Alma Corner

ಸಲಿಂಗ ಜೋಡಿಯ ಸಹಜೀವನದ ಹಕ್ಕು ಎತ್ತಿಹಿಡಿದ ಆಂಧ್ರ ಹೈಕೋರ್ಟ್‌…!

ಸಲಿಂಗ ಜೋಡಿಯ ಸಹ ಜೀವನದ ಹಕ್ಕನ್ನು ಆಂಧ್ರ ಪ್ರದೇಶದ ಹೈಕೋರ್ಟ್‌ ಎತ್ತಿಹಿಡಿದಿದೆ. ʼವಯಸ್ಕರಾದವರಿಗೆ ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವಿದೆʼ ಎಂದು ಹೇಳಿದೆ. ಕವಿತಾ ಮತ್ತು ಲಲಿತಾ ಎಂಬ ಇಬ್ಬರು ಯುವತಿಯರು ಕಳೆದ ಒಂದು ವರ್ಷದಿಂದ ಜೊತೆಯಲ್ಲಿ ಜೀವನ ನಡೆಸುತ್ತಿದ್ದರು. ಕಳೆದ ಸೆಪ್ಟೆಂಬರ್‌ನಲ್ಲಿ ಲಲಿತಾ ಕುಟುಂಬ ಸದಸ್ಯರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಇದಾದ ಬಳಿಕ ಕವಿತಾ ತಮ್ಮ ಸಂಗಾತಿ ಲಲಿತಾ ಕಾಣೆಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ಕೊಟ್ಟಿದ್ದರು. ತನಿಖೆ ವೇಳೆ ಲಲಿತಾ ಪೋಷಕರು ಆಕೆಯನ್ನು ನರಸಿಪಟ್ಟಣಮ್‌ನಲ್ಲಿ ಅಕ್ರಮವಾಗಿ ಬಂಧಿಸಿಟ್ಟಿರುವುದು ತಿಳಿಯಿತು. ಇದಾದ ಬಳಿಕ ಕವಿತಾ ನ್ಯಾಯ ಕೋರಿ ಆಂಧ್ರಪ್ರದೇಶದ ಹೈಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಆರ್‌.ರಘುನಂದನ್‌ ರಾವ್‌ ಹಾಗೂ ನ್ಯಾ.ಕೆ.ಮಹೇಶ್ವರ ರಾವ್‌ ಅವರನ್ನು ಒಳಗೊಂಡ ಪೀಠವು, “ಈ ಪ್ರಕರಣದಲ್ಲಿ ಲಲಿತಾ ಮತ್ತು ಕವಿತಾ ಇಬ್ಬರೂ ವಯಸ್ಕರಾಗಿದ್ದು, ತಮ್ಮ ಜೀವನದ ನಿರ್ಧಾರಗಳನ್ನು ತಾವೇ ತೆಗೆದುಕೊಳ್ಳಲು ಸ್ವತಂತ್ರರು ಮತ್ತು ಶಕ್ತರು. ಹೀಗಾಗಿ ಈ ಜೋಡಿಯ ಸಂಬಂಧದಲ್ಲಿ ಮಧ್ಯಪ್ರವೇಶಿಸಬಾರದು” ಎಂದು ಆಂಧ್ರ ಹೈಕೋರ್ಟ್‌ ಲಲಿತಾ ಪೋಷಕರಿಗೆ ತಿಳಿಸಿದೆ.


ಈ ಹಿಂದೆ ಸಲಿಂಗಿಗಳ ವಿವಾಹವನ್ನು ಕಾನೂನು ಬದ್ಧಗೊಳಿಸಿದರೆ ಭಾರತೀಯ ಸಂಪ್ರದಾಯ ಪದ್ಧತಿಗೆ ಹೊಡೆತ ಬೀಳುತ್ತದೆ ಎಂಬ ಚರ್ಚೆ ನಡೆದಿತ್ತು. ಈ ವಿವಾಹಗಳನ್ನು ಸಾಂಪ್ರದಾಯಿಕ ಎನ್ನುವುದಕ್ಕಿಂತ ಮುಖ್ಯವಾಗಿ ವೈಜ್ಞಾನಿಕವೋ ಅಥವಾ ಅವೈಜ್ಞಾನಿಕವೋ, ಮಾನಸಿಕ ಪರಿಣಾಮ, ದೇಹರಚನೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ನೋಡಬೇಕಾಗುತ್ತದೆ. ಕೆಲವೊಂದು ಪ್ರಕರಣಗಳನ್ನು ಹೊರತುಪಡಿಸಿದರೆ ಅದರ ಪರಿಣಾಮ ದೇಶದ ಮೇಲೆ ಹೇಗಿರುತ್ತದೆ ಎಂದು ಸಹ ನೋಡಬೇಕಾಗುತ್ತದೆ. ಕೇವಲ ಭಾರತ ದೇಶದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ಇದರ ಬಗ್ಗೆ ಚರ್ಚೆ ನಡೆಯುತ್ತಿದೆ. ಪ್ರಪಂಚದ 200 ದೇಶಗಳ ಪೈಕಿ ಕೇವಲ 30 ದೇಶಗಳು ಮಾತ್ರ ಸಲಿಂಗ ವಿವಾಹಕ್ಕೆ ಅನುಮತಿ ಕೊಟ್ಟಿದೆ. ಇದು ಸಾರ್ವತ್ರಿಕವಾಗಿ ಒಪ್ಪಕೊಳ್ಳಲು ಸಾಧ್ಯವಿಲ್ಲ, ಪೂರ್ವಾಪರ ಆಲೋಚನೆಗೆ ಒಪ್ಪಿಗೆ ಕೊಡುವಂತಹ ಸಂಗತಿ ಅಲ್ಲ ಎಂದು ತಿಳಿದುಬಂದಿತ್ತು.
ಸಲಿಂಗ ವಿವಾಹ ಎನ್ನುವುದು ಭಾರತದಂತಹ ಸಾಂಪ್ರದಾಯಿಕ ನೆಲದಲ್ಲಿ ಅಸಹಜ ಪ್ರಕ್ರಿಯೆ. ಬಹುತೇಕ ದೇಶಗಳು ಸಲಿಂಗ ವಿವಾಹದ ಬಗ್ಗೆ ಯಾವುದೇ ರೀತಿಯ ತೀರ್ಮಾನವನ್ನು ತೆಗೆದುಕೊಳ್ಳಲು ಮುಂದಾಗಿಲ್ಲ. ಸಲಿಂಗ ವಿವಾಹಗಳಿಗೆ ಮಾನ್ಯತೆಯನ್ನು ನೀಡಿದರೆ ಅದು ಮತ್ತೊಂದು ಸಾಮಾಜಿಕ ಸಂಸ್ಥೆಯ ಹುಟ್ಟಿಗೆ ಕಾರಣವಾಗುತ್ತದೆ ಹಾಗಾಗಿ ಈ ನಿರ್ಧಾರ ಕೋರ್ಟ್‌ಗೆ ಸಂಭಂಧಿಸಿದ್ದಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು. ಭಾರತೀಯ ದಂಡ ಸಂಹಿತೆ 377 ಅಡಿಯಲ್ಲಿ ಸಲಿಂಗಕಾಮವನ್ನು ಶಿಕ್ಷಾರ್ಹ ಅಪರಾಧವಾಗಿ ಪರಿಗಣಿಸಿತ್ತು. ಇದೀಗ ಕಾನೂನಿನಲ್ಲಿ ತಿದ್ದುಪಡಿಯಾಗಿದ್ದು ಬಲವಂತವಾದ ಸಲಿಂಗ ಕಾಮ ಮಾತ್ರವೇ ಅಪರಾಧ, ಸಮ್ಮತಿಯಿಂದ ನಡೆಯುವ ಸಲಿಂಗ ಕಾಮ ಅಪರಾಧವಲ್ಲ ಎಂದು ಹೇಳಿತ್ತು. ಸುಪ್ರೀಂ ಕೋರ್ಟ್‌ನ ಈ ಒಂದು ತೀರ್ಪಿಗಾಗಿ ʼLGBTQʼ ಸಮುದಾಯಗಳು ಬಲವಾದ ಹೋರಾಟಗಳನ್ನು ಮಾಡಿದ್ದವು. ಸಲಿಂಗ ವಿವಾಹಗಳನ್ನು ಅಥವಾ ಅವರ ಹಕ್ಕುಗಳನ್ನು ಗುರುತಿಸಿದರೆ, ಕಾನೂನನ್ನು ಪುನಃ ತಿದ್ದಿ ಬರೆಯಬೇಕಾಗುತ್ತದೆ. ಹೊಸ ಸಾಮಾಜಿಕ ಸಂಸ್ಥೆಯ ರಚನೆ ಮಾಡಬೇಕಾಗುತ್ತದೆ.


ಸಮಾಜ ಒಪ್ಪಿರುವ ಗಂಡು ಮತ್ತು ಹೆಣ್ಣಿನ ಮದುವೆ ಎನ್ನುವುದರ ಮೇಲೆ ನಮ್ಮ ಇಡೀ ಸಮಾಜದ ಸಾಂಸಾರಿಕ ವ್ಯವಸ್ಥೆ ನಿಂತಿದೆ. ಗಂಡು-ಗಂಡು ಅಥವಾ ಹೆಣ್ಣು-ಹೆಣ್ಣು ವಿವಾಹದಿಂದ ಹಲವಾರು ಸಮಸ್ಯೆಗಳು, ಬಿಕ್ಕಟ್ಟುಗಳು ಸೃಷ್ಟಿಯಾಗುತ್ತವೆ. ಉದಾಹರಣೆಗೆ ಈ ರೀತಿಯ ವಿವಾಹಗಳಲ್ಲಿ ಆಸ್ತಿ ಹಂಚಿಕೆ ಹೇಗೆ, ಸಾಮಾಜಿಕ ಹೊಣೆಗಾರಿಕೆಯ ಸ್ವರೂಪ ಏನು ಎಂಬುದರ ಪ್ರಶ್ನೆ ಹುಟ್ಟಿಕೊಳ್ಳುತ್ತದೆ. ಒಂದು ವೇಳೆ ಇಂತಹ ಜೋಡಿಗಳಿಗೆ ಮಗು ಬೇಕೆಂದಾದರೆ ಮಗುವನ್ನು ಪಡೆಯುವ ಮತ್ತು ಬೆಳೆಸುವ ಹಕ್ಕು, ಹೊಣೆಗಾರಿಕೆಯ ಹಂಚಿಕೆಯನ್ನು ಹೇಗೆ ನಿರ್ಧರಿಸಬೇಕು. ಮಗುವಿನ ಕೆಲವು ದಾಖಲೆಗಳಲ್ಲಿ ತಂದೆ ಮತ್ತು ತಾಯಿಯ ಹೆಸರಿನ ಜಾಗದಲ್ಲಿ ಯಾರ ಹೆಸರನ್ನು ಎಲ್ಲಿ ನಮೂದಿಸಬೇಕು. ವಿವಾಹ ಪ್ರಮಾಣ ಪತ್ರದಲ್ಲಿ ಗಂಡ ಮತ್ತು ಹೆಂಡತಿಯ ಹೆಸರಿನ ಜಾಗದಲ್ಲಿ ಯಾರ ಹೆಸರನ್ನು ಗಂಡನ ಜಾಗದಲ್ಲಿ ಹಾಗೂ ಯಾರ ಹೆಸರನ್ನು ಹೆಂಡತಿಯ ಜಾಗದಲ್ಲಿ ಬರೆಯಬೇಕು. ಡಿವೋರ್ಸ್‌ ಅಗತ್ಯವಾದಾಗ ಅದರ ನಿರ್ಣಯವನ್ನು ಹೇಗೆ ತೆಗೆದುಕೊಳ್ಳಬೇಕು ಎಂಬುದೆಲ್ಲಾ ಸಲಿಂಗ ವಿವಾಹದಿಂದ ಸೃಷ್ಟಿಯಾಗುವ ಬಿಕ್ಕಟ್ಟುಗಳಾಗಿವೆ. ಸಲಿಂಗ ವಿವಾಹ ಎಂಬುದು ಭಾರತದಲ್ಲಿ ಒಂದು ಅಸಹಜ ವಿದ್ಯಮಾನ. ವಿವಾಹ ಎನ್ನುವುದು ಸಂಸ್ಕಾರ ಎಂಬ ನಂಬಿಕೆ ಇದೆ. ವಿವಾಹ ಸಂಬಂಧದಲ್ಲಿ ಜೊತೆಯಾಗಿ ಬಾಳುವುದು ತಮಗಾಗಿ ಮಾತ್ರವಲ್ಲ ಕುಟುಂಬಕ್ಕಾಗಿ ಮತ್ತು ಸ್ವಸ್ಥ ಸಮಾಜಕ್ಕಾಗಿ ಕೂಡ. ವಿವಾಹ ಎಂಬುದು ಹೊಣೆಗಾರಿಕೆಯೇ ಹೊರತು ದೈಹಿಕವಾಗಿ ಒಂದಾಗಲು ಇರುವ ಏಕೈಕ ಸಾಧನವಲ್ಲ. ಸಲಿಂಗ ವಿವಾಹದಿಂದ ನಮ್ಮ ಪರಂಪರಾಗತ ವಿವಾಹ ವ್ಯವಸ್ಥೆಯಲ್ಲಿ ಏರುಪೇರಾಗುತ್ತದೆ. ಇದರಿಂದ ಉದ್ದೇಶಪೂರ್ವಕವಾಗಿ ಬಹುತೇಕ ದೇಶಗಳು ಈ ರೀತಿಯ ವಿವಾಹಗಳ ಬಗ್ಗೆ ಯಾವುದೇ ರೀತಿಯ ತೀರ್ಮಾನಗಳನ್ನು ತೆಗೆದುಕೊಳ್ಳಲು ಮುಂದಾಗಿಲ್ಲ.
ಈ ಕಾರಣದಿಂದ, ಅಕ್ಟೋಬರ್‌ 17,2023 ರಂದು ಭಾರತದ ಸುಪ್ರೀಂ ಕೋರ್ಟ್‌, 1954ರ ವಿಶೇಷ ವಿವಾಹ ಕಾಯ್ದೆಯ ಅಡಿಯಲ್ಲಿ ಏಕಲಿಂಗಿಯ ವಿವಾಹವನ್ನು ನ್ಯಾಯಾಲಯವು ಗುರುತಿಸಲು ಸಾದ್ಯವಿಲ್ಲ ಎಂದು ಐತಿಹಾಸಿಕ ತೀರ್ಪು ಕೊಟ್ಟಿತ್ತು. ಐವರು ನ್ಯಾಯಾಧೀಶರ ಪೀಠವು ಏಕಮತದಿಂದ ಸಲಿಂಗ ವಿವಾಹವು ಮೂಲಭೂತ ಹಕ್ಕು ಅಲ್ಲ ಎಂದು ತೀರ್ಮಾನಿಸಿತು. ಹೆಚ್ಚಿನ ನ್ಯಾಯಾಧೀಶರು, ಏಕಲಿಂಗೀಯ ಬಾಂಧವ್ಯಗಳಿಗೆ ಕಾನೂನುಬದ್ಧತೆಯನ್ನು ನೀಡುವುದು ಕೇವಲ ಕಾನೂನು ರಚನೆಯ ಮೂಲಕವೇ ಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದರು. ಒಟ್ಟಾರೆಯಾಗಿ ಈ ವಿಷಯದ ಬಗ್ಗೆ ಕಾನೂನು ರೂಪಿಸುವ ಜವಾಬ್ದಾರಿ ಸಂಸತ್ತಿಗೆ ಬಿಟ್ಟಿದ್ದು, ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು.

ಹೇಮ ಎನ್‌.ಜೆ

ಆಲ್ಮಾ ಮೀಡಿಯಾ ಸ್ಕೂಲ್‌ ವಿದ್ಯಾರ್ಥಿನಿ

Show More

Leave a Reply

Your email address will not be published. Required fields are marked *

Related Articles

Back to top button