Alma Corner

ಸುವರ್ಣ ಸುದ್ದಿ ವಾಹಿನಿಯಲ್ಲಿ ಕಳೆದ ಒಂದು ದಿನ..!

ನಿನ್ನೆ ಕನ್ನಡದ ಪ್ರಮುಖ ಮಾಧ್ಯಮಗಳಲ್ಲಿ ಒಂದಾದಂತಹ ಸುವರ್ಣ ಸುದ್ದಿ ವಾಹಿನಿಗೆ ಭೇಟಿ ನೀಡಿದೆವು. ಭೇಟಿ ನೀಡುವ ಹಿಂದಿನ ದಿನದಿಂದಲೆ ಮನಸ್ಸಿನಲ್ಲಿ ಏನೋ ಒಂದು ತರಹದ ಖುಷಿ . ನಾಳೆ ಕನ್ನಡದ ಪ್ರಖ್ಯಾತ ಸುದ್ದಿ ವಾಹಿನಿಗೆ ಭೇಟಿ ನೀಡುತ್ತಿದ್ದೇನೆ , ಪತ್ರಿಕೋದ್ಯಮದ ಕೆಲವು ದಿಗ್ಗಜರುಗಳನ್ನು ಭೇಟಿಯಾಗಲಿದ್ದೇನೆ, ಹಾಗೆ ಪತ್ರಿಕೋದ್ಯಮದ ಹಲವು ಆಯಾಮಗಳನ್ನು ತಿಳಿದುಕೊಳ್ಳಲಿದ್ದೇನೆ ಎನ್ನುವ ಕುತೂಹಲ. ಬೆಳಗ್ಗೆ ಎಲ್ಲಾ ತಯಾರಿಗಳನ್ನು ಮಾಡಿಕೊಂಡು ಜೆಪಿ ನಗರ ಮೆಟ್ರೋದಿಂದ ಕಬ್ಬನ್‌ಪಾರ್ಕ ಮೆಟ್ರೋ ಕಡೆಗೆ ಹೊರಟೆ. ಮೇಟ್ರೋದಲ್ಲಿ ಹೋಗುತ್ತಿರುವಾಗಲೆ ಇವತ್ತು ಯಾರನ್ನೆಲ್ಲಾ ಭೇಟಿ ಮಾಡಬಹುದು, ಯಾರ್ಯಾರು ಸಿಗಬಹುದು, ಯಾವ ರೀತಿಯ ಪ್ರಶ್ನೆಗಳನ್ನ ಕೇಳಬಹುದು, ಹೀಗೆ ಹತ್ತು ಹಲವಾರು ಯೋಚನೆಗಳು ನನ್ನ ತಲೆಯಲ್ಲಿ ಮೇಟ್ರೋದ ವೇಗದಲ್ಲಿಯೇ ಚಲಿಸುತ್ತಿದ್ದವು. ಕಬ್ಬನ್‌ಪಾರ್ಕ ಮೆಟ್ರೋಯಿಂದ ಆಟೋದಲ್ಲಿ ಸುವರ್ಣಾ ಸುದ್ದಿ ವಾಹಿನಿಗೆ ಬಂದು ಇಳಿದೆ.
ಅಲ್ಲಿಂದ ಶುರುವಾದದ್ದು ನಮ್ಮ ಮೀಡಿಯಾ ವಿಸಿಟ್‌. ಇದು ನಮ್ಮ ಕಲಿಕೆಯ ಒಂದು ಭಾಗವಾಗಿತ್ತು .ಮೊದಲಿಗೆ ನಾವು ಭೇಟಿ ನೀಡಿದ್ದು ಇನಪುಟ್‌ ಮತ್ತು ಔಟ್‌ಪುಟ್‌ ವಿಭಾಗಕ್ಕೆ ಅಲ್ಲಿನ ವಿವಿಧ ರೀತಿಯ ಕಾರ್ಯವೈಖರಿಗಳಾದ ಸುದ್ದಿಯನ್ನು ಪಡೆಯುವುದು, ಪ್ರಮುಖವಾದಂತಹ ಸುದ್ದಿಗಳನ್ನು ಸಂಗ್ರಹಿಸುವುದು, ಸಂಗ್ರಹಿಸಿದ ಸುದ್ದಿಗಳನ್ನು ಪರದೆ ಮೇಲೆ ತೋರಿಸುವಂತದ್ದು ಹೀಗೆ ಹಲವಾರು ಆಯಾಮಗಳ ಕೆಲಸಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಹಾಗೆ ಸುದ್ದಿಗಳನ್ನು ಎಡಿಟ್‌ ಮಾಡುವಂತಹ, ಎಡಿಟ್‌ ಮಾಡುವಾಗ ಗಮನಿಸಬೆಕಾದಂತಹ ಅಂಶಗಳ ಬಗ್ಗೆ ತಿಳಿಸಿಕೊಟ್ಟರು, ಹಾಗೆ ಒಂದು ಪರದೆಯಲ್ಲಿ (screen) ಕಾಣಿಸುವಂತಹ ಗ್ರಾಫಿಕ್ಸ್‌ ಅದಕ್ಕೆ ಬೇಕಾಗುವಂಹ ಕೌಶಲ್ಯಗಳು ಮತ್ತು ಆನ್‌ಲೈನ್‌ ಮತ್ತು ಆಫ್‌ಲೈನ್‌ನಲ್ಲಿ ಮಾಡಬಹುದಾದ ಗ್ರಾಫಿಕ್ಸ ಡಿಸೈನ್‌ಗಳ ಸಾಫ್ಟೇರ್‌ ಬಗ್ಗೆ ತಾಂತ್ರಿಕ ವಿಭಾಗದಲ್ಲಿರುವವರು ತಿಳಿಸಿಕೊಟ್ಟರು.


ಇದೇ ಸಮಯದಲ್ಲಿ ಬೆಳಗಾವಿ ಅಧಿವೇಶನದ ಬಗ್ಗೆ ಲೈವ್‌ ಸುದ್ದಿ ನೀಡುತಿದ್ದಂತಹ ಆಂಕರ್‌ ಶ್ವೇತಾ ಅವರು ನಮ್ಮ ಕಣ್ಣಿಗೆ ಬಿದ್ದರು. ಅವರನ್ನು ನೋಡುವ ಕುತೂಹಲದಿಂದ ಸುದ್ದಿ ಕೋಣೆಗೆ ಲಗ್ಗೆ ಇಟ್ಟೆವು. ಸ್ವಲ್ಪ ಸಮಯ ಮೂಕವಿಸ್ಮಿತರಾಗಿ ಅವರನ್ನೇ ನೋಡುತ್ತಾ ನಿತ್ತುಕೊಂಡೆವು. ಕಣ್ಣ ಮುಂದೆ ಕಾಣಿಸುತ್ತಿದ್ದ ನಿರೂಪಣೆಗೂ ಟಿ.ವಿ ಯಲ್ಲಿ ಕಾಣಿಸುತ್ತಿದ್ದ ನಿರೂಪಣೆಗೂ ಬಹಳ ವ್ಯತ್ಯಾಸಗಳಿದ್ದವು. ಅವರು ಮಾತನಾಡುತ್ತಿದ್ದ ರೀತಿ, ಅವರ ಏರು ಧ್ವನಿ, ಕಿವಿಯಲ್ಲೇ ಸುದ್ದಿಯನ್ನು ತೆಗೆದುಕೊಂಡು ಟಿ.ವಿ ಯಲ್ಲಿ ಪ್ರಸ್ತುತಪಡಿಸುತ್ತಿದ್ದ ರೀತಿ ಅಬ್ಬಾ! ಟಿ.ವಿ ಯಲ್ಲಿ ಒಂದು ಸುದ್ದಿ ಬರುವುದರ ಹಿಂದೆ ಎಷ್ಟೇಲ್ಲಾ ಶ್ರಮ ವಹಿಸುತ್ತಾರೆಂದು ನನಗೆ ತಿಳಿದಿದ್ದೆ ಅಂದು. ಅವರು ಸುದ್ದಿಯನ್ನು ನೀಡುತಿದ್ದುದನ್ನು ನಿಲ್ಲಿಸಿ ನಮ್ಮ ಬಳಿಗೆ ಬಂದು ಅವರ ಅನುಭವದ ಕೆಲವು ತುಣುಕುಗಳನ್ನು ನಮ್ಮೊಟ್ಟಿಗೆ ಹಂಚಿಕೊಂಡರು. ಮುಂದೆ ಒಂದು ವಾಹಿನಿಯ ಮುಖ್ಯ ಅಂಗವಾದಂತಹ ಕಾರ್ಯಕ್ರಮ ನಿಯಂತ್ರಣ ಕೊಠಡಿ(PCR)ಗೆ ಹೋದೆವು PCRನಲ್ಲಿ ಒಂದು ಪ್ರೋಗ್ರಾಂನಲ್ಲಿ ಸ್ಕ್ರಿನ್‌ ಮೇಲೆ ಯಾವ ರೀತಿಯಾದ ಸುದ್ದಿಗಳು ಬರಬೇಕು, ಎಷ್ಟು ವಿಂಡೋಗಳನ್ನು ಹೊಂದಿರಬೇಕು, ಸ್ಲಗ್‌ಗಳು ಯಾವುದಿರಬೇಕು, ಹೇಗಿರಬೇಕು, ಸುದ್ದಿಗಳ ಬದಲಾವಣೆ, ಹಾಗೇ ಆಡಿಯೊ ಏರಿಳಿತ, ಟೆಲಿ ಪ್ರೋಂಪ್‌ಟರ್‌ ಮೇಲೆ ಬರೆಯುವಂತಹ ಸುದ್ದಿಗೆ ಸಂಬಂಧಪಟ್ಟಂತಹ ವಾಕ್ಯಗಳ ರಚನೆ ಹೀಗೆ ಹಲವಾರು ಕೆಲಸಗಳನ್ನು ನಿಭಾಯಿಸುವುದು ಈ PCR. ಇದನ್ನು ಒಂದು ವಾಹಿನಿಯ ಹೃದಯ ಭಾಗ ಎಂದರು ತಪ್ಪಾಗಲಿಕ್ಕಿಲ್ಲ.
PCR ನಷ್ಟೆ ಮತ್ತೊಂದು ಮುಖ್ಯ ಅಂಗ ಎಂದರೆ MCR ಈ ವಿಭಾಗವನ್ನು ನಿರ್ವಹಿಸಲು 2 ರಿಂದ 3 ಸಿಬ್ಬಂದಿಗಳು ಇರುತ್ತಾರೆ. ಈ ವಿಭಾಗದಲ್ಲಿ 24/7 ಕಾಲ ನಡೆಯುತ್ತಲೇ ಇರುತ್ತದೆ. ಕೊನೆಯದಾಗಿ ಟಿ.ವಿ ಮೇಲೆ ಬರುವಂತಹ ಸುದ್ದಿಗಳನ್ನು ಹಾಗೂ ಜಾಹಿರಾತುಗಳನ್ನು ಒಟ್ಟಾರೆಯಾಗಿ ನಿರ್ವಹಿಸಿ, ನಿಯಂತ್ರಣ ಮಾಡುವಂತಹ ಕೆಲಸ ಇವರ ಮೆಲೆಯೇ ಇರುತ್ತದೆ. ಇಲ್ಲಿ ಪ್ರತಿಯೊಂದು ವಿಭಾಗಗಳು ಪರಸ್ಪರ ಲಿಂಕ್‌ನ್ನು ಹೊಂದಿದ್ದು ಸುದ್ದಿಯನ್ನು ತೆಗೆದುಕೊಂಡು ,ಆಯ್ಕೆಮಾಡಿ, ಸುದ್ದಿಯನ್ನು ಪರಿಷ್ಕರಿಸಿ, ಆ ಸುದ್ದಿ ಟಿ.ವಿ ಯ ಮೇಲೆ ಬರುವವರೆಗೂ ಪ್ರತಿಯೊಂದು ವಿಭಾಗಗಳು ಆ ಸುದ್ದಿಯ ಬಗ್ಗೆ ಮಾತುಕತೆಗಳನ್ನು ನಡೆಸಿರುತ್ತವೆ. ಇಲ್ಲಿ ಪ್ರತಿಯೊಂದು ವಿಭಾಗಗಳು ಅಂತರಸಂಬಂಧವನ್ನು ಹೊಂದಿಕೊಂಡೆ ಕೆಲಸವನ್ನು ನಿರ್ವಹಿಸುತ್ತವೆ. ಯಾವುದೆ ಒಂದು ವಿಭಾಗದಲ್ಲಿ ಅಡಚಣೆಯಾದರು ಅದು ಸುದ್ದಿ ಪ್ರಸಾರದ ಮೇಲೆ ಪರಿಣಾಮ ಬೀರುತ್ತದೆ.

ನಂತರ ಸುವರ್ಣ ವಾಹಿನಿಯ ಮುಖ್ಯ ಪತ್ರಕರ್ತರಾದ ಹಾಗೂ ಚಿಂತಕರಾದ ಅಜಿತ್‌ ಅನುಮಕ್ಕನವರ್‌ನ್ನು ಭೇಟಿ ಮಾಡಿದೆವು. ಸಾಮಾನ್ಯವಾಗಿ ಅಜಿತ್‌ಅವರನ್ನ ನಾನು ಹೆಚ್ಚಾಗಿ ನೋಡಿದ್ದು ಟಿ.ವಿ ಯಲ್ಲಿ. ಯಾವತ್ತು ಅವರನ್ನು ನೇರವಾಗಿ ನೋಡಿಯೆ ಇರಲಿಲ್ಲ. ಅವರ ಜೊತೆಗಿನ ಆ ಸಂವಾದ ಹಾಗೆ ಅವರೊಟ್ಟಿಗಿದ್ದ ಆ ಕ್ಷಣ ನಿಜಕ್ಕೂ ನನ್ನ ಪಾಲಿಗೆ ವಿಶೇಷವೇ ಸರಿ. ಕೆಲವರ ಜೊತೆಗಿನ ಭೇಟಿ ಖುಷಿಯನ್ನು ನೀಡುತ್ತದೆ. ಆದರೆ ಇವರ ಜೊತೆಗಿನ ಭೇಟಿ ಖುಷಿಯ ಜೊತೆಗೆ ಜ್ಷಾನವನ್ನು ನೀಡಿತು.
ಇವರೆಲ್ಲರೊಟ್ಟಿಗಿನ ಈ ಸಂವಾದದಿಂದ, ತಲೆ ಪೂರ್ತಿ ತುಂಬಿತ್ತು. ಆದರೆ ಹೊಟ್ಟೆ ಖಾಲಿಯಾಗಿತ್ತು. ಚರ್ಚೆ ಮುಗಿಯುವ ಹೊತ್ತಿಗೆ ಸುಮಾರು ಮದ್ಯಾಹ್ನ 2:30 ಆಗಿತ್ತು ಅಲ್ಲೆ ಊಟವನ್ನು ಮುಗಿಸಿದೆವು. ನಂತರ ನಮ್ಮ ಜೊತೆಗೆ ಮಾತನಾಡಿದ್ದು ಸುವರ್ಣಾ ನ್ಯೂಸ್‌ನ ಸುದ್ದಿಮನೆ ಲೀಡರ್‌ ಆದಂತಹ ಶೋಭಾ ಮಳವಳ್ಳಿ ಅವರು. ಒಬ್ಬ ಪತ್ರಿಕೋದ್ಯಮಿಗೆ ಬೇಕಾಗುವಂತಹ ಬರವಣಿಗೆ, ಕೆಲಸಲ್ಲಿನ ವೇಗ, ಪ್ರಸ್ತುತ ವಿಷಯಗಳ ಬಗ್ಗೆ ಬೇಕಾಗುವಂತಹ ಜ್ಷಾನ ಇವೆಲ್ಲವುಗಳ ಬಗ್ಗೆ ಸುವಿಸ್ತಾರವಾಗಿ ಮಾತನಾಡಿದರು.
ಇವರೆಲ್ಲರ ಜೊತೆಗಿನ ಈ ಸಂವಾದ ನನಗೆ ಕಲಿಸಿದ್ದು ಮಾಧ್ಯಮ ಎನ್ನುವಂತದ್ದು ಸಮುದ್ರ. ಇಲ್ಲಿ ಪ್ರತಿದಿನ ನಮ್ಮನ್ನ ನಾವು ಹೊಸತನಕ್ಕೆ ಮೈಯೊಡ್ಡಿಕೊಳ್ಳುತ್ತಿರಬೇಕು. ಅಲ್ಲಿಯ ಪ್ರತಿಕ್ಷಣದ ವೇಗ, ಆ ಧಾವಂತ ಸುಲಭಕ್ಕೆ ಬರುವಂತದ್ದಲ್ಲ. ನಮ್ಮಿಂದ ಹೆಚ್ಚು ಜ್ಷಾನವನ್ನು ಕೇಳುವಂತಹ ಕ್ಷೇತ್ರ ಅದು.ನಾವು ಒಬ್ಬ ವೀಕ್ಷಕರಾಗಿ ಮಾಧ್ಯಮವನ್ನು ನೋಡುವುದಕ್ಕೂ, ಪತ್ರಿಕೋದ್ಯಮಿಯಾಗಿ ಮಾಧ್ಯಮವನ್ನು ನೋಡುವುದಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಇದೆಲ್ಲದನ್ನ ನೋಡಿ ನನಗೆ ಅನಿಸಿದ್ದು ಈ ಕ್ಷೇತ್ರದಲ್ಲಿ ನಾನು ಕಲಿತಿದ್ದು ಅಂಗೈನಷ್ಟು ಕಲಿಯಬೇಕಾಗಿರುವುದು ಸಾಗರದಷ್ಟಿದೆ ಎಂದು!!

ಮೇಘಾ ಜಗದೀಶ್‌
ಆಲ್ಮಾ ಮೀಡಿಯಾ ಸ್ಕೂಲ್‌ ವಿದ್ಯಾರ್ಥಿನಿ

Show More

Leave a Reply

Your email address will not be published. Required fields are marked *

Related Articles

Back to top button