ಭಾರತದ ಕತ್ತು ಹಿಸುಕುತ್ತಿದೆ ಚೈನಾದ ʼಮುತ್ತಿನ ಹಾರʼ(String of Pearls)!!

ಶತ್ರುಗಳಲ್ಲಿ ಹಲವು ವಿಧ. ಒಂದು ಕಣ್ಣಿಗೆ ಕಾಣುವ ಬಹಿರಂಗ ಶತ್ರುಗಳಾದರೆ, ಇನ್ನೊಂದು ಗುಟ್ಟಾಗಿ ಕೇಡು ಬಯಸುವ ಹಿತ ಶತ್ರುಗಳು. ಇನ್ನೂ ಕೆಲವೊಬ್ರು ನಮ್ಮಿಂದ ಲಾಭವನ್ನೂ ಬಯಸುತ್ತಾರೆ, ಅದೇ ಸಮಯಯದಲ್ಲಿ ನಮಗೆ ಕೇಡನ್ನೂ ಬಯಸುತ್ತಾರೆ. ಇದೇ ನಿಯಮ ಕೇವಲ ಮನುಷ್ಯರಿಗಲ್ಲ, ಜಿಯೋ ಪಾಲಿಟಿಕ್ಸ್ʼಗೂ ಕೂಡ ಅನ್ವಯವಾಗುತ್ತದೆ. ಈಗ ಈ ಮೂರನೇ ಕ್ಯಾಟಗರಿಗೆ ಸೇರೋ ದೇಶ ಅಂದ್ರೆ, ಅದು ನಮ್ಮ ನೆರೆಯ ದೇಶ ʼಡ್ರ್ಯಾಗನ್ʼ ಅಂತಾನೇ ಕುಖ್ಯಾತಿ ಆಗಿರೋ ಚೈನಾ!!
ಈ ಚೈನಾ, ನಮಗೆ ಮಿತ್ರನಂತೆ ವರ್ತಿಸೋ ಊಸರವಳ್ಳಿಯೂ ಹೌದು. ಆ ಕಡೆ ಬೆನ್ನ ಹಿಂದೆ ಚೂರಿ ಹಾಕೋ ಹಿತಶತ್ರುವೂ ಹೌದು. ಚೈನಾ ಈಗ ಜಗತ್ತಿನ ಕೈಗಾರಿಕಾ ಫ್ಯಾಕ್ಟರಿ. ವ್ಯಾಪಾರವನ್ನೇ ಹೆಚ್ಚಾಗಿ ನಂಬಿಕೊಂಡಿರೋ ದೇಶ ಇದು. ಇಂತಹ ಚೈನಾಗೆ ಸಿಕ್ಕ ಸಿಕ್ಕ ದೇಶಗಳ ಭೂಭಾಗಗಳನ್ನ ಇಂಚು ಇಂಚಾಗಿ ಕಬಳಿಸೋ ಹುಚ್ಚು. ಅದಕ್ಕೆ ಈ ದೇಶ ʼಡ್ರ್ಯಾಗನ್ʼ ಅಂತಾನೇ ಫೇಮಸ್. ಈಗ ಜಗತ್ತಿನ ದೊಡ್ಡಣ್ಣ ಅಂತಾನೇ ಕರೆಸಿಕೊಳ್ಳೋ ಅಮೆರಿಕಾದ ಸ್ಥಾನವನ್ನ ತಾನು ಅಲಂಕರಿಸ್ಬೇಕು ಅನ್ನೋ ಹಂಬಲ ಚೈನಾಗೆ. ಹಾಗಾಗಿ ಅಮೆರಿಕಾ ಎಂಬ ಸೂಪರ್ ಪವರ್ʼನ್ನ ಮೀರಿಸಿ ತಾನೂ ಒಂದು ಸೂಪರ್ ಪವರ್ ದೇಶವಾಗಿ ಬೆಳೆಯಬೇಕು ಎಂಬ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳನ್ನೂ ಮಾಡ್ತಿದೆ ಚೈನಾ. ತನ್ನ ಸೇನಾ ಶಕ್ತಿಯನ್ನೂ ಕೂಡ ಅಮೆರಿಕಕ್ಕೆ ಪೈಪೋಟಿ ನೀಡುವಂತೆ ಬೆಳೆಸ್ತಿದೆ ಈ ದೇಶ. ಜಗತ್ತಿನ ನಂಬರ್ ಒನ್ ಎಕಾನಮಿಯಾಗ್ಬೇಕು ಅಂತ ಬಯಸ್ತಿರೋ ಈ ದೇಶ, ತನ್ನ ಎಕಾನಮಿಗೆ ಹಾನಿಯಾಗತ್ತೆ ಅನ್ನೋ ಕಾರಣಕ್ಕೆ ಯಾವ ದೇಶದ ವಿರುದ್ಧವೂ ನೇರವಾಗಿ ಯುದ್ಧ ಮಾಡಲ್ಲ. ಅದರ ಬದಲು ಈ ಚೈನಾ ಮಾಡೋದೇನಿದ್ರೂ ಎಕಾನಮಿಕಲ್ ವಾರ್ ಅಥವಾ ಪ್ರಾಕ್ಸಿ ವಾರ್.
ಈ ಚೈನಾ ಒಂದು ದೇಶವನ್ನು ದುರ್ಬಲಗೊಳಿಸೋ ವಿಷಯದಲ್ಲಿ ನಾನಾ ರೀತಿಯ ಕುತಂತ್ರಗಳನ್ನ ಮಾಡುತ್ತದೆ. ಯಾವ ದೇಶ ಆಂತರಿಕವಾಗಿ ಬಲಿಷ್ಠವಾಗಿದ್ಯೋ, ಅಂತಹ ದೇಶಗಳಲ್ಲಿ ತನ್ನ ಗೂಢಚರರನ್ನ ನುಸುಳಿಸಿ ಅಲ್ಲಿಯ ಮಾಹಿತಿಗಳನ್ನ ಕದಿಯೋದು, ದೇಶದೊಳಗಿನ ಭಯೋತ್ಪಾದಕ ಸಂಘಟನೆಗಳಿಗೆ ಅಥವಾ ಪ್ರತ್ಯೇಕತಾವಾದಿ ಸಂಘಟನೆಗಳಿಗೆ ಫಂಡಿಂಗ್ ಮಾಡೋ ಮೂಲಕ, ಆ ದೇಶವನ್ನ ಆಂತರಿಕವಾಗಿ ದುರ್ಬಲಗೊಳಿಸೋದು, ಅಲ್ಲಿನ ಸರ್ಕಾರದ ವಿರುದ್ಧ ದಂಗೆಯೇಳುವಂತೆ ಪ್ರಚೋದಿಸೋದು, ಆ ದೇಶದೊಳಗಿನ ಪತ್ರಕರ್ತರಿಗೆ, ಅಧಿಕಾರಿಗಳಿಗೆ ಹಿಂಬಾಗಿಲಿನಿಂದ ಆರ್ಥಿಕ ಸಹಾಯ ಮಾಡುವುದರ ಮುಖಾಂತರ ಅವರನ್ನ ಖರೀದಿ ಮಾಡೋದು, ಆ ಮುಖಾಂತರ ಅಲ್ಲಿನ ಆಡಳಿತದೊಳಗೆ ಹಸ್ತಕ್ಷೇಪ ಮಾಡೋದು ಹೀಗೆ, ನಾನಾ tactics ಉಪಯೋಗಿಸುತ್ತೆ ಚೈನಾ. ಇನ್ನು ಚಿಕ್ಕ ಪುಟ್ಟ ದೇಶಗಳಿಗೆ ಅಥವಾ ಆರ್ಥಿಕ ನೆರವಿನ ಅಗತ್ಯ ಇರೋ ದೇಶಗಳಿಗೆ, ಅತಿಯಾದ ಸಾಲ ಕೊಡೋದು. ಆ ದೇಶಗಳು ಸಾಲ ತೀರಿಸಲು ಅಸಾಧ್ಯವಾದಾಗ, ಆ ದೇಶದ ಬಂದರುಗಳನ್ನೋ, ದ್ವೀಪಗಳನ್ನೋ ಅಥವಾ ಕಂಪನಿಗಳನ್ನೋ ಲೀಸ್ʼಗೆ ತೆಗೆದುಕೊಳ್ಳೋ ಮುಖಾಂತರ ಅವುಗಗಳನ್ನು ತನ್ನ ವಶಕ್ಕೆ ಪಡೆದುಕೊಳ್ಳುತ್ತದೆ ಈ ಚೈನಾ. ಆ ಮೇಲೆ ನಿಧಾನವಾಗಿ ಅಲ್ಲಿ ತನ್ನ ಸೇನಾ ನೆಲೆಯನ್ನು ಸ್ಥಾಪನೆ ಮಾಡಿಕೊಳ್ಳುತ್ತದೆ. ಇದು ಮೊದಲಿನಿಂದಲೂ ವಿದೇಶಿ ನೆಲದ ಮೇಲೆ ತನ್ನ ಸಾರ್ವಭೌಮತ್ವ ಸ್ಥಾಪಿಸೋದಕ್ಕೆ ಚೈನಾ ಪಾಲಿಸಿಕೊಂಡು ಬಂದಿರೋ ನೀತಿ!
ಯಾವಾಗ ಭಾರತ ತನಗೆ ಸರಿಸಾಟಿಯಾಗಿ ಬೆಳೆಯಬಹುದು ಅಂತ ಅನ್ನಿಸ್ತೋ, ಆಗ ಭಾರತದ ಮೇಲೂ ತನ್ನ ಕುತಂತ್ರ ಆರಂಭ ಮಾಡಿತ್ತು ಚೈನಾ. ಭಾರತವನ್ನು ನೇರವಾಗಿ ಸೇನಾ ಶಕ್ತಿಯ ಮುಖಾಂತರ ಎದುರಿಸೋದು ಸುಲಭ ಅಲ್ಲಅನ್ನೋದನ್ನ ಅರಿತಿದ್ದ ಚೈನಾ, ಭಾರತದ ಮೇಲೆ ಬೇರೆ ರೀತಿಯ ಪಿತೂರಿ ಮಾಡೋಕೆ ಆರಂಭಿಸಿತ್ತು. ಭಾರತದ ಈಶಾನ್ಯ ರಾಜ್ಯಗಳಲ್ಲಿ ಪ್ರತ್ಯೇಕತಾವಾದಕ್ಕೆ ಫಂಡಿಂಗ್ ಮಾಡೋದು, ಮಾವೋವಾದಿ ಹಾಗೂ ನಕ್ಸಲರಿಗೆ ಶಸ್ತ್ರಾಸ್ತ್ರ ಪೂರೈಸೋದು, ಭಾರತದೊಳಗಿನ ಕೆಲವು NGOಗಳ ಮುಖಾಂತರ ಇಲ್ಲಿನ ಆಡಳಿತದಲ್ಲಿ ಹಸ್ತಕ್ಷೇಪ ಮಾಡೋದು ಹೀಗೆ, ಹಲವು ರೀತಿಯ ಪ್ರಯತ್ನಗಳನ್ನ ಮಾಡ್ತಿದೆ ಚೈನಾ. ಅಷ್ಟೇ ಅಲ್ಲ ಭಾರತದ ವಿರುದ್ಧ, ನಮ್ಮ ಆ ಜನ್ಮ ಶತ್ರುವಾದ ಪಾಕಿಸ್ಥಾನಕ್ಕೆ ಆರ್ಥಿಕ ಸಹಾಯ ಮಾಡುವುದರ ಮೂಲಕ, ದೇಶದಲ್ಲಿ ಭಯೋತ್ಪಾದನಾ ಕೃತ್ಯಗಳಿಗೂ ಪ್ರೋತ್ಸಾಹ ನೀಡ್ತಿದೆ ಚೈನಾ! ಇದಕ್ಕೆ ಈಗ ಟರ್ಕಿ ಕೂಡ ಸೇರಿಕೊಂಡಿದ್ದು, ಭಾರತದ ವಿರುದ್ಧ ಚೈನಾ-ಪಾಕಿಸ್ತಾನ-ಟರ್ಕಿಗಳ ಹೊಸ ವಿಷಕೂಟವೊಂದು ರೆಡಿಯಾಗಿದೆ!

ಭಾರತ ಹಾಗೂ ಚೈನಾದ ಮಧ್ಯೆ ಇರುವ mcmohan ಗಡಿರೇಖೆಯನ್ನು ಯಾವತ್ತೂ ಅಧಿಕೃತ ಅಂತ ಚೈನಾ ಒಪ್ಪಿಕೊಳ್ತಾ ಇಲ್ಲ. ಮೊದಲು ಭಾರತ ಹಾಗೂ ಟಿಬೆಟ್ ನಡುವಿನ ಗಡಿರೇಖೆಯಾಗಿದ್ದ mcmohan line ಟಿಬೆಟ್ʼನ್ನ ಚೈನಾ ಅತಿಕ್ರಮಿಸಿಕೊಂಡ ನಂತರ ಅದು ಭಾರತ ಮತ್ತು ಚೈನಾದ ನಡುವಿನ ಗಡಿರೇಖೆಯಾಗಿ ಬದಲಾಯ್ತು. ಭಾರತ ಈ ರೇಖೆಯನ್ನೇ ಎರಡೂ ದೇಶಗಳ ನಡುವಿನ ಅಧಿಕೃತ ಗಡಿ ರೇಖೆ ಅಂತಾ ವಾದಿಸ್ತಾ ಇದ್ದರೆ, ಚೈನಾ ಇದನ್ನು ಗಡಿರೇಖೆ ಅಂತ ಒಪ್ಪಿಕೊಳ್ಳೋಕೆ ಸಿದ್ಧವಿಲ್ಲ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಎರಡೂ ದೇಶಗಳ ನಡುವೆ ಆಗಾಗ ಸಂಘರ್ಷ ನಡೆಯುತ್ತಲೇ ಇರುತ್ತೆ. ಇದೇ ವಿಷಯಕ್ಕೆ 2020ರಲ್ಲಿ ಗಲ್ವಾನ್ ವ್ಯಾಲಿಯಲ್ಲಿ ಎರಡೂ ದೇಶಗಳ ನಡುವೆ ದೊಡ್ಡ ಮಟ್ಟದ ಸಂಘರ್ಷ ನಡೆದು, ಎರಡೂ ಕಡೆ ಸಾಕಷ್ಟು ಪ್ರಾಣ ಹಾನಿಗೆ ಕಾರಣವಾಯ್ತು.
ತನ್ನ ವ್ಯಾಪಾರ ವೃದ್ಧಿಗಾಗಿ belt and road initiative(BRI) ಎಂಬ ವ್ಯಾಪಾರೀ ಮಾರ್ಗವನ್ನು ಆರಂಭಿಸಿರೋ ಚೈನಾ, ಹಲವು ದೇಶಗಳಿಗೆ ಸಾಲ ನೀಡಿ ಈ ಯೋಜನೆಯಲ್ಲಿ ಪಾಲುದಾರರನ್ನಾಗಿ ಮಾಡ್ಕೊಂಡಿದೆ. ಚೈನಾ ಈ ಯೋಜನೆಯ ಭಾಗವಾಗಿ ʼಪಾಕ್ ಆಕ್ರಮಿತ ಕಾಶ್ಮೀರʼದಲ್ಲೂ ರಸ್ತೆ, ಬ್ರಿಡ್ಜ್ʼಗಳ ನಿರ್ಮಾಣ ಮಾಡ್ತಿದೆ. POK ನಮ್ಮ ದೇಶದ ಅವಿಭಾಜ್ಯ ಅಂಗ ಅಂತ ಭಾರತ ಇದಕ್ಕೆ ಎಷ್ಟೇ ವಿರೋದ ವ್ಯಕ್ತಪಡಿಸಿದ್ರೂ, ಚೈನಾ ಇದಕ್ಕೆ ಕ್ಯಾರೆ ಅಂತಿಲ್ಲ. ಅರಬ್ಬೀ ಸಮುದ್ರ್ಕಕ್ಕೆ ನೇರ ಪ್ರವೇಶ ಪಡೆಯೋ ನಿಟ್ಟಿನಲ್ಲಿ ಪಾಕಿಸ್ತಾನದಲ್ಲಿ ʼಗ್ವದಾರ್ʼ ಬಂದರನ್ನ ಅಭಿವೃದ್ಧಿ ಪಡಿಸ್ತಿದೆ ಚೈನಾ. ಈ ಪ್ರಾಜೆಕ್ಟ್ ಏನಾದ್ರೂ ಪೂರ್ತಿಯಾದ್ರೆ, ಚೈನಾಗೆ ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಅರಬ್ಬೀ ಸಮುದ್ರಕ್ಕೆ ನೇರ ಎಂಟ್ರಿ ಸಿಗುತ್ತದೆ. ಅಷ್ಟೇ ಅಲ್ಲ, ಅರುಣಾಚಲದ ಮೇಲೆ ಮೊದಲಿನಿಂದಲೂ ಕಣ್ಣು ಹಾಕಿರೋ ಚೈನಾ, ಅದನ್ನು South Tibet ಅಂತ ಕರೆಯುತ್ತೆ. ಈ ಭಾಗದಲ್ಲಿ PLA ಸೈನಿಕರು ಪದೇ ಪದೇ ಒಳನುಸುಳೋ ಪ್ರಯತ್ನ ಮಾಡುತ್ತಲೇ ಇರ್ತಾರೆ. ಇತ್ತೀಚೆಗೆ ಅರುಣಾಚಲ ಪ್ರದೇಶದ ಹಲವು ಭಾಗಗಳಿಗೆ ಮರುನಾಮಕರಣ ಮಾಡಿತ್ತು ಚೈನಾ!
ಭಾರತವನ್ನ ಸೇನಾಶಕ್ತಿಯ ಮುಖಾಂತರ ಸುತ್ತುವರೆಯಬೇಕು ಅಂತ ಬಯಸ್ತಿರೋ ಚೈನಾ, ಭಾರತದ ಸುತ್ತಲಿನ ದೇಶಗಳಲ್ಲಿ ಹಲವು ಬಂದರುಗಳನ್ನ ವಶಪಡಿಸಿಕೊಂಡಿದೆ, ಕೆಲವು ಕಡೆ ಸೇನಾ ನೆಲೆಗಳನ್ನೂ ಸ್ಥಾಪಿಸಿಕೊಂಡಿದೆ. ಇದು ಭಾರತಕ್ಕೆ ರಕ್ಷಣಾ ದೃಷ್ಟಿಯಿಂದ ಸವಾಲಾಗಿದ್ದು, ಚೈನಾದ ಈ ಸೇನಾ ವ್ಯೂಹವನ್ನ String of Pearls(ಮುತ್ತಿನ ಹಾರ) ಎಂದೇ ಕರೆಯುತಾರೆ. ಇದರ ಭಾಗವಾಗಿ ಈಗಾಗಲೇ ಚೈನಾ ಬಾಂಗ್ಲಾದೇಶದ ಚಿತ್ತಗಾಂಗ್ ಬಂದರನ್ನ, ಮಯನ್ಮಾರ್ ಬಂದರನ್ನ, ಶ್ರೀಲಂಕಾದ ಹಂಬನ್ʼತೋಟ ಬಂದರನ್ನ ವಶಕ್ಕೆ ಪಡೆದಿದ್ದು, ಆಪ್ರಿಕಾದ ಡಿಜಿಬೌಟಿಯಲ್ಲಿ ತನ್ನ ಸೇನಾ ನೆಲೆಯನ್ನ ಹೊಂದಿದೆ. ಇದಕ್ಕೆ ಪರ್ತಿತಂತ್ರವಾಗಿ ಭಾರತ Necklase of Diamonds ಎಂಬ ವ್ಯೂಹವನ್ನ ನಿರ್ಮಿಸ್ತಿದೆ. ಭಾರತವನ್ನ ಸುತ್ತುವರೆಯಬೇಕು ಎನ್ನುವ ಮಹದಾಸೆಯ ಚೈನಾದ ಸೇನಾವ್ಯೂಹ String of Pearls ಯಶಸ್ವಿಯಾಗತ್ತಾ!? ಅಥವಾ ಅದಕ್ಕೆ ಪ್ರತಿಯಾಗಿ ಭಾರತ ರಚಿಸ್ತಿರುವ Necklace of Diamonds ವ್ಯೂಹ ಯಶಸ್ವಿಯಾಗತ್ತಾ ಅನ್ನೋದನ್ನ ಕಾಲವೇ ನಿರ್ಧರಿಸಲಿದೆ!!
ಗಜಾನನ ಭಟ್
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿ