Alma Corner

ಅಂಕೆ ಸಂಖ್ಯೆಗಳ ಚತುರೆ… ಶಕುಂತಲಾ ದೇವಿ…!

ಮಾನವ ಕಂಪ್ಯೂಟರ್ ಎಂದೇ ಖ್ಯಾತಿಗಳಿಸಿದಂತಹ ಶಕುಂತಲಾ ದೇವಿಯವರು ಜನಿಸಿದ್ದು 1929 ನವೆಂಬರ್‌ 04 ರಂದು ಬೆಂಗಳೂರಿನಲ್ಲಿ. ಅವರ ತಂದೆ ಸಿ.ವಿ ಸುಂದರ್‌ರಾಜ್‌ರಾವ್. ಅವರದ್ದು ಸಾಮಾನ್ಯ ಮಧ್ಯಮ ವರ್ಗದ ಕುಟುಂಬವಾಗಿತ್ತು. ಶಕುಂತಲಾ ದೇವಿಯವರು  ತಮ್ಮ ಸಣ್ಣ ಪ್ರಾಯದಲ್ಲೆ ಗಣಿತದ ಕ್ಲಿಷ್ಟಕರವಾದಂತಹ ಸಮಸ್ಯೆಗಳನ್ನು ಬಿಡಿಸುತ್ತಿದ್ದರು. ಗಣಿತದಲ್ಲಿ ಅತ್ಯಾಸಕ್ತರಾಗಿದ್ದರು.      

          ಶಕುಂತಲಾ ದೇವಿಯವರ ತಂದೆ ಪುರೋಹಿತರಾಗಿದ್ದರು. ಅವರ ಹಿಂದಿನ ತಲೆಮಾರು ಸಹ ಪುರೋಹಿತ ವೃತ್ತಿಯನ್ನೆ ಮಾಡಿಕೊಂಡು ಬರುತಿತ್ತು. ಆದರೆ ಶಕುಂತಲಾ ದೇವಿಯವರ ತಂದೆಗೆ ಪುರೋಹಿತ ವೃತ್ತಿಯಲ್ಲಿ ಆಸಕ್ತಿ ಇರಲಿಲ್ಲ. ಹಾಗಾಗಿ ಅವರು ಸರ್ಕಸ್‌ ಕಂಪನಿಯೊಂದಕ್ಕೆ ಸೇರಿಕೊಳ್ಳುತ್ತಾರೆ. ಶಕುಂತಲಾ ದೇವಿಯವರನ್ನು ಆ ಸರ್ಕಸ್‌ ಕಂಪನಿಗೆ ಕರೆದುಕೊಂಡು ಹೋಗಿ ಇಸ್ಪಿಟ್‌ ಕಾರ್ಡಿನಲ್ಲಿ ಮಾಡುವಂತಹ ಕೈ ಚಳಕದ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದರು. ಕಾಲ ಕಳೆದ ಹಾಗೆ ಶಕುಂತಲಾ ದೇವಿಯವರು ಇಸ್ಪಿಟ್ ನಲ್ಲಿ ಪ್ರಾವಿಣ್ಯತೆಯನ್ನು ಸಾಧಿಸಲು ಆರಭಿಸಿದರು. ಇದನ್ನು ಗಮನಿಸಿದಂತಹ ಶಕುಂತಲಾ ದೇವಿಯವರ ತಂದೆ ಹೆಚ್ಚು ಸಮಯ ಮಗಳ ಜೊತೆಗೆ ಇರಲು ಪ್ರಾರಂಭಿಸಿದರು. ಪ್ರತಿದಿನ ಅವರಿಗೆ ಗಣಿತದ ಅಭ್ಯಾಸ ಮಾಡಿಸಿತ್ತಿದ್ದರು. ಶಕುಂತಲಾ ದೇವಿಯವರಿಗೆ ಐದು ವರ್ಷ ತುಂಬುವ ವೇಳೆಗೆ ಅಂಕೆಗಳ ಜೊತೆಗೆ ಆಟವಾಡುವ ಮಗಳ ಸಾಮರ್ಥ್ಯವನ್ನು ಅರಿತ ತಂದೆ ಸರ್ಕಸ್‌ ಕಂಪನಿಯನ್ನು ತೊರೆದು ಮಗಳ ಗಣಿತದ ಪ್ರದರ್ಶನದ ಮೇಳ ಏರ್ಪಡಿಸಲು ಆರಂಭಿಸಿದರು.

         ಹೀಗೆ ಶಕುಂತಲಾ ದೇವಿಯವರು ಅಂಕೆ ಸಂಖ್ಯೆಗಳ ಜೊತೆ ಆಟ ಆಡುವುದನ್ನು ಸುಲಭ ಮಾಡಿಕೊಳ್ಳುತ್ತಾರೆ. ತಮ್ಮ ಆರನೇ ವಯಸ್ಸಿನಲ್ಲಿ  ಮೈಸೂರು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಒಂದು ಚಿಕ್ಕ ಪ್ರದರ್ಶನ ನೀಡಿದರು. ಗುಣಾಕಾರ, ಭಾಗಾಕಾರ, ವರ್ಗಮೂಲ ಘನಮೂಲ ಮೊದಲಾದ ಯಾವುದೇ ಗಣಿತದ ಸಮಸ್ಯೆಗಳನ್ನು ಅತ್ಯಂತ ಸರಳವಾಗಿ ಬಿಡಿಸುತ್ತಿದಿದ್ದು ಅವರ ವಿಶೇಷವಾಗಿತ್ತು. ಹಾಗಂತ ಅವರು ಯಾವುದೇ ಶಾಲೆಗೆ ಹೋದವರಲ್ಲ. ಪದವಿಗಳನ್ನು ಪಡೆದುಕೊಂಡವರಲ್ಲ. ಆದರೆ ಪದವಿಗಳನ್ನು ಗಳಿಸಿದ ಪಂಡಿತರು ಶಕುಂತಲಾ ಅವರ ಮುಂದೆ ತಮ್ಮ ಸೋಲನ್ನು ಒಪ್ಪಿಕೊಳ್ಳುತ್ತಿದ್ದರು.

             ಇಷ್ಟು ಚಿಕ್ಕವಯಸ್ಸಿನ ಬಾಲಕಿಯ ಪಾಂಡಿತ್ಯವನ್ನ ಕಂಡ ಜನ ಬೆರಗಾಗುತ್ತಿದ್ದರು. ಹೀಗೆ ಬೆಳೆಯುತ್ತ ಹೋದ ಬಾಲಕಿ ಗಣಿತ ಶಾಸ್ತ್ರದಲ್ಲಿ ಕ್ಷಮತೆ ಮುಗಿಲೆತ್ತರಕ್ಕೆ ಏರಿತು. ಶಕುಂತಲಾ ಅವರು ತಮ್ಮ 15 ನೇ ವಯಸ್ಸಿನಲ್ಲಿ ಲಂಡನ್‌ ನಗರದಲ್ಲಿ ಒಂದು ಕಾರ್ಯಕ್ರಮವನ್ನು ನೀಡಿ ಅಲ್ಲಿನ ಜನರಿಂದ ಸೈ ಎನಿಸಿಕೊಂಡರು. ಈ ಪ್ರದರ್ಶನ ಅವರ ಜೀವನದಲ್ಲಿ ಅತಿ ಮಹತ್ವದ್ದಾಗಿತ್ತು. ಇದರಿಂದ ಅವರು ವಿಶ್ವವಿಖ್ಯಾತರಾದರು.

          1977 ರಲ್ಲಿ ವಿಶ್ವದ ದೊಡ್ಡ ಪ್ರತಿಷ್ಟಿತ ಗಣಿತಜ್ಞರ ಸಮ್ಮಖದಲ್ಲಿ ಶಕುಂತಲಾ ದೇವಿಯವರು ಒಂದು ಪ್ರದರ್ಶನ ನೀಡಿದಾಗ ಒಂದು ಐತಹಾಸಿಕ ಪ್ರದರ್ಶನವಾಗಿ ಅವರಿಗೆ ಬಹಳ ಹೆಸರು ಮತ್ತು ಮನ್ನಣೆಯನ್ನು ತಂದುಕೊಟ್ಟಿತು. 201 ಸಂಖ್ಯೆಯ ಅಂಕೆಯೊಂದರ 23ನೇ ವರ್ಗ ಮೂಲವನ್ನು ಚಿಟಿಕೆ ಹೊಡೆಯುವುದರಲ್ಲಿ ಕಂಡು ಹಿಡಿದು  ಕಪ್ಪು ಹಲಗೆಯ ಮೇಲೆ ಬರೆದರು. ಅವರು ತೆಗೆದುಕೊಂಡ ಸಮಯ ಕೇವಲ 50 ಸೆಕೆಂಡ್‌ ಆ ಸಮಯದಲ್ಲಿ ಬಳಕೆಗೆ ಇದ್ದ ಪ್ರಮುಖ ಕಂಪ್ಯೂಟರ್‌ ಇದೇ ಕೆಲಸಕ್ಕೆ 62 ಸೆಕೆಂಡ್‌ ಕಾಲ ತೆಗೆದುಕೊಂಡಿತ್ತು.

           ಕಂಪ್ಯೂಟರ್‌ಗಿಂತ ವೇಗವಾಗಿ ಲೆಕ್ಕ ಮಾಡಬಲ್ಲ ವ್ಯಕ್ತಿ ಎಂಬ ಹೆಗ್ಗಳಿಕೆ ಅವರಿಗೆ ಒದಗಿ ಬಂತು. ಅಂದಿನಿಂದ ಅವರನ್ನು ಮಾನವ ಕಂಪ್ಯೂಟರ್‌ ಎಂದೇ ಹೆಸರಿಸಲಾಯಿತು. ಗಿನ್ನಿಸ್‌ ಬುಕ್‌ಆಫ್‌ ರೆಕಾರ್ಡನಲ್ಲಿ ಅವರ ಹೆಸರನ್ನು ಬರೆಯಲಾಯಿತು. ವಿಶ್ವದ ಹಲವಾರು ವಿಶ್ವವಿದ್ಯಾಲಯಗಳು ಇವರನ್ನು ಆಹ್ವಾನಿಸಲಾಗುತ್ತಿತ್ತು. ಶಕುಂತಲಾ ದೇವಿಯವರು ಖಗೋಳಶಾಸ್ತ್ರ, ಜೋತಿಷ್ಯಶಾಸ್ತ್ರ, ಗಣಿತ ಇವುಗಳಲ್ಲಿ ಪಾಂಡಿತ್ಯವನ್ನು ಸಾಧಿಸಿದ್ದರು. ಹಾಗೇ ವಿದ್ಯಾ ಪೌಂಡೇಶನ್‌ ಅನ್ನು ಸ್ಥಾಪಿಸಿದರು. ಒಂದು ಬೇಸರದ ಸಂಗತಿ ಎಂದರೆ ಎಲ್ಲೋ ಒಂದು ಕಡೆ ಇವರ ಈ ಅಗಾಧ ಪ್ರತಿಭೆಯನ್ನು ನಮ್ಮ ದೇಶ ಸರಿಯಾಗಿ ಬಳಸಿಕೊಳ್ಳಲಿಲ್ಲವೇನೋ ಎಂದೆನಿಸುತ್ತದೆ. ಇವರಿಗಿದ್ದ ಆ ಪ್ರತಿಭೆಯನ್ನು ಗಣಿತ ಕ್ಷೇತ್ರ ಇನ್ನು ಸರಿಯಾಗಿ ಬಳಸಿಕೊಳ್ಳಬಹುದಿತ್ತು. ವೇಗದಲ್ಲಿ ಗಣಿತ ಸಮಸ್ಯೆಗಳನ್ನು ನಿರ್ಮಿಸಿ ಮಾನವ ಕಂಪ್ಯೂಟರ್‌ ಎಂದೇ ಪ್ರಸಿದ್ದಿಯಾಗಿದ್ದ ಶಕುಂತಲಾ ದೇವಿಯವರು ಏಪ್ರಿಲ್‌ 21 2013 ರಲ್ಲಿ ಮರಣವನ್ನು ಹೊಂದಿದರು.   

Show More

Leave a Reply

Your email address will not be published. Required fields are marked *

Related Articles

Back to top button