ಚೀನಾ ಸಭೆಯಲ್ಲಿ ಅಜಿತ್ ದೋವಲ್ ತಂಡ…!

ವಿಶ್ವಪಟಲದಲ್ಲಿನ ನಾನಾ ಬೆಳವಣಿಗೆಗಳ ನಡುವೆ ಏಷ್ಯಾದಲ್ಲಿ ಮತ್ತೊಂದು ದೊಡ್ಡ ಬೆಳವಣಿಗೆ ನಡೆಯುತ್ತಿದೆ. ಶತಮಾನದ ಶತ್ರುಗಳಾದ ಭಾರತ-ಚೀನ ನಡುವೆ ಮುಖ್ಯವಾದ ಸಭೆ ನಡೆದಿದೆ. 5 ವರ್ಷಗಳ ನಂತರ ಭಾರತದ ನಿಯೋಗ ಚೀನಾಗೆ ಭೇಟಿ ಕೊಟ್ಟಿದೆ. ಭಾರತದ ಅಜಿತ್ ದೋವಲ್ ತಂಡ ಡಿಸೆಂಬರ್18 ರಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಮತ್ತು ಚೀನಾ ಉಪಾಧ್ಯಕ್ಷ ಹಾನ್‌ಜೆಂಗ್‌ರನ್ನು ಭೇಟಿ ಮಾಡಿ ಗಡಿಯ ಬಗ್ಗೆ ಚರ್ಚೆ ನಡೆಸಿದ್ದಾರೆ.
2020ರ ಏಪ್ರಿಲ್‌ನಲ್ಲಿ ಶುರುವಾದ ಸಂಘರ್ಷ 2024 ರವರೆಗೆ ಮುಂದುವರೆದಿದೆ. ಈಗ ಉಭಯ ದೇಶಗಳು ಗಡಿಯಲ್ಲಿನ ತಮ್ಮ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಬಗ್ಗೆ ಒಂದು ಒಪ್ಪಂದಕ್ಕೆ ಬಂದಿವೆ. ಅದರಂತೆ ಸೇನೆಯನ್ನು ಹಿಂದಕ್ಕೆ ಸರಿಸುವ ಕೆಲಸ ಕೂಡ ಆರಂಭವಾಯಿತು, ಆದರೆ ಆ ಕೆಲಸ ಇನ್ನೂ ಪೂರ್ಣಗೊಂಡಿಲ್ಲ. ಬರಿ ಸೇನೆಯನ್ನು ಹಿಂಪಡೆಯುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ, ಹೀಗಾಗಿ ಗಡಿ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಿಕೊಳ್ಳುವತ್ತ ಭಾರತ ಮತ್ತು ಚೀನಾ ದೇಶ ಮುನ್ನಡೆಯುತ್ತಿವೆ. ಅದರ ಭಾಗವಾಗಿ ಭಾರತದ ರಾಷ್ಡ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಚೀನಾ ಪ್ರವಾಸ ಕೈಗೊಂಡಿದ್ದಾರೆ. ಅವರ ಈ ಪ್ರವಾಸ ಗಡಿ ಸಮಸ್ಯೆಗೆ ಒಂದು ಶಾಶ್ವತ ಪರಿಹಾರವನ್ನು ಹುಡುಕುವ ಕೆಲಸ ಎನ್ನುವ ವಿಶ್ವಾಸವನ್ನು ರಕ್ಷಣಾ ತಜ್ಞರು ವ್ಯಕ್ತಪಡಿಸುತ್ತಿದ್ದಾರೆ.
ಭಾರತ ಮತ್ತು ಚೀನಾದ ನಡುವಿನ ಸಂಘರ್ಷಕ್ಕೆ ಇನ್ನು ಪೂರ್ಣವಿರಾಮದ ತೆರೆ ಬಿದ್ದಿಲ್ಲ.

ಈ ಹಿಂದೆ ಎರಡು ದೇಶಗಳ ವಿದೇಶಾಂಗ ಸಚಿವರ ನಡುವೆ ಮಾತುಕತೆ ನಡೆದಿದ್ದವು. ಕೋರ್ ಕಮ್ಯಾಂಡಿಂಗ್ ಆಫೀಸರ್‌ಗಳ ಸಭೆಗಳು ಆಗಿದ್ದವು, ರಕ್ಷಣಾ ಸಚಿವರ ನಡುವೆ ಮಾತುಕತೆಗಳಾಗಿವೆ, ಚೀನಾದ ಅಧ್ಯಕ್ಷ ಶೀ ಜಿನ್‌ಪಿಂಗ್ ಹಾಗೂ ಭಾರತದ ಪ್ರಧಾನಿ ನರೇಂದ್ರ ಮೋದಿ ಕೆಲವು ಮಾತುಕತೆಗಳನ್ನು ನಡೆಸಿದ್ದಾರೆ. ಆದರೆ ಇಂದಿಗೂ ಕೂಡ ಭಾರತ ಮತ್ತು ಚೀನಾದ ಗಡಿಯಲ್ಲಿನ ಸೇನೆಯನ್ನು ಸಂಪೂರ್ಣವಾಗಿ ವಾಪಸ್ಸು ಕರೆಸಿಕೊಳ್ಳುವ ಕೆಲಸವನ್ನು ಎರಡೂ ದೇಶಗಳು ಮಾಡಿಲ್ಲ. ಮಾಧ್ಯಮಗಳ ಪ್ರಕಾರ “ಚೀನಾ ಸುಮಾರು 1 ಲಕ್ಷ ಸೇನೆಯನ್ನು ಹೊಂದಿದೆ ಮತ್ತು ಭಾರತ 60 ಸಾವಿರದಷ್ಟು ಸೈನಿಕರನ್ನು ಗಡಿಯಲ್ಲಿ ನಿಯೋಜನೆಗೊಳಿಸಿದೆ”. ಇದರೊಂದಿಗೆ ಎರಡೂ ಕಡೆಗಳಲ್ಲಿ ಡ್ರೋನ್‌ಗಳು, ಏರ್-ಡಿಫೆನ್ಸ್-ಸಿಸ್ಟಮ್,ಯುದ್ಧ ವಿಮಾನಗಳು, ಕ್ಷಿಪಣಿಗಳು ಯುದ್ಧ ಸನ್ನದ್ಧ ಸ್ಥಿತಿಯಲ್ಲಿವೆ.
ಗಡಿಯ ಬಗ್ಗೆ ಮಾತನಾಡಲು ಚೀನಾದಲ್ಲಿ ಒಂದು ಸಭೆ ಯನ್ನು ಆಯೋಜಿಸಲಾಗಿದೆ ಅದಕ್ಕೆ ʼವರ್ಕಿಂಗ್ ಮೆಕಾನಿಸಂ ಫಾರ್ ಕನ್ಸಲ್ಟೇಶನ್ ಅಂಡ್ ಕೋಆರ್ಡಿನೇಶನ್ ಮೀಟಿಂಗ್ʼ ಎಂದು ಕರೆಯಲಾಗುತ್ತಿದೆ. ಈ ಸಭೆಯು ಬೀಜಿಂಗ್‌ನಲ್ಲಿ ನಡೆಯದಿದ್ದು, ಈ ಸಭೆಯಲ್ಲಿ ಭಾಗಿಯಾಗುವುದಕ್ಕೆ ದೋವಲ್ ಚೀನಾಗೆ ಪ್ರಯಾಣವನ್ನು ಬೆಳೆಸಿದ್ದರು. ಪ್ರತಿ ವರ್ಷ ಈ ಸಮಿತಿಯು ಸಭೆಯನ್ನು ನಡೆಸುತ್ತದೆ ಅಲ್ಲಿ ಗಡಿಯ ವಿವಾದದ ಬಗ್ಗೆ ಮಾತುಕತೆಗಳು ಆಗುತ್ತಿರುತ್ತವೆ. ಇಲ್ಲಿಯವರೆಗೆ 22 ಬಾರಿ ಸಭೆಗಳನ್ನು ಮಾಡಿದ್ದು 2020ರ ನಂತರ ಭಾರತ ಮತ್ತು ಚೀನಾ ನಡುವಿನ ಗಡಿ ಸಂಘರ್ಷವನ್ನು ಕಡಿಮೆ ಮಾಡುವುದಕ್ಕೆ ಗಂಭೀರವಾಗಿ ಸಮಿತಿ ಸಭೆಗಳನ್ನು ಮಾಡುತ್ತಿದೆ. ಇಲ್ಲಿಯವರೆಗೂ ಅದರಿಂದ ಯಾವ ಪ್ರಯೋಜನವೂ ಸಹ ಆಗಿಲ್ಲ. ಈ ಬಾರಿಯ ಸಭೆಯಲ್ಲಾದರೂ ಮಾತುಕತೆಗಳಿಂದ ಏನದರೂ ಬದಲಾವಣೆ ಆಗಬಹುದು ಎನ್ನುವ ನಿರೀಕ್ಷೆ ಎರಡು ದೇಶಗಳಲ್ಲಿ ಇದೆ.
ಹೇಮ ಎನ್.ಜೆ
ಆಲ್ಮಾ ಮೀಡಿಯಾ ಸ್ಕೂಲ್ ವಿದ್ಯಾರ್ಥಿನಿ