ಸುವರ್ಣ ನ್ಯೂಸ್ ಗರಡಿಯೊಳಗೊಂದು ದಿನ..!!
ಇಷ್ಟು ದಿನಗಳವರೆಗೆ, ನಾನು ದೃಶ್ಯ ಮಾಧ್ಯಮದಲ್ಲಿ ಬರುತ್ತಿದ್ದ ಸುದ್ದಿಗಳನ್ನು ಕೇವಲ ನೋಡುತ್ತಿದ್ದೆನೇ ಹೊರತು, ಒಂದು ಮಾಧ್ಯಮ ಸಂಸ್ಥೆ ಹೇಗೆ ಕೆಲಸ ನಿರ್ವಹಿಸುತ್ತದೆ ಎನ್ನುವ ಪ್ರತ್ಯಕ್ಷ ಅನುಭವ ನನಗೆ ಇರಲಿಲ್ಲ. ಆದರೆ ಇಂದು, ದೃಶ್ಯ ಮಾಧ್ಯಮವೊಂದು ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನು ಪ್ರತ್ಯಕ್ಷವಾಗಿ ನೋಡುವ ಸುವರ್ಣಾವಕಾಶವೊಂದು ಒದಗಿಬಂತು!
ಇಂದು ನಾವು ಬೆಂಗಳೂರಿನಲ್ಲಿರುವ ʼಸುವರ್ಣ ನ್ಯೂಸ್ʼ ಸುದ್ದಿ ವಾಹಿನಿಯ ಕೇಂದ್ರ ಕಛೇರಿಗೆ ಭೇಟಿ ನೀಡಿದ್ದೆವು. ಮೊದಲಿಗೆ ಅಲ್ಲಿ ನಾನು ಗಮನಿಸಿದ್ದು, ಪ್ರತಿಯೊಂದು ವಿಭಾಗವೂ ಎಷ್ಟು ಅಚ್ಚುಕಟ್ಟಾಗಿದೆ ಅನ್ನೋದನ್ನ. ಅಲ್ಲಿಗೆ ಭೇಟಿ ನೀಡಿದ ನಮ್ಮನ್ನು ಮೊದಲಿಗೆ ಕರೆದೊಯ್ದಿದ್ದು, ಗ್ರಾಫಿಕ್ಸ್ ವಿಭಾಗಕ್ಕೆ. ಅಲ್ಲಿ ನಮಗೆ ಗ್ರಾಫಿಕ್ಸ್ ಎಂದರೇನು, ಒಂದು ಸುದ್ದಿ ವಾಹಿನಿಗೆ ಗ್ರಾಫಿಕ್ಸ್ ಎನ್ನೋದು ಎಷ್ಟು ಮುಖ್ಯ, ಅಲ್ಲಿ ಬೇರೆ ಬೇರೆ ರೀತಿಯ ಗ್ರಾಫಿಕ್ಸ್ʼಗಳನ್ನು ಸೃಷ್ಟಿಸಲು ಯಾವ ಯಾವ ತಂತ್ರಾಂಶಗಳನ್ನು ಬಳಸುತ್ತಾರೆ, ಅವುಗಳಲ್ಲಿ ಕೆಲವು ತಂತ್ರಾಶಗಳನ್ನು ನಾವು ಮಾಧ್ಯಮ ಕಛೇರಿಯಲ್ಲಿ ಮಾತ್ರವೇ ಕಲಿಯಬಹುದು ಎಂಬುದನ್ನು ಸವಿಸ್ತಾರವಾಗಿ ತಿಳಿಸಲಾಯಿತು. ಈಗಿನ ಆಧುನಿಕ ಯುಗದಲ್ಲಿ ಗ್ರಾಫಿಕ್ಸ್ ಅನ್ನೋದು ಪ್ರತಿಯೊಂದು ಕ್ಷೇತ್ರದಲ್ಲೂ ಎಷ್ಟು ಮುಖ್ಯ, ನಾವು ಗ್ರಾಫಿಕ್ಸ್ ತಂತ್ರಜ್ನಾನವನ್ನು ಕಲಿತರೆ ಕೇವಲ ಮಾಧ್ಯಮ ಕ್ಷೇತ್ರದಲ್ಲಿ ಮಾತ್ರವಲ್ಲದೇ, ಐಟಿ ಸೇರಿದಂತೆ ಇನ್ನಿತರ ಕ್ಷೇತ್ರದಲ್ಲಿಯೂ ಕೆಲಸ ಮಾಡಬಹುದು ಅನ್ನೋದನ್ನ ತಿಳಿಸಿಕೊಡಲಾಯಿತು.
ನಂತರ ನಮಗೆ ಒಂದು ಮಾಧ್ಯಮ ಸಂಸ್ಥೆ ಹೇಗೆ ಕಾರ್ಯ ನಿರ್ವಹಿಸುತ್ತದೆ, ಸುದ್ದಿಗಳನ್ನು ಯಾವ ರೀತಿ ಸಂಗ್ರಹಿಸುತ್ತಾರೆ, ಆ ಸುದ್ದಿಗಳಲ್ಲಿ ಯಾವ್ಯಾವ ಸುದ್ದಿಗಳನ್ನು ಯಾವ ರೀತಿ ಪ್ರಸಾರ ಮಾಡಬೇಕು, ಆ ಸುದ್ದಿಗಳನ್ನು ನಾವು ಮಾಧ್ಯಮಕ್ಕೆ ಹೊಂದಾಣಿಕೆಯಾಗುವಂತೆ ಬರೆಯುವುದು ಹೇಗೆ ಎನ್ನುವುದನ್ನು ತಿಳಿಸಲಾಯಿತು. ಸುದ್ದಿಗಳನ್ನು ಸರಿಯಾದ ರೀತಿಯಲ್ಲಿ ಬರೆಯುವುದು ಮಾತ್ರವಲ್ಲ, ಆ ಸುದ್ದಿಗಳಿಗೆ ವೇಗವಾಗಿ ಮತ್ತು ಸಮಯಕ್ಕೆ ಸರಿಯಾಗಿ ಒಂದು ರೂಪ ಕೊಡುವುದೂ ಅಷ್ಟೇ ಮುಖ್ಯ ಅನ್ನೋದನ್ನ ತೀಳಿಸಲಾಯಿತು.
ಆಮೇಲೆ ನಮಗೆ, ಮಾಧ್ಯಮದಲ್ಲಿ ಪ್ರಸಾರವಾದ ಸುದ್ದಿಗಳನ್ನು ಡಿಜಿಟಲ್ ರೂಪಕ್ಕೆ ಪರಿವರ್ತಿಸುವುದು ಹೇಗೆಂದು ತೋರಿಸಲಾಯಿತು. ಮಾಧ್ಯಮದಲ್ಲಿ ಪ್ರಸಾರವಾದ ಸುದ್ದಿಗಳನ್ನು ಆ ವಾಹಿನಿಯ ವೆಬ್ʼಸೈಟ್ʼಗೆ ಅಪ್ಲೋಡ್ ಮಾಡೋದು ಹೇಗೆ, ಆ ವೆಬ್‌ಸೈಟ್ ಹೇಗೆ ಕಾರ್ಯನಿರ್ವಹಿಸುತ್ತದೆ, ಅದನ್ನು ನಾವು ಯಾವ ರೀತಿ ನಿಭಾಯಿಸಬೇಕು ಅನ್ನೋದನ್ನು ವಿವರಿಸಲಾಯಿತು. ಅಷ್ಟೇ ಅಲ್ಲ, ವಾಹಿನಿಯ ವೆಬ್‌ಸೈಟ್ʼನ್ನು ಹೇಗೆ ನಿಭಾಯಿಸಬೇಕು, ಓದುಗರಿಗೆ ಯಾವ ರೀತಿಯ ಸುದ್ದಿ ಕೊಡಬೇಕು, ಓದುಗರು ಯಾವ ರೀತಿಯ ಸುದ್ದಿಗಳನ್ನು ಹೆಚ್ಚು ಇಷ್ಟ ಪಡುತ್ತಾರೆ ಎಂಬುದನ್ನು ಪತ್ತೆ ಮಾಡೋದು ಹೇಗೆ ಎಂಬುದರ ಬಗ್ಗೆ ವಿವರಿಸಲಾಯಿತು.
ತದನಂತರ ನಮಗೆ ನ್ಯೂಸ್‌ರೂಮಿನಲ್ಲಿ, ಲೈವ್ʼನಲ್ಲಿ ಸುದ್ದಿಗಳನ್ನು ಓದುತ್ತಿದ್ದ ನಿರೂಪಕಿಯ ನಿರೂಪಣೆಯನ್ನು ನೋಡುವ ಅವಕಾಶ ದೊರೆಯಿತು. ಆ ʼಗ್ರೀನ್‌ಸ್ಕ್ರೀನ್ʼ ಸ್ಟುಡಿಯೋದ ಒಳಗೆ ಯಾವ್ಯಾವ ರೀತಿಯ ಲೈಟ್ʼಗಳನ್ನು ಅಳವಡಿಸಲಾಗಿದೆ, ನಿರೂಪಕಿ ಹೇಗೆ ಸುದ್ದಿಗಳನ್ನು ಓದುತ್ತಾರೆ, ಅವನ್ನೆಲ್ಲಾ ಛಾಯಾಗ್ರಾಹಕ ಹೇಗೆ ಚಿತ್ರೀಕರಿಸುತ್ತಾರೆ ಎನ್ನುವುದರ ಬಗ್ಗೆ ಮಾಹಿತಿ ಪಡೆದುಕೊಂಡೆವು. ನಂತರ, ಸುದ್ದಿ ನಿರೂಪಣೆಯ ಬಗ್ಗೆ ನಮಗೆ ವಿವರಿಸಿದ ನಿರೂಪಕಿ, ಒಂದು ವೇಳೆ ನಾವು ನಿರೂಪಕರಾಗಿ ಕೆಲಸ ಮಾಡಲು ಉತ್ಸುಕರಾಗಿದ್ದಲ್ಲಿ, ಅದಕ್ಕೆ ಯಾವ ರೀತಿಯ ತಯಾರಿ ಬೇಕು, ಯಾವ್ಯಾವ ಸುದ್ದಿಗಳನ್ನು ಹೇಗೆ ಓದಬೇಕು, ಒಬ್ಬ ನಿರೂಪಕನಿಗೆ ಕೇವಲ ಸುದ್ದಿ ಓದುವುದು ಮಾತ್ರವಲ್ಲದೇ, ಎಲ್ಲಾ ವಿಷಯಗಳ ಬಗ್ಗೆ ಜ್ನಾನ ಇರುವುದು ಎಷ್ಟು ಮುಖ್ಯ ಅನ್ನೋದನ್ನ ತಿಳಿಸಿದರು.
ಆನಂತರ ನಮಗೆ ಎಡಿಟಿಂಗ್ ವಿಭಾಗದ ಪರಿಚಯ ಮಾಡಿಕೊಡಲಾಯಿತು. ಸುದ್ದಿ ಪ್ರಸಾರದಲ್ಲಿ ಎಡಿಟಿಂಗ್ʼನ ಪಾತ್ರ ಎಷ್ಟು ಮುಖ್ಯ ಎನ್ನುವುದರ ಬಗ್ಗೆ ಹಾಗೂ ಎಡಿಟರ್ʼಗಳಿಗೆ ಸಿಗುವ ಅತೀ ಕಡಿಮೆ ಸಮಯದಲ್ಲೇ ಎಡಿಟಿಂಗ್ ಮಾಡಬೇಕಾದ ಸವಾಲುಗಳ ಬಗ್ಗೆ ವಿವರಿಸಲಾಯಿತು.
ಆಮೇಲೆ ವಾಹಿನಿಯ PCR ವಿಭಾಗಕ್ಕೆ ಭೇಟಿ ನೀಡಿದ ನಾವು, ಅಲ್ಲಿ Input ವಿಭಾಗದಿಂದ ಬರುವ ಸುದ್ದಿಗಳನ್ನು ಯಾವ ರೀತಿ ನಿರ್ವಹಿಸುತ್ತಾರೆ ಎಂಬುದರ ಬಗ್ಗೆ ತಿಳಿದುಕೊಂಡೆವು. ಅಲ್ಲಿ ಸುದ್ದಿಗಳನ್ನು ಹೇಗೆ ಅವುಗಳ ಪ್ರಾಮುಖ್ಯತೆಯನ್ನು ಪರಿಗಣಿಸಿ ಪ್ರಸಾರ ಮಾಡಲಾಗುತ್ತದೆ, ಅವು ತೆರೆಯ ಮೇಲೆ ಹೇಗೆ ಪ್ರಸಾರವಾಗಬೇಕು ಅನ್ನೋದನ್ನ ಯಾವ ರೀತಿ ನಿರ್ಧರಿಸುತ್ತಾರೆ ಅನ್ನೋದನ್ನು ತಿಳಿದುಕೊಂಡೆವು. ಅಲ್ಲಿಯೇ ಇದ್ದ ಆಡಿಯೋ ತಂತ್ರಜ್ನರ ಬಗೆಗೂ ವಿವರಿಸಲಾಯಿತು.
ನಂತರ ಹೊಸ ವರ್ಷದ ಸಂಭ್ರಮಾಚರಣೆಯ ಬಗ್ಗೆ ಚಿತ್ರೀಕರಿಸುತ್ತಿದ್ದ ಸ್ಟುಡಿಯೋ ಸೆಟ್ʼಗೆ ಭೇಟಿ ನೀಡಿದೆವು. ಅಲ್ಲಿ ನಮಗೆ, ಒಂದು ಸ್ಟುಡಿಯೋದ ಒಳಗೆ ಎಷ್ಟು ಕ್ಯಾಮೆರಾಗಳನ್ನು ಯಾವ್ಯಾವ ರೀತಿ ಬಳಸುತ್ತಾರೆ, ಅಲ್ಲಿ ಚಿತ್ರೀಕರಣಕ್ಕೆ ಅನುಕೂಲವಾಗುವಂತೆ, ಯಾವ್ಯಾವ ರೀತಿಯ ಲೈಟಿಂಗ್ʼನ ವ್ಯವಸ್ಥೆ ಮಾಡಿರುತ್ತಾರೆ ಎನ್ನುವುದರ ಬಗ್ಗೆ ಸವಿಸ್ತಾರವಾಗಿ ವಿವರಿಸಲಾಯಿತು.
ತದನಂತರ ನಾವು ವಾಹಿನಿಯ MCR (ಮಾಸ್ಟರ್ ಕಂಟ್ರೋಲ್ ರೂಮ್)ಗೆ ಭೇಟಿ ನೀಡಿದೆವು. ಅಲ್ಲಿ ಪ್ರತಿಯೊಂದು ಕಾರ್ಯಕ್ರಮವನ್ನು ಯಾವ ರೀತಿ ನಿರ್ವಹಿಸುತ್ತಾರೆ, ಕಾರ್ಯಕ್ರಮದ ನಡುವೆ ಬರುವ ಜಾಹೀರಾತುಗಳ ಪ್ರಸಾರ ಹೇಗೆ ನೇರವಾಗಿ ಅಲ್ಲಿಂದಲೇ ನಿರ್ವಣೆಯಾಗುತ್ತದೆ ಅನ್ನೋದರ ಬಗ್ಗೆ ತಿಳಿಸಿದರು.
ತದನಂತರ ನಮಗೆ ವಾಹಿನಿಯ ಮುಖ್ಯ ಸಂಪಾದಕರಾದ ಅಜಿತ್ ಹನುಮಕ್ಕನವರ್ʼರನ್ನು ಭೇಟಿಯಾಗುವ ಅವಕಾಶ ದೊರೆಯಿತು. ಮಾಧ್ಯಮ ಕ್ಷೇತ್ರದಲ್ಲಿ ಇರುವ ಅವಕಾಶಗಳು ಮತ್ತು ಸವಾಲುಗಳೇನು ಅನ್ನೋದರ ಬಗ್ಗೆ ಸಂಕ್ಷಿಪ್ತವಾಗಿ ಅವರು ನಮಗೆ ವಿವರಿಸಿದರು.
ಕೊನೆಯಲ್ಲಿ ನಾವು ವಾಹಿನಿಯ ʼಔಟ್‌ಪುಟ್ʼ ಮುಖ್ಯಸ್ಥರಾದ ಶೋಭಾರನ್ನು ಭೇಟಿಯಾದವು. ಅವರು ತಮ್ಮ ಮಾಧ್ಯಮ ಪಯಣದ ಬಗ್ಗೆ ಆರಂಭದಲ್ಲಿ ವಿವರಿಸಿದರು. ಆ ಮೇಲೆ ಮಾಧ್ಯಮ ಕ್ಷೇತ್ರದಲ್ಲಿರುವ ಸವಾಲುಗಳೇನು, ಈ ಕ್ಷೇತ್ರದ ವೇಗಕ್ಕೆ ತಕ್ಕಂತೆ ನಾವು ಹೇಗೆ ಹೊಂದಿಕೊಳ್ಳಬೇಕು, ಸಮಯ ಮತ್ತು ವೇಗಕ್ಕೆ ಮಾಧ್ಯಮ ಕ್ಷೇತ್ರದಲ್ಲಿರುವ ಮಹತ್ವವೇನು ಎನ್ನುವುದನ್ನು ವಿವರಿಸಿದರು. ಅಷ್ಟೇ ಅಲ್ಲ, ಒಬ್ಬ ಪತ್ರಕರ್ತನಾದವನಿಗೆ ಓದು ಎನ್ನೋದು ಎಷ್ಟು ಮುಖ್ಯ, ಒಂದೇ ಸುದ್ದಿಯನ್ನು ಹತ್ತಾರು ರೀತಿಯಲ್ಲಿ ಬರೆಯುವುದು ಹೇಗೆ, ಹೀಗೆ ಹತ್ತಾರು ವಿಷಯಗಳ ಬಗ್ಗೆ ಸುದೀರ್ಘವಾಗಿ ಮಾರ್ಗದರ್ಶನ ನೀಡಿದರು.
ಹೀಗೆ ನಮ್ಮ ʼಮಾಧ್ಯಮ ಕಛೇರಿʼಯ ಭೇಟಿಯಿಂದ ಹತ್ತಾರು ಹೊಸ ವಿಷಯಗಳನ್ನು ಕಲಿತೆವು. ಒಂದು ದೃಶ್ಯ ಮಾಧ್ಯಮ ಹೇಗೆ ಕಾರ್ಯನಿರ್ವಹಿಸುತ್ತದೆ, ಅದರ ಹಿಂದೆ ಎಷ್ಟು ಜನರು ವ್ಯವಸ್ಥಿತವಾಗಿ, ಒಬ್ಬರಿಗೊಬ್ಬರು ಪೂರಕವಾಗಿ ಹೇಗೆ ಕಾರ್ಯನಿರ್ವಹಿಸುತ್ತಾರೆ, ಅಲ್ಲಿ ಅಷ್ಟೂ ಜನರ co-ordination ಎಷ್ಟು ಮುಖ್ಯ ಎನ್ನುವುದನ್ನು ಅರಿತೆವು. ಒಂದು ಸುದ್ದಿಯನ್ನು ಕೇವಲ ಟಿವಿ ಮುಂದೆ ಕುಳಿತು ನೋಡೋದು ಬೇರೆ, ಅದರ ಹಿಂದೆ ಎಷ್ಟು ಜನರ ಪರಿಶ್ರಮವಿದೆ ಎನ್ನುವುದನ್ನು, ನಾವು ಮಾಧ್ಯಮ ಕಛೇರಿಗೆ ಭೇಟಿ ನೀಡಿದಾಗಲಷ್ಟೇ ಅರಿತುಕೊಳ್ಳಲು ಸಾಧ್ಯ!!
- ಗಜಾನನ ಭಟ್
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿ