿಗಳ ಅನುಮತಿಯಿಲ್ಲದೆ ಎಸ್‌ಸಿ ಫಲಾನುಭವಿಯಿಂದ ಜಮೀನು ಖರೀದಿಸಿರುವುದು ಅಕ್ರಮವಾಗಿದೆ. ಸಿಎಂ ಸಿದ್ದರಾಮಯ್ಯ ಅವರ ಪತ್ನಿಯ ಸಹೋದರ ಮಲ್ಲಿಕಾರ್ಜುನಸ್ವಾಮಿ ಅವರು ಈ ಪೂರ್ವಾನುಮತಿ ಪಡೆಯದೆ ಎಸ್‌ಸಿ ಭೂ ಮಾಲೀಕರಿಂದ ಭೂಮಿ ಖರೀದಿಸಿದ್ದಾರೆ. 2023ರಲ್ಲಿ ಜಾರಿಗೆ ತಂದ (ಕೆಲವು ಜಮೀನುಗಳ ಹಸ್ತಾಂತರ ನಿಷೇಧ) ಕಾಯಿದೆ, 1978ರ ಹೊಸ ತಿದ್ದುಪಡಿಯ ಪ್ರಕಾರ, ಮೈಸೂರಿನ ಕೆಸರೆ ಗ್ರಾಮದ ಸ. ನಂ 464ರಲ್ಲಿನ 3 ಎಕರೆ 16 ಗುಂಟಾ ಅಳತೆಯ ಜಮೀನನ್ನು ಮೂಲ ಮಾಲೀಕರಿಗೆ ಹಿಂದಿರುಗಿಸಬೇಕು. ಹಾಗೆಯೇ ಆ ಮಾಲೀಕರು ಮೈಸೂರು ಅಭಿವೃದ್ಧಿ ಪ್ರಾಧಿಕಾರದಿಂದ ಪರಿಹಾರ ಪಡೆಯಲು ಅರ್ಹರಾಗಿರುತ್ತಾರೆ.
ದಲಿತರ ರಕ್ಷಕ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯನವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಸದರಿ ಜಮೀನು ಸ್ವಾಧೀನಕ್ಕೆ ಪರಿಹಾರವಾಗಿ ಅವರ ಪತ್ನಿ ಪಡೆದಿರುವ 14 ನಿವೇಶನಗಳನ್ನು ಕೂಡಲೇ ದಲಿತ ಮಾಲೀಕರಿಗೆ ಹಸ್ತಾಂತರಿಸಬೇಕು. ದಲಿತರ ರಕ್ಷಣೆಯ ಹೆಸರಿನಲ್ಲಿ ಸಿದ್ದರಾಮಯ್ಯ ದಲಿತರನ್ನು ಶೋಷಿಸಬಾರದು, ವಂಚನೆ ಮಾಡಬಾರದು.” ಎಂದು ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.
ದಲಿತರ ಉದ್ಧಾರಕ್ಕಾಗಿ ಬಂದಿರುವ ಸರ್ಕಾರ ಎಂದು ಹೇಳುವ ಸಿದ್ದರಾಮಯ್ಯನವರು ಈ ಆರೋಪದಿಂದ ಹೇಗೆ ಪಾರಾಗಿದ್ದಾರೆ? ದಲಿತರ ಪರ ಎಂಬುದು ಬರೀ ಬಾಯಿ ಮಾತಿಗೋ ಅಥವಾ ನಿಜವಾಗಿಯೋ ಎಂಬುದಕ್ಕೆ ಉತ್ತರ ಸಿದ್ದರಾಮಯ್ಯನವರು ನೀಡಬೇಕಿದೆ.